ಕಲಬುರಗಿ: ಮಹಾರಾಷ್ಟ್ರದ ವೀರ್, ಉಜನಿ, ಸಿನಾ ಜಲಾಶಯ ಹಾಗೂ ಬೋರಿ ನದಿಯಿಂದ ಒಟ್ಟಾರೆ 2.50 ಲಕ್ಣ ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಗುರುವಾರ ಸಂಜೆ ಹೊತ್ತಿಗೆ ಜಿಲ್ಲೆಯ ಅಫಜಲಪೂರ ತಾಲೂಕಿನ ಸೊನ್ನ ಬ್ಯಾರೇಜಿಗೆ ತಲುಪಿ ಅಲ್ಲಿಂದ ಒಳ ಹರಿವಿನಂತೆ ಹೊರ ಹರಿವು ಹೆಚ್ಚಲಿದ್ದು, ನದಿ ದಂಡೆಯ ಗ್ರಾಮಸ್ಥರು ಎಚ್ಚರಿಕೆಯಿಂದಿರಲು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಕಳೆದ ಶನಿವಾರ, ರವಿವಾರ ಒಂದೆಡೆ ಸತತ ಮಳೆಯಾದರೆ, ಇನ್ನೊಂದೆಡೆ ಭೀಮಾ ನದಿಗೆ ನೆರೆಯ ರಾಜ್ಯದಿಂದ ಅಪಾರ ಪ್ರಮಾಣದಿಂದ ನೀರು ಹರಿಬಿಟ್ಟ ಪ್ರಮಾಣ ಪ್ರವಾಹದ ಪರಿಸ್ಥಿತಿ ಎದುರಾಗಿದೆ. ಮಾನವ ಹಾನಿ ಮತ್ತು ಪ್ರಾಣಿ ಹಾನಿ ತಡೆಯಲು ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಪ್ರವಾಹ ಪೀಡಿತ ಪ್ರದೇಶಕ್ಕೆ ನಿಯೋಜಿಸಲಾಗಿದೆ ಎಂದಿದ್ದಾರೆ.
2025ರ ಜನವರಿಯಿಂದ ಸೆಪ್ಟೆಂಬರ್ ವರೆಗೆ ವಾಡಿಕೆಯಂತೆ ಜಿಲ್ಲೆಯಲ್ಲಿ 609 ಮಿ.ಮಿ ಮಳೆ ಬರಬೇಕಾಗಿತ್ತು. ಅದರೇ ಶೇ.48ರಷ್ಟು ಹೆಚ್ಚರಿಯೊಂದಿಗೆ 900 ಮಿ.ಮಿ. ಮಳೆಯಾಗಿದೆ. ಅದೇ ರೀತಿ ಆಗಸ್ಟ್ ಮಾಹೆಯಲ್ಲಿ ವಾಡಿಕೆಯ ಮಳೆಗ್ಗಿಂತ ಶೇ.69 ಹೆಚ್ಚುವರಿ ಮಳೆಯಾಗಿದೆ. ಸೆಪ್ಟೆಂಬರ್ ಮಾಹೆಯಲ್ಲಿ ಇದೂವರೆಗೆ 241 ಮಿ.ಮಿ ಮಳೆಯಾಗಿದ್ದು, ಇದು ಸಹ ಶೇ.43 ಹೆಚ್ಚಿದೆ. ಬೆಳೆ ಹಾನಿಗೆ ಇದುವೆ ಪ್ರಮುಖ ಕಾರಣವಾಗಿದೆ ಎಂದರು.
ಸತತ ಮಳೆಯಿಂದ ಆಗಸ್ಟ್ ಮಾಹೆಯಲ್ಲಿ 1.05 ಲಕ್ಷ ಹೆಕ್ಟೇರ್ ಬೆಳೆ ಹಾನಿ ಅಂದಾಜಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಸೆಪ್ಟೆಂಬರ್ ಮಾಹೆಯಲ್ಲಿ ಸತತ ಮಳೆಯಾಗುತ್ತಿದ್ದು, ಬೆಳೆ ಹಾನಿ ಜಂಟಿ ಸಮೀಕ್ಷೆಗೆ ಅಡ್ಡಿಯಾಗಿದೆ. ಇದೂವರೆಗೆ 7 ತಾಲೂಕಿನ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು, ಇನ್ನೆರಡು ದಿನದಲ್ಲಿ ಉಳಿದ 4 ತಾಲೂಕಿನ ವರದಿ ಸೇರಿದಂತೆ ಒಟ್ಟಾರೆ ಬೆಳೆ ಹಾನಿ ವರದಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದ ಡಿ.ಸಿ. ಅವರು, 2025ರ ಮುಂಗಾರು ಹಂಗಾಮಿನಲ್ಲಿ 3.01 ಲಕ್ಷ ರೈತರು ಬೆಳೆ ವಿಮೆ ನೋಂದಣಿ ಮಾಡಿಸಿದ್ದು, ಇದರಲ್ಲಿ 1.78 ಲಕ್ಷ ಸ್ಥಳೀಯ ವಿಕೋಪದಡಿ ದೂರು ಸಲ್ಲಿಸಿದ್ದು, ಶೀಘ್ರದಲ್ಲಿಯೆ ಬೆಳೆ ಹಾನಿ ಪರಿಹಾರ ಒದಗಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
90 ಕಾಳಜಿ ಕೇಂದ್ರ,40 ಗೋಶಾಲೆ ತೆರೆಯಲು ಗುರುತು:
ಭೀಮೆ ಉಕ್ಕಿ ಹರಿದು ಪ್ರವಾಹದ ಭೀತಿ ಸೃಷ್ಟಿಸಿದಲ್ಲಿ ನದಿ ದಂಡೆಯ ಗ್ರಾಮಸ್ಥರನ್ನು ಸ್ಥಳಾಂತರಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸಮಸ್ಯಾತ್ಮಕ 153 ಗ್ರಾಮಗಳ ಪೈಕಿ 90 ಕಡೆ ಕಾಳಜಿ ಕೇಂದ್ರ ತೆರೆಯಲು ಈಗಾಗಲೆ ಗುರುತಿಸಿದ್ದು, ಈಗಾಗಲೆ 7 ಕಾಳಜಿ ಕೇಂದ್ರ ತೆರೆಯಲಾಗಿದೆ. ಇದಲ್ಲದೆ ಪ್ರಾಣಿಗಳಿಗಾಗಿ ತಾತ್ಕಲಿಕ 40 ಗೋಶಾಲೆ ಸಹ ತೆರೆಯಲು ಸಿದ್ಧತೆ ಮಾಡಿಕೊಳ್ಖಲಾಗಿದೆ ಡಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ತ್ವರಿತ ಪರಿಹಾರ ಬಿಡುಗಡೆ:
ಪ್ರಸಕ್ತ 2025-26ನೇ ಸಾಲಿನಲ್ಲಿ ಸಿಡಿಲು, ಮನೆ ಕುಸಿತ ಹಾಗೂ ನೀರಿನಲ್ಲಿ ಕೊಚ್ಚಿಹೋದ ಪ್ರಕರಣಗಳಲ್ಲಿ 8 ಜನ ಮೃತರಾಗಿದ್ದು, ತಲಾ 5 ಲಕ್ಷ ರೂ. ಸೇರಿದಂತೆ 40 ಲಕ್ಷ ರೂ. ಪರಿಹಾರ ಸಂತ್ರಸ್ತರ ಕುಟುಂಬಸ್ಥರಿಗೆ ತ್ವರಿತವಾಗಿ ನೀಡಲಾಗಿದೆ. ಇದಲ್ಲದೆ 103 ಪ್ರಾಣಿಗಳ ಜೀವ ಹಾನಿಯಾಗಿದ್ದು 18 ಲಕ್ಷ ರೂ. ಪರಿಹಾರ ಒದಗಿಸಿದೆ. 753 ಭಾಗಶ: ಮನೆ ಹಾನಿಯಾಗಿದ್ದಕ್ಕೆ 53.67 ಲಕ್ಷ ರೂ. ಮತ್ತು ಮನೆಗೆ ನೀರು ನುಗ್ಗಿ ಮನೆ ದಿನಸಿ ಸೇರಿದಂತಡ ಗೃಹಪಯೋಗಿ ಬಳಕೆಯ ಹಾನಿಗೆ 84.60 ಲಕ್ಷ ರೂ. ಪರಿಹಾರ ನೀಡಲಾಗಿದೆ. ಪ್ರಕೃತಿ ವಿಕೋಪದಲ್ಲಿನ ಕೆಲಸ ಕಾರ್ಯಗಳಿಗೆ ಯಾವುದೇ ಅನುದಾನದ ಕೊರತೆ ಇಲ್ಲ. ತಹಶೀಲ್ದಾರರಿಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಡಿ.ಸಿ. ಸ್ಪಷ್ಟಪಡಿಸಿದರು.
ನದಿ ದಂಡೆಗೆ ಹೋಗದಿರಿ:
ಪ್ರವಾಹ ಪರಿಸ್ಥಿತಿಯ ಇಂತಹ ಸಂದರ್ಭದಲ್ಲಿ ಯಾರು ದುಸ್ಸಾಹಸಕ್ಕೆ ಕೈಹಾಕಬಾರದು. ನದಿಯಲ್ಲಿ ಈಜುವುದಾಗಲಿ, ಸೆಲ್ಫಿ ತೆಗದುಕೊಳ್ಳುವುದಾಗಲಿ ಮಾಡಬಾರದು. ನದಿ ದಂಡೆಗೆ ಬಟ್ಟೆ ಒಗೆಯಲು, ಕುರಿ-ಆಕಲು ಮೇಯಿಸಲು, ಮೀನುಗಾರರು ಮಿನು ಹಿಡಿಯಲು ಹೋಗಬಾರದು. ಅಪಾಯವಿರುವ ಸೇತುವೆ ಮೇಲೆ ಸಂಚರಿಸಬಾರದು. ಪ್ರವಾಸಿಗರು ಪ್ರವಾಸ ಮುಂದೂಡುವುದು ಒಳ್ಳೆಯದು ಎಂದು ಡಿ.ಸಿ. ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ದಾರೆ.


