ಕಲಬುರಗಿ : ಕನ್ನಡ ನಾಡು-ನುಡಿ ಮತ್ತು ಸಂಸ್ಕೃತಿಯ ಅಭಿವೃದ್ಧಿಗೆ ಸರಕಾರಿ ನೌಕರರ ಸೇವೆ ಅನನ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.
ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ರವಿವಾರ ಏರ್ಪಡಿಸಿದ ಸಮಾರಂಭದಲ್ಲಿ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಹಾಗೂ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ರಮೇಶ ಸಂಗಾ ಅವರಿಗೆ ಸ್ವರ್ಣ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಪ್ರಾಚೀನ ಭಾಷೆಯಾದ ಕನ್ನಡಕ್ಕೆ ವಿಶೇಷ ಸ್ಥಾನಮಾನ ಹೊಂದಿದೆ. ನಮ್ಮ ಮಾತೃ ಭಾಷೆಯನ್ನು ಕಲಿತು ಅನ್ಯ ಭಾಷೆಯನ್ನು ಪ್ರೀತಿಸಿ ಗೌರವಿಸಬೇಕು. ಇಂದು ಕನ್ನಡ ಸಾಹಿತ್ಯ ಪರಿಷತ್ತಿಗೆ ಶೇಕಡಾ 50 ರಷ್ಟು ಜನ ಸರಕಾರಿ ನೌಕರರು ಸದಸ್ಯರಾಗಿದ್ದಾರೆ. ಹೀಗಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ನಮ್ಮ ಸರಕಾರಿ ನೌಕರರು ತಮ್ಮ ಒಂದು ದಿನದ ವೇತನ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಸರಕಾರಿ ನೌಕರರ ಗಡಿ ನಾಡ ಕನ್ನಡ ಉತ್ಸವ ಮಾಡಬೇಕೆಂಬ ಬೇಡಿಕೆಗೆ ಸ್ಪಂದಿಸಿದ ಅವರು, ಬರುವ ದಿನಗಳಲ್ಲಿ ಉತ್ಸವ ನಡೆಸಲು ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ, ಅನ್ಯ ಭಾಷೆ ದ್ವೇಷಿಸುವವರಿಗೆ ಪ್ರೀತಿ ತೋರಬೇಕು. ಇಂಥ ಸಾಹಿತ್ಯದ ಸಾಮರಸ್ಯ ಬೆರೆಸಬೇಕಾಗಿದೆ. ಕರ್ನಾಟಕ ರಾಜ್ಯದ ಸಾಧಕರ ಪ್ರೀತಿ ಮತ್ತು ಕಾಳಜಿ ನೌಕರರಲ್ಲಿರುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉತ್ತಮ ಕಾರ್ಯ ಮಾಡುತ್ತಿದೆ ಎಂದರು. ಪ್ರೀತಿ ಮತ್ತು ದ್ವೇಷ ಇದ್ದಾಗಲೇ ಸಾಹಿತ್ಯ ಸೃಷ್ಟಿಯಾಗಲು ಕಾರಣವಾಗುತ್ತದೆ ಎಂದರು.
ಕರ್ನಾಟಕ ಸರ್ಕಾರದ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ರಮೇಶ ಸಂಗಾ ಮಾತನಾಡಿ, ಕಲೆ, ಸಾಹಿತ್ಯ, ಸಂಗೀತಗಳಿಗೆ ಸರಕಾರಿ ನೌಕರರು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಇಂದು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ನೌಕರರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಸಾಮಾಜಿಕ ಜವಾಬ್ದಾರಿಯೊಂದಿಗೆ ಸೇವಾ ಕಾರ್ಯ-ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸರಕಾರಿ ನೌಕರರು ಪರಿವರ್ತನೆಗೆ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ನಮ್ಮ ಕನ್ನಡ ಆಡಳಿತ ಭಾಷೆ ಎಂಬುದನ್ನು ಹಿರಿಮೆಯಿಂದ ಮತ್ತು ಹೆಮ್ಮೆಯಿಂದ ಸರಕಾರಿ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಹೊಸ ಪೀಳಿಗೆಗೆ ನಮ್ಮ ಮಾತೃಭಾಷೆಯನ್ನು ಕಲಿಸಿ ಭವಿಷ್ಯದಲ್ಲಿ ಬೆಳೆಸುವ ಕಾರ್ಯ ಒಬ್ಬ ಸರ್ಕಾರಿ ಶಿಕ್ಷಕ ಮಾಡುತ್ತಿರುತ್ತಾನೆ. ಇಂದು ಪ್ರತಿಯೊಬ್ಬರೂ ಕನ್ನಡವನ್ನು ಕಲಿತು ಬಳಸಿ ಬೆಳೆಸುತ್ತೇವೆಂಬ ಛಲ ತೊಡಬೇಕಾಗಿದೆ ಎಂದ ಅವರು, ಪರಿಷತ್ತು ರಚನಾತ್ಮಕ ಕಾರ್ಯಗಳ ಮೂಲಕ ಕನ್ನಡ ಕಟ್ಟುವ ಕಾಯಕ ಪ್ರಾಮಾಣಿಕವಾಗಿ ಮಾಡುತ್ತಿದೆ ಎಂದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳೂಂಡಗಿ, ರಾಜ್ಯ ಪರಿಷತ್ ಸದಸ್ಯ ಧರ್ಮರಾಜ ಜವಳಿ, ಸರಕಾರಿ ನೌಕರರ ಸಂಘದ ರಾಜ್ಯ ಸಮಿತಿಯ ಗಿರಿಗೌಡ ಹೆಚ್., ಎಸ್ ಬಸವರಾಜು, ಮಲ್ಲಿಕಾರ್ಜುನ ಬಳ್ಳಾರಿ, ಜಿಲ್ಲಾ ಸಮಿತಿಯ ಮಹೇಶ ಹೂಗಾರ, ಚಂದ್ರಕಾoತ ಏರಿ, ನಿಜಲಿಂಗಪ್ಪ ಕೊರಳ್ಳಿ, ಎಂ.ಬಿ. ಪಾಟೀಲ, ಸುರೇಶ ವಗ್ಗೆ, ಸಿದ್ಧಲಿಂಗ ಬಾಳಿ, ರವೀಂದ್ರಕುಮರ ಭಂಟನಳ್ಳಿ, ಶಿವರಾಜ ಅಂಡಗಿ, ಧರ್ಮಣ್ಣ ಹೆಚ್ ಧನ್ನಿ, ಶರಣರಾಜ ಛಪ್ಪರಬಂದಿ, ರಾಜೇಂದ್ರ ಮಾಡಬೂಳ, ಶಕುಂತಲಾ ಪಾಟೀಲ ಇತರರು ವೇದಿಕೆ ಮೇಲಿದ್ದರು.


