ಕಲಬುರಗಿ: ನೆರೆ ಹಾವಳಿಗೆ ತುತ್ತಾಗಿರುವ ಕಲಬುರಗಿ ಜಿಲ್ಲೆಯನ್ನು ಹಸಿ ಬರಗಾಲ ಘೋಷಿಸಿ ವಿಶೇಷ ಪ್ಯಾಕೇಜ್ ನೀಡಬೇಕೆಂದು ಆಗ್ರಹಿಸಿ, ರೈತ, ದಲಿತ, ಕನ್ನಡಪರ ಸಂಘಟನೆಗಳು ನೀಡಿದ್ದ ಕಲಬುರಗಿ ಬಂದ್ ಕರೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಬೆಳಗ್ಗೆ ಹೊರಡಬೇಕಿದ್ದ ಹಲವು ಬಸ್ ಗಳ ಸಂಚಾರದಲ್ಲಿ ಸ್ಥಗಿತ ಆಗಿರುವುದರಿಂದ ಪ್ರಯಾಣಿಕರು ಪರದಾಡುವಂತಹ ಸ್ಥಿತಿ ಎದುರಾಯಿತು.
ಬಂದ್ ಅಂಗವಾಗಿ ಪ್ರತಿಭಟನಾಕಾರರು ನಗರದ ಕೇಂದ್ರೀಯ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸುತ್ತಿದ್ದು, ನೆರೆ ಹಾದಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ರಾಜ್ಯ ಸರ್ಕಾರ ಈ ಭಾಗಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು, ಒಂದೇ ಒಂದು ರೂಪಾಯಿ ಬಿಡುಗಡೆ ಮಾಡದೆ ಇರುವ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಪ್ರತಿಭಟನೆಯಲ್ಲಿ ಶರಣಬಸಪ್ಪ ಮಮಶೆಟ್ಟಿ, ಭೀಮಾಶಂಕರ ಮಾಡ್ಯಾಳ, ಮೌಲಾ ಮುಲ್ಲಾ, ದಯಾನಂದ ಪಾಟೀಲ್, ನಾಗೇಂದ್ರ ಥoಬೆ, ಸಾಜಿದ್, ಪ್ರಭುದೇವ ಯಳಸಂಗಿ ಸೇರಿದಂತೆ ಹಲವು ಹೋರಾಟಗಾರರು ಬಸ್ ನಿಲ್ದಾಣದ ಎದುರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬಂದ್ ನಿಮಿತ್ತ ನಗರದ ಹಲವು ಕಡೆಗಳಲ್ಲಿ ರಸ್ತೆ ಸಂಚಾರ ತಡೆ ನೀಡುವ ಮೂಲಕ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ರೈತ ಮುಖಂಡರು ಹೇಳಿದ್ದಾರೆ.


