ಕಲಬುರಗಿ: ಕೇಂದ್ರ ಸರ್ಕಾರವು ಸುಮಾರು 95 ವರ್ಷಗಳ ನಂತರ ನಡೆಸುತ್ತಿರುವ ಜಾತಿ ಜನಗಣತಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಇದೇ 13 ರಂದು ಬೆಳಗ್ಗೆ 11 ಗಂಟೆಗೆ ನಗರದ ಚಂದ್ರಶೇಖರ ಪಾಟೀಲ್ ವಸತಿ ನಿಲಯದ ಸ್ಯಾಕ್ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಸಮುದಾಯದ ಕಲಬುರಗಿ ವಿಭಾಗ ಮಟ್ಟದ ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ಮುಖಂಡ ಅವ್ವಣ್ಣ ಮ್ಯಾಕೇರಿ ಹೇಳಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಯ ಎಲ್ಲ ಹಿಂದುಳಿದ ವರ್ಗಗಳ ಸಮುದಾಯಗಳ ಅಧ್ಯಕ್ಷರು, ಪದಾಧಿಕಾರಿಗಳು, ಬುದ್ಧಿಜೀವಿಗಳು, ಪ್ರಗತಿಪರ ಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಈ ವಿಚಾರಗೋಷ್ಟಿಗೆ ಉಡುಪಿ-ಚಿಕ್ಕಮಂಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ. ಇನ್ ಸೈಟ್ಸ್ ಐಎಎಸ್ ಅಕಾಡೆಮಿ ಸಂಸ್ಥಾಪಕ ನಿರ್ದೇಶಕ ಜಿ.ಬಿ.ವಿನಯ್ಕುಮಾರ, ಮೈಸೂರು ಸಂಸ್ಥಾನದ ಮಹಾರಾಜ, ಸಂಸದ ಯದುವೀರ್ ಒಡೆಯರ್, ಸಮಾಜ ಸೇವಕ ವಾದಿರಾಜ್ ಇತರರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ವಿಚಾರಗೋಷ್ಠಿಗೆ ಸುಮಾರು 2 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಈ ಗೋಷ್ಠಿ ಪಕ್ಷಾತೀತವಾಗಿದ್ದು, ಎಲ್ಲ ಪಕ್ಷದ ಹಿಂದುಳಿದ ಘಟಕಗಳ ಮುಖಂಡರು, ವಿವಿಧ ಸಂಘ-ಸoಸ್ಥೆಗಳ ಮುಖಂಡರು, ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಬಹುದು ಎಂದರು.
ದೇಶದಲ್ಲಿ 45 ವರ್ಷಗಳ ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡುತ್ತಲೇ ಬಂದಿದೆ. 1956 ರಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ರಚಿಸಿರುವ ಕಾಕಾ ಕಾಲಲಕರ್ ಆಯೋಗದ ವರದಿ ತಿರಸ್ಕರಿಸಿತು. ಅಲ್ಲದೇ 1951 ರಿಂದ 2011ರವರೆಗೆ ಪ್ರತಿ 10 ವರ್ಷಕ್ಕೊಮ್ಮೆ ನಡೆಸುವ ಜನಗಣತಿ ಜೊತೆ, ಜಾತಿ ಜನಗಣತಿ ನಡೆಸುವ 6 ಅವಕಾಶಗಳು ಇದ್ದರೂ ಜಾತಿ ಜನಗಣತಿ ಮಾಡದೆ ಈ ವರ್ಗಕ್ಕೆ ಮೋಸ ಮಾಡಿದೆ ಎಂದು ಆರೋಪಿಸಿದರು.
ಶರಣಪ್ಪ ತಳವಾರ ಮಾತನಾಡಿ, ರಾಜ್ಯದಲ್ಲಿ ಹಿಂದುಳಿದ ವರ್ಗಗಳ ನಾಯಕರೆನಿಸಿಕೊಂಡಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ ಆಯೋಗ 2014 ರಲ್ಲಿ ರಚನೆ ಮಾಡಿ, 165 ಕೋಟಿ ರೂ. ಖರ್ಚು ಮಾಡಿ ತಮ್ಮ ರಾಜಕೀಯ ಅಸ್ಥಿರತೆ, ಸಿಎಂ ಕುರ್ಚಿಗೆ ಧಕ್ಕೆ ಬಂದಾಗ ಮಾತ್ರ ಹಿಂದುಳಿದ ವರ್ಗಗಳ ವರದಿ ಜಾರಿಗೊಳಿಸುವ ಹುನ್ನಾರ ನಡೆಸಿ 11 ವರ್ಷವಾದರೂ ಜಾರಿ ಮಾಡದೆ ನಮ್ಮನ್ನು ಮೂರ್ಖರನ್ನಾಗಿ ಮಾಡಿದ್ದಾರೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಅಶೋಕ ಬಗಲಿ, ಸಂಜಯ ಮಿಸ್ಕಿನ್, ಲಿಂಗರಾಜ ಬಿರಾದಾರ, ದಿಲೀಪ ಪಾಟೀಲ್, ಹಣಮಂತರಾವ ಹೂಗಾರ, ದೇವೇಂದ್ರ ದೇಸಾಯಿ ಕಲ್ಲೂರ, ಮಲ್ಲಿಕಾರ್ಜುನ ಎಮ್ಮೆನೂರ, ರೇವಣಸಿದ್ಧ ಸಂಕಾನಿ ಮತ್ತಿತರರು ಇದ್ದರು.


