ಕಲಬುರಗಿ: ಹಿಂದು ಮಹಾಗಣಪತಿ ಸಮಿತಿಯಿಂದ ನಗರದ ಐತಿಹಾಸಿಕ ಕೋಟೆಯ ಮುಂಭಾಗದಲ್ಲಿ ೨೧ ದಿನಗಳ ಕಾಲ ಪ್ರತಿಷ್ಟಾಪನೆ ಮಾಡಲಾಗಿದ್ದ ಹಿಂದು ಮಹಾಗಣಪತಿಗೆ ಮಂಗಳವಾರ ಬೆಳಗ್ಗೆ ಜಿಲ್ಲೆಯ ಮಠಾಧೀಶರ,ಸಮಿತಿಯ ಪದಾಧಿಕಾರಿ, ಗಣ್ಯರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿ,ಅದ್ಧೂರಿ ಶೋಭಾಯಾತ್ರೆ ನಡೆಸುವ ಮೂಲಕ ನಗರದ ಶರಣಬಸವೇಶ್ವರರ ಅಪ್ಪನ ಕೆರೆಯಲ್ಲಿ ವಿಧಿವತ್ತಾಗಿ ಹಿಂದು ಮಹಾಗಣಪತಿಯ ವಿಸರ್ಜನಾ ಕಾರ್ಯಕ್ರಮ ನೆರವೇರಿತು.
ನಗರದ ಕೋಟೆಯ ಮುಂಭಾಗದಿಂದ ಹೊರಟ ಅದ್ಧೂರಿ ಶೋಭಾಯಾತ್ರೆಯೂ ನಗರದ ಪ್ರಕಾಶ್ ಏಶಿಯನ್ ಮಾಲ್, ಹುಮನಾಬಾದ್ ಬೇಸ್, ಚೌಕ್ ಪೋಲಿಸ್ ಠಾಣೆ,ಸುಪರ್ ಮಾರ್ಕೇಟ್, ಜಗತ್ ವೃತ್ತ,ಸಂಗೋಳ್ಳಿ ರಾಯಣ್ಣನ ವೃತ್ತದಿಂದ ಅಪ್ಪನ ಕೆರೆಯಲ್ಲಿ ವಿಸರ್ಜನಾ ಕಾರ್ಯಕ್ರಮದೊಂದಿಗೆ ಸಂಪನ್ನಗೊಂಡಿತು.
ಹಿಂದು ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶೋಭಾಯಾತ್ರೆಗೆ ಶ್ರೀನಿವಾಸ ಸರಡಗಿಯ ಶಕ್ತಿ ಪೀಠದ ಅಪ್ಪಾರಾವ ದೇವಿ ಮುತ್ಯಾ, ಸಾವಳಗಿಯ ಶಾಂತಲಿಂಗೇಶ್ವರ ಶ್ರೀಗಳು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಲಬುರಗಿ ವಿಭಾಗ ಪ್ರಚಾರಕ ವಿಜಯ್ ಮಹಾಂತೇಶ, ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್,ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ್,ಹಿಂದು ಮಹಾಗಣಪತಿ ಸಮಿತಿಯ ಸಂಜೀವ್ ಗುಪ್ತಾ, ಗೌರವಾಧ್ಯಕ್ಷ ಮಲ್ಲಿಕಾರ್ಜುನ ಗಂಗಾ, ಸುರೇಶ್ ಟೆಂಗಳಿ,ಕಾರ್ಯದರ್ಶಿ ಶ್ರೀಮಂತ ರಾಜು ನವಲದಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಮಿತಿಯ ಸಹ ಕಾರ್ಯದರ್ಶಿ ಸುಮಂಗಲಾ ಚಕ್ರವರ್ತಿ,ಉಪಾಧ್ಯಕ್ಷ,ಕೆಕೆಸಿಸಿಐ ಅಧ್ಯಕ್ಷ ಶರಣು ಪಪ್ಪಾ,ಜಗದೀಶ್ ಕಟ್ಟಿಮನಿ, ಸಿದ್ದರಾಜ ಬಿರಾದಾರ್, ಸಹ ಕಾರ್ಯದರ್ಶಿ ಸಂತೋಷ್ ಕಾಮತ್,ಡಾ. ಚರಣ ಹೊನ್ನಳ್ಳಿ, ಕೋಶಾಧ್ಯಕ್ಷ ಶ್ರೀಶೈಲ ಮೂಲಗೆ, ಸದಸ್ಯರಾದ ಸಿದ್ಧಯ್ಯ ಸ್ವಾಮಿ,ನಾಗಯ್ಯ ಸ್ವಾಮಿ,ದೀಪಕ್ ಪವಾರ್, ಸಂಜು ರೇವಣಕರ್, ಶಿವರಾಜ್ ಸಂಗೋಳಗಿ,ಅಶ್ವಿನ್ ಕುಮಾರ್, ಪ್ರಶಾಂತ್ ಗುಡ್ಡಾ, ಪಾಲಿಕೆ ಸದಸ್ಯ ಸಚಿನ್ ಕಡಗಂಚಿ,ದಿಗಂಬರ ಮಾಗಣಗೇರಿ, ಶಿವರಾಜ್ ಪಾಟೀಲ್ ರದ್ದೇವಾಡಗಿ, ಉದ್ಯಮಿ ಗಿರಿರಾಜ್ ಯಳಮೇಲಿ,ಆನಂದ ಪಾಟೀಲ್, ಸಂತೋಷ ಹಾದಿಮನಿ,ಮಲ್ಲು ಉದನೂರ ಸೇರಿದಂತೆ ಸಾವಿರಾರು ಮಂದಿ ಶೋಭಾಯಾತ್ರೆಗೆ ಸಾಕ್ಷಿಯಾದರು.
ಶೋಭಾಯಾತ್ರೆಗೆ ದೇಶಿವಾದ್ಯಗಳ ಮೆರುಗು:
ಹಿಂದು ಮಹಾಗಣಪತಿಯ ಅದ್ಧೂರಿ ಶೋಭಾಯಾತ್ರೆಗೆ ದೇಶಿ ವಾದ್ಯಗಳಾದ ನಾಸಿಕ್ ಡೋಲು,ಪರಳಿಯ ಡೋಲ್ ತಾಷಾ,ಸಿಂದಗಿ ಚಿಟ್ಟಲಗಿ, ಸ್ಥಳೀಯ ಡೋಳ್ಳು,ಹಲಗಿ ಶೋಭಾಯಾತ್ರೆಗೆ ಮತ್ತಷ್ಟು ಕಳೆ ತಂದಿದ್ದು, ಶೋಭಾಯಾತ್ರೆಯಲ್ಲಿ ಡಿಜೆ ಧ್ವನಿವರ್ಧಕದ ಮುಂದೆ ಯುವಕರು ಕುಣಿದು ಕುಪ್ಪಳಿಸಿ ಗಣೇಶನಿಗೆ ಭಕ್ತಿ ಸಮರ್ಪಿಸಿದರು.ಶೋಭಾಯಾತ್ರೆಯ ದಾರಿಯಲ್ಲಿ ಅಲ್ಲಲ್ಲಿ ಭಕ್ತರಿಗೆ ಕುಡಿಯುವ ನೀರಿನ,ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಸಾವರ್ಕರ್, ಗೋಡ್ಸೆ, ಲಾರೆನ್ಸ್ ಚಿತ್ರ ಪ್ರದರ್ಶನ:
ಹಿಂದು ಮಹಾಗಣಪತಿಯ ಶೋಭಾಯಾತ್ರೆ ವೇಳೆ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ,ಕರಿ ನೀರಿನ ವೀರ ವಿನಾಯಕ ದಾಮೋದರ ಸಾವರ್ಕರ್, ನಾಥೂರಾಮ ಗೋಡ್ಸೆ ಹಾಗೂ ಲಾರೆನ್ಸ್ ಭಾವಚಿತ್ರ ಪೋಟೋ ಹಿಡಿದು ಅಭಿಮಾನಿಯೊಬ್ಬ ಶೋಭಾಯಾತ್ರೆಯಲ್ಲಿ ಎಲ್ಲರ ಗಮನ ಸೆಳೆದನು. 21 ದಿನಗಳ ಕಾಲ ಕೋಟೆಯ ಮುಂಭಾಗದಲ್ಲಿ ಪ್ರತಿಷ್ಟಾಪನೆ ಮಾಡಿದ ಹಿಂದು ಮಹಾಗಣಪತಿ ಅದ್ಧೂರಿ ಶೋಭಾಯಾತ್ರೆಯಲ್ಲಿ ಮುಸ್ಲಿಂ ಬಾಂಧವರು ಭಾಗಿಯಾಗುವ ಮೂಲಕ ಭಾವೈಕ್ಯತೆಗೆ ಮೆರೆದರು.


