ಕಲಬುರಗಿ: ಹಳೆಯ ವೈಷಮ್ಯದಿಂದಾಗಿ ಮದ್ಯಪಾನ ಮಾಡಿಸಿ ಪಾರ್ಟಿ ಮಾಡುತ್ತಲ್ಲೇ ವ್ಯಕ್ತಿಯೊಬ್ಬರ ತಲೆಯ ಮೇಲೆ ಕಲ್ಲನ್ನು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿದ ಘಟನೆ ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿಯ ಗ್ರಾಮಸ್ಥರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಶ್ರೀನಿವಾಸ ಸರಡಗಿಯ ನಿವಾಸಿಯಾಗಿದ್ದ ಹಾಗೂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಶ್ರೀಮಂತರಾಯ ತಂದೆ ಕವಿರಾಜ (32) ಎಂಬಾತನೇ ಕೊಲೆಯಾಗಿದ್ದಾನೆ.
ಕೊಲೆಯಾದ ಶ್ರೀಮಂತರಾಯನು ಕಳೆದ ಕೆಲವು ವರ್ಷಗಳ ಹಿಂದೆ ಕೊಲೆಯೊಂದರಲ್ಲಿ ಭಾಗಿಯಾಗಿದ್ದ ಎಂದು ಹೇಳಲಾಗುತ್ತಿದ್ದು ಇದೇ ಹಳೆಯ ವೈಷಮ್ಯದಿಂದಾಗಿ ಗ್ರಾಮದಲ್ಲಿ ಕೆಲವು ದುಷ್ಕರ್ಮಿಗಳು ಸೇರಿಕೊಂಡು ಶುಕ್ರವಾರ ರಾತ್ರಿ ಶ್ರೀಮಂತರಾಯನೊಂದಿಗೆ ಕೂಡಿಕೊಂಡು ಮದ್ಯಪಾನ ಮಾಡುತ್ತ ಪಾರ್ಟಿ ಮಾಡಿದ್ದಾರೆ, ಇದೇ ವೇಳೆ ಸಮಯವನ್ನು ಸಾಧಿಸಿದ ದುಷ್ಕರ್ಮಿಗಳು ಶ್ರೀಮಂತರಾಯನ ತಲೆಯ ಮೇಲೆ ಕಲ್ಲನ್ನು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಕೊಲೆ ಸುದ್ದಿ ಅರಿತ ಎಸಿಪಿ, ಪಿ.ಐ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಸ್ಥಳವನ್ನು ಪರಿಶೀಲಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ವಿಶ್ವ ವಿದ್ಯಾಲಯ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಕೊಲೆ ಮಾಡಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ವ್ಯಾಪಕ ಜಾಲವನ್ನು ಬೀಸಿದ್ದಾರೆಂದು ತಿಳಿಸಿದ್ದಾರೆ.


