ಇಂದಿನಿಂದ ರಾಜ್ಯದಲ್ಲಿ SSLC ಪರೀಕ್ಷೆ ನಡೆಯುತ್ತಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಯಶಸ್ವಿಯಾಗಿ ಬರೆದಿದ್ದಾರೆ. ಇದರ ನಡುವೆಯೇ ಇಂದು SSLC ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ನೀಡದ ಹಿನ್ನಲೆ ವಿದ್ಯಾರ್ಥಿಯೊಬ್ಬ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕುಳಿತು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ಹಾವೇರಿ ಜಿಲ್ಲೆಯ ಹರನಗಿರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಅಭಿಷೇಕ್ ಎಂಬ ವಿದ್ಯಾರ್ಥಿ ಅಲರ್ಜಿ ಮೊಡವೆಗೆ ತುತ್ತಾಗಿದ್ದರಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ, ಹಾಜರಾತಿಯ ಕೊರತೆಯಿಂದಾಗಿ ಶಿಕ್ಷಕರು ಪ್ರವೇಶ ಪತ್ರ ಕೊಡಲು ನಿರಾಕರಿಸಿದ್ದಾರೆ. ಇದರಿಂದ ಬೇಸತ್ತ ಬಾಲಕ ಮತ್ತು ಆತನ ಕುಟುಂಬಸ್ಥರು ಅಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕುಳಿತುಕೊಂಡು ಪ್ರತಿಭಟನೆ ನಡೆಸಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿಗಳು ವಿದ್ಯಾರ್ಥಿಯ ಪ್ರತಿಭಟನೆಗೆ ಸ್ಪಂದಿಸಿರುವ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಈ ವಿಷಯ ಅರಿತ ಸಾರ್ವಜನಿಕರು ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕಿತ್ತು ಎಂದು ಹೇಳುತ್ತಿದ್ದಾರೆ.


