ಕಲಬುರಗಿ: ಮನಸ್ಸಿನಲ್ಲಿ ಹುದುಗಿದ ಭಾವಗಳು ಪಕ್ವಗೊಳ್ಳಬೇಕು. ಆಗ ಹುಟ್ಟಿದ ಪದಗಳು ಭಾವಪೂರ್ಣವಾಗಿ ನಾದಿದರೆ ಹದವಾದ ಕಾವ್ಯ ಹುಟ್ಟುತ್ತದೆ ಎಂದು ಹಿರಿಯ ಸಾಹಿತಿ ಡಾ. ಶ್ರೀಶೈಲ ನಾಗರಾಳ ಹೇಳಿದರು.
ನಗರದ ಕನ್ನಡ ಭವನದಲ್ಲಿ ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ ದಸರಾ ಕಾವ್ಯ ಸಂಭ್ರಮದಲ್ಲಿ ಮಹಿಳ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾವು ಮನಸ್ಸಿನ ಭಾವನೆಗಳು ಅರಳಿದಾಗಲೇ ಕಾವ್ಯ ರಚಿಸಬೇಕು. ಅದು ಮುಂದೆ ಜನರ ಕಾವ್ಯವಾಗುತ್ತದೆ. ಕಾವ್ಯ ಅಸ್ವಾದಿಸುವ ಮನಸ್ಸು ಹೊಂದಿರಬೇಕು. ಪರಿಷತ್ ಅಡಿಯಲ್ಲಿ ದಸರಾ ಕಾವ್ಯ ಸಂಭ್ರಮ ಏರ್ಪಡಿಸಿ ವಿಶೇಷ ಮಹಿಳಾ ಕವಿಗೋಷ್ಠಿ ಕಾರ್ಯಕ್ರಮ ಏರ್ಪಡಿಸಿರುವುದು ಹೆಮ್ಮೆ ಪಡುವಂತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕವಿಯಾದವನಿಗೆ ಸತತ ಅಭ್ಯಾಸ, ಈ ಸಮಾಜವನ್ನು ನೋಡುವ ಸೂಕ್ಷö್ಮ ದೃಷ್ಟಿಕೋನ ಇರಬೇಕು. ಕಲಬುರಗಿ ಜಿಲ್ಲೆಯಲ್ಲಿ ಕಾವ್ಯ ಪರಂಪರೆ ಗಟ್ಟಿಯಾಗಿದೆ. ಈ ಭಾಗದ ಪ್ರತಿ ಹಳ್ಳಿಯಲ್ಲಿ ತತ್ವಪದ, ವಚನ ಸಾಹಿತ್ಯ, ಸೂಫಿ ಸಾಹಿತ್ಯವನ್ನು ಆಲಿಸುವ ಮತ್ತು ರಕ್ಷಿಸುವ ಕಾರ್ಯ ಮಾಡುತ್ತಿದ್ದಾರೆ. ವಾಸ್ತವಿಕ ನೆಲೆಗಟ್ಟಿನಲ್ಲಿ ನಿಂತು ಒಬ್ಬ ಕವಿ ಕವನ ರಚಿಸಬೇಕಾಗಿದೆ ಎಂದರು.
ನoತರ ನಡೆದ ಕವಿಗೋಷ್ಟಿಯಲ್ಲಿ ಮಳೆರಾಯ ನೀ ಸುರಿಯುವ ರಭಸಕ್ಕೆ ಭೂಮಿ ಕಂಪಿಸಿತು ಎಂಬ ಕವಯತ್ರಿ ಪಲ್ಲವಿ ಕುಲಕರ್ಣಿ ಅವರ ಕವನದ ಸಾಲುಗಳು ಮಳೆ ಹನಿ ಕುರಿತು ಬೆಳಕು ಚೆಲ್ಲಿತು. ಸುಖದೇವಿ ಘಂಟೆ ಅವರು ರೈತರ ಸಂಕಷ್ಟಗಳನ್ನು ತಮ್ಮ ಕಾವ್ಯದ ಮೂಲಕ ಎಳೆ ಎಳೆಯಾಗಿ ಬಿಚ್ಚಿಟ್ಟರು. ಜಯಶ್ರಿ ಜಮಾದಾರ ಹಾಗೂ ಶೀಲಾದೇವಿ ಬಿರಾದಾರ ಅವರು ನೆರೆ ಹಾವಳಿಯ ಬಗ್ಗೆ ವಾಚಿಸಿದ ಕವನಗಳು ಗಮನ ಸೆಳೆದವು. ಕವಯತ್ರಿಯರಾದ ಮಲ್ಲಮ್ಮ ಕಾಳಗಿ, ಶಕುಂತಲಾ ಪಾಟೀಲ, ಸ್ವಾತಿ ಕೋಬಾಳ, ಡಾ. ಕರುಣಾ ಜಮದರಖಾನಿ, ಲಕ್ಷಿö್ಮÃದೇವಿ ರತ್ನಾಗಿರಿ, ಗಂಗಮ್ಮ ನಾಲವಾರ, ಪ್ರಿಯಾಂಕಾ ಪಾಟೀಲ, ಕವಿತಾ ಕಾವಳೆ, ಅಶ್ವಿನಿ ಎಂ ಪಾಟೀಲ ಅವರುಗಳು ಪ್ರಚಲಿತ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲಿದರು.
ಜಿಪಂ ನ ಮಾಜಿ ಉಪಾಧ್ಯಕ್ಷೆ ಶೋಭಾ ಸಿದ್ಧು ಸಿರಸಗಿ ಕಾರ್ಯಕ್ರಮ ಉದ್ಘಾಟಿಸಿ, ನವರಾತ್ರಿ ಸಂದರ್ಭದಲ್ಲಿ ಮಹಿಳೆಯರು ಧಾರ್ಮಿಕ ಭಕ್ತಿ ಪರಂಪರೆ ಹಾಗೂ ದೇವಿ ಆಋಆಧನೆಯಲ್ಲಿ ತೊಡಗಿರುತ್ತಾರೆ. ಇದರ ಜತೆಗೆ ಮಹಿಳೆಯರಿಗೆ ಕಾವ್ಯ ವಾಚನ ಮಾಡುವ ಮೂಲಕ ಅವರಿಗೆ ಸೂಕ್ತ ಅವಕಾಶ ನೀರುವುದು ಸ್ತುತ್ಯ ಕಾರ್ಯ ಎಂದು ಮನದುಂಬಿ ಹೇಳಿದರು.
ಎಂ.ಎಸ್.ಐ. ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ. ಮೈತ್ರಾದೇವಿ ಹಳೇಮನಿ, ಅಖಿಲ ಕರ್ನಾಟಕ ದಲಿತ ಸೇನೆಯ ರಾಜ್ಯಾಧ್ಯಕ್ಷ ದತ್ತಾತ್ರೇಯ ಕುಡಕಿ, ಜನಪರ ಹೋರಾಟಗಾರ ರವಿ ಮದನಕರ್, ಜಿಲ್ಲಾ ಕಸಾಪ ದ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೇಂದ್ರ ಕಸಾಪ ಪ್ರತಿನಿಧಿ ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ರಾಜೇಂದ್ರ ಮಾಡಬೂಳ, ಧರ್ಮರಾಜ ಜವಳಿ, ಅಮೃತಪ್ಪ ಅಣೂರ, ನವಾಬ ಖಾನ್, ಡಾ. ರೆಹಮಾನ್ ಪಟೇಲ್, ಶಿವಾನಂದ ಸುರವಸೆ, ರಮೇಶ ಬಡಿಗೇರ ವೇದಿಕೆ ಮೇಲಿದ್ದರು.


