ಕಲಬುರಗಿ: ಸೇಡಂ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು 27 ಮಂದಿ ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿದರು.
2022-23ನೇ ಸಾಲಿನ ರಾಜ್ಯ ಹಣಕಾಸು ಆಯೋಗ ಅಭಿವೃದ್ಧಿ ಯೋಜನೆಯಡಿ ವಿಕಲಚೇತನರಿಗೆ ಕಾಯ್ದಿರಿಸಿದ ಒಟ್ಟು 13 ಲಕ್ಷ ರೂಪಾಯಿ ಅನುದಾನದಲ್ಲಿ 13 ವಾಹನಗಳು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ವತಿಯಿಂದ 14 ತ್ರಿಚಕ್ರ ವಾಹನಗಳನ್ನು ಖರೀದಿಸಲಾಗಿದ್ದು, 27 ಮಂದಿ ಫಲಾನುಭವಿಗಳಿಗೆ ತ್ರಿಚಕ್ರ ವಾಹನಗಳನ್ನು ಕೊಡಲಾಯಿತು.
ಈ ವೇಳೆ ಮಾತನಾಡಿದ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಸುಸ್ಥಿರ ಸಮಾಜ ನಿರ್ಮಾಣಕ್ಕೆ ಎಲ್ಲಾ ಸ್ಥರಗಳ ಜನರ ಅಭಿವೃದ್ಧಿ ಮುಖ್ಯ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರವು ಬಡವರ, ಹಿಂದುಳಿದವರ ಪರವಾಗಿ ಯೋಜನೆಗಳನ್ನು ರೂಪಿಸುತ್ತಾ ಬಂದಿದೆ. ಇದೇ ರೀತಿ ನನ್ನ ವಿಧಾನಸಭಾ ಕ್ಷೇತ್ರದಲ್ಲಿರುವ ವಿಕಲಚೇತನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಅಧಿಕಾರಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.


