ಕಲಬುರಗಿ: 2024-25 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ರೂ 656.62 ಕೋಟಿ ಪರಿಹಾರ ಬಿಡುಗಡೆಯಾಗಿತ್ತು. ಅದರಲ್ಲಿ ಮೊದಲ ಕಂತಿನ ಪರಿಹಾರವಾಗಿ ರೂ 364.70 ಕೋಟಿ ಈಗಾಗಲೇ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿತ್ತು. ಬಾಕಿ ಉಳಿದಿದ್ದ ರೂ 291.92 ಕೋಟಿ ಆರ್ಥಿಕ ಇಲಾಖೆಯಿಂದ ಬಿಡುಗಡೆಯಾಗಿದ್ದು, ಮುಂದಿನ ವಾರ ಬೆಳೆವಿಮೆ ಪರಿಹಾರ ರೈತರ ಬ್ಯಾಂಕ್ ಖಾತೆಗೆ ಜಮಾವಣೆಯಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕಲಬುರಗಿ ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮನದನು ಭೇಟಿಯಾದ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಯೋಜನೆಯಡಿ ತೊಗರಿ, ಹೆಸರು, ಉದ್ದು, ಹತ್ತಿ. ಸೋಯಾ ಅವರೆ ಹಾಗೂ ಇತರೆ ಬೆಳೆಗಳಿಗೆ ಜಿಲ್ಲೆಯಲ್ಲಿ ಒಟ್ಟು 2.04 ಲಕ್ಷ ರೈತರು ಬೆಳೆ ವಿಮೆ ನೋಂದಣಿ ಮಾಡಿಸಿರುತ್ತಾರೆ.ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಶ್ರಮ ಹಾಗೂ ಸರ್ಕಾರದ ಕಾಳಜಿಯಿಂದಾಗಿ ರೈತರು ವಿಮೆ ಮಾಡಿಸಿದ್ದಾರೆ ಎಂದರು.
ಬೆಳೆ ವಿಮೆ ಮಾಡಿಸಿದ 2.04 ಲಕ್ಷ ರೈತರಿಗೆ ಒಟ್ಟು ರೂ. 656.62 ಕೋಟಿ ಬೆಳೆ ವಿಮೆ ಮಂಜೂರಾಗಿರುತ್ತದೆ. ಇದರಲ್ಲಿ ಮೊದಲನೆಯ ಕಂತು ಒಟ್ಟು ರೂ.364.70 ಕೋಟಿ ಈಗಾಗಲೇ ರೈತರ ಬ್ಯಾಂಕ ಖಾತೆಗೆ ನೇರ ನಗದು ವರ್ಗಾವಣೆ (DBT) ಮೂಲಕ ವರ್ಗಾವಣೆ ಮಾಡಲಾಗಿರುತ್ತದೆ. ಬಾಕಿ ಉಳಿದಿದ್ದ ರೂ 291.92 ಕೋಟಿ ವಿಮೆ ಪರಿಹಾರ ಇದೀಗ ಬಿಡುಗಡೆಯಾಗಿದ್ದು ಮುಂದಿನವಾರ ರೈತರ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ ಎಂದರು.
ಯಾದಗಿರಿ, ಶಿವಮೊಗ್ಗ ಜಿಲ್ಲೆ ಸೇರಿದಂತೆ ಬೇರೆ ಜಿಲ್ಲೆಗಳಿಗೆ ಬೆಳೆ ವಿಮೆಪರಿಹಾರ ಸಿಕ್ಕಿಲ್ಲ. ಆದರೆ ಕಲಬುರಗಿ ಜಿಲ್ಲೆಗೆ ರೂ 656 ಕೋಟಿ ಪರಿಹಾರ ಸಿಕ್ಕಿದೆ ಎಂದ ಸಚಿವರು, ಬೆಳೆ ವಿಮೆ ಮಾಡಿಸದ ರೈತರಿಗೂ ಕೂಡಾ ಪರಿಹಾರ ದೊರಕಿಸಿಕೊಡಲು ಪ್ರಸ್ತಾಪ ಮಾಡಲಾಗಿದೆ ಎಂದರು.
*1.05 ಲಕ್ಷ ಹೆಕ್ಟೇರ್ ಬೆಳೆ ಹಾನಿ*
ಇತ್ತೀಚಿಗೆ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ 1.05 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ. ತೊಗರಿ, ಉದ್ದು, ಹತ್ತಿ, ಬಾಳೆಸೇರಿದಂತೆ ಇತರೆ ಬೆಳೆ ಹಾನಿಯಾಗಿರುವುದು ಪ್ರಾಥಮಿಕ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಹೋಬಳಿವಾರು ಸಮೀಕ್ಷೆ ನಡೆಸುವಂತೆ ನಿರ್ದೇಶನ ನೀಡಲಾಗಿದೆ. ಇನ್ನೂ ಹತ್ತು ದಿನದಲ್ಲಿ ತಾಲೂಕು, ಹೋಬಳಿ ಮಟ್ಟದಲ್ಲಿ ಸರಿಯಾದ ಮಾಹಿತಿ ಪಡೆದು ನಂತರ ಕಂದಾಯ ಇಲಾಖೆಯಿಂದ ಪರಿಹಾರ ಪೋರ್ಟಲ್‌ನಲ್ಲಿ ದಾಖಲು ಮಾಡಲಾಗುವುದು. ಹಾಗಾಗಿ ರೈತರು ಬೆಳೆ ಹಾನಿ ಬಗ್ಗೆ ಮಾಹಿತಿ ನೀಡುವಂತೆ ಸಚಿವರು ಕೋರಿದರು.
ಕೇಂದ್ರದಲ್ಲಿ ಎನ್ ಡಿ ಎ ಪಕ್ಷ ಅಧಿಕಾರಕ್ಕೆ ಬಂದ ನಂತರ ಎನ್ ಡಿ ಆರ್ ಎಫ್ ನಿಯಮಾವಳಿಗಳ ಬಗ್ಗೆ ಬದಲಾವಣೆ ಮಾಡಲಾಗಿದೆ. ನೆರೆ ಪರಿಹಾರಕ್ಕೂ ಕೂಡಾ ಈಗ ಅದೇ ನಿಯಮಾವಳಿಗಳನ್ನು ಅನ್ವಯ ಮಾಡಲಾಗುತ್ತಿದೆ ಎಂದು ದೂರಿದರು.
ಜಿಲ್ಲೆಯಲ್ಲಿ ಭಾರೀ ಮಳೆ ಸುರಿದಿದೆ ಕೃಷಿ ಸಚಿವರು ಬಂದಿಲ್ಲ, ನೀವೂ ಕೂಡಾ ಭೇಟಿ ನೀಡಿಲ್ಲ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ತಾವು ಸರ್ಕಾರದ ಮೇಲೆ ಹಾಗೂ ಖಾಸಗಿ ಕೆಲಸದ ಮೇಲೆ ವಿದೇಶಕ್ಕೆ ಹೋಗಿದ್ದು ಅಲ್ಲಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಿದ್ದೇನೆ. ಕೃಷಿ ಸಚಿವರೂ ಕೂಡಾ ಜಿಲ್ಲೆಗೆ ಈ ಹಿಂದೆ ಬಂದು ಹೋಗಿದ್ದಾರೆ ಎಂದರು.
*ಸಿಎಂ ಭೇಟಿ*
ಕಲ್ಯಾಣ ಕರ್ನಾಟಕ ಉತ್ಸವ ಉದ್ಘಾಟನೆಗೆ ಸೆಪ್ಟೆಂಬರ್ 17 ರಂದು ಸಿಎಂ ಸಿದ್ದರಾಮಯ್ಯ ಅವರು ಆಗಮಿಸಲಿದ್ದಾರೆ. ಸೆಪ್ಟೆಂಬರ್ 16 ರಂದೇ ಸಂಜೆ ಸಿಎಂ ಕಲಬುರಗಿ ಗೆ ಆಗಮಿಸಲಿದ್ದಾರೆ. ಧ್ವಜಾರೋಹಣ ನಂತರ ಸಮಾಜದ ಕಡೆಯಿಂದ ಖಾಸಗಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಯ ಬೇಡಿಕೆ ಪರಿಶೀಲನೆ ಹಂತದಲ್ಲಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
*ವಿದೇಶದಲ್ಲಿರುವ ತಮ್ಮ ಮಕ್ಕಳನ್ನು ವಾಪಸ್ ಕರೆಸಲಿ*
ಮದ್ದೂರು ಚಲೋ ಮಾಡುತ್ತಿರುವ ಬಿಜೆಪಿ ನಾಯಕರ ವಿರುದ್ದ ತೀವ್ರ ವಾಗ್ಧಾಳಿ ನಡೆಸಿದ ಪ್ರಿಯಾಂಕ್, ಬಿಜೆಪಿ ನಾಯಕರು ವಿದೇಶದಲ್ಲಿರುವ ತಮ್ಮ ತಮ್ಮ ಮಕ್ಕಳನ್ನು ವಾಪಸ್ ಕರೆಸಿ ಮದ್ದೂರಿನ ಬೀದಿಗಿಳಿಸಲಿ ಎಂದು ಸವಾಲ್ ಹಾಕಿದರು.
ಬಿಜೆಪಿ ನಾಯಕರು ಈಗ ಮಂಗಳೂರಿನಿಂದ ಮದ್ದೂರಿಗೆ ಶಿಫ್ಟ್ ಆಗಿದ್ದಾರೆ ಎಂದು ಟೀಕಿಸಿದ ಸಚಿವರು ಅವರಿಗೆ ಈಗ ಮಾಡಲು ಏನೂ ಕೆಲಸವಿಲ್ಲ. ಹಾಗಾಗಿ ಇದೆಲ್ಲ ಮಾಡುತ್ತಿದ್ದಾರೆ. ಮದ್ದೂರು ಘಟನೆಗೆ ಸಂಬಂಧಿಸಿದಂತೆ 22 ಜನರನ್ನು ಅರೆಸ್ಟ್ ಮಾಡಲಾಗಿದೆ. ತನಿಖೆ ನಡೆಯುತ್ತಿದೆ. ಶಾಂತಿ ಸಭೆ ಕರೆಯಲಾಗಿತ್ತು. ಆ ಸಭೆಯಲ್ಲಿ ಯಾಕೆ ಬಿಜೆಪಿ ನಾಯಕರು ಭಾಗವಹಿಸಲಿಲ್ಲ ? ಎಂದು ಪ್ರಶ್ನಿಸಿದರು.
ಭದ್ರಾವತಿ ಶಾಸಕ ಸಂಗಮೇಶ್ ಹೇಳಿಕೆ 20 ವರ್ಷ ಹಿಂದಿನದು ಎಂದು ಅವರೇ ಹೇಳಿದ್ದಾರೆ. ಸಂಗಮೇಶ್ ಬಗ್ಗೆ ಮಾತಮಾಡುವ ಬಿಜೆಪಿ ನಾಯಕರು ಈ ಹಿಂದೆ ಇದೇ ತರ ಹೇಳಿಕೆ ನೀಡಿದ್ದ ದೇವೇಗೌಡ ಹಾಗೂ ಕುಮಾರಸ್ವಾಮಿ ಬಗ್ಗೆ ಏನು ಹೇಳುತ್ತಾರೆ ಎಂದು ತಿರುಗೇಟು ನೀಡಿದರು.
ಕಡಗಂಚಿಯ ಕೇಂದ್ರೀಯ ವಿದ್ಯಾಲಯ ಆರ್ ಎಸ್ ಎಸ್ ಶಾಖಾ ಕಚೇರಿಯಾಗಿದೆ. ವಿವಿ ಕಟ್ಟಲು ಜಾಗ ಕೊಟ್ಟಿರುವುದು ನಾವು, ಆದರೆ, ನಮ್ಮನ್ನೇ ವಿವಿ ವ್ಯಾಪ್ತಿಯಿಂದ ಹೊರಗಡೆ ಇಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆಕೆಆರ್ ಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ ಅಜಯ್ ಸಿಂಗ್, ಕುಡಾ ಅಧ್ಯಕ್ಷ ಮಜರ್ ಅಲಂಖಾನ್, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಕೆಕೆಆರ್ ಡಿಬಿ ಕಾರ್ಯದರ್ಶಿ ನಳಿನ್ ಅತುಲ್, ಕಮೀಷನರ್ ಡಾ ಶರಣಪ್ಪ ಢಗೆ, ಎಸ್ ಪಿ ಅಡ್ಡೂರು ಶ್ರೀನಿವಾಸಲು, ಎಸಿಡಿ ರಾಯಪ್ಪ ಹುಣಸಗಿ ಸೇರಿದಂತೆ ಹಲವರಿದ್ದರು.


