ಕಲಬುರಗಿ| ಬೆಳೆ ಹಾನಿ; ಪ್ರತಿ ಹೆಕ್ಟೇರ್‌ಗೆ ರಾಜ್ಯ ಸರ್ಕಾರದಿಂದ 8,500 ರೂ. ಹೆಚ್ಚುವರಿ ಪರಿಹಾರ: ಸಿದ್ದರಾಮಯ್ಯ ಘೋಷಣೆ

Date:

ಕಲಬುರಗಿ: ರಾಜ್ಯದಾದ್ಯಂತ ಪ್ರಸಕ್ತ ಸಾಲಿನ ಜೂನ್ ಮಾಹೆಯಿಂದ ಇಲ್ಲಿಯ ವರೆಗೆ ಅತಿವೃಷ್ಠಿ ಮತ್ತು ವ್ಯಾಪಕ ಮಳೆಯಿಂದ ಪ್ರಾಥಮಿಕ ವರದಿ ಪ್ರಕಾರ 10 ಲಕ್ಷಕ್ಕೂ ಹೆಚ್ಚಿನ ಹೆಕ್ಟೇರ್ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು, ಎನ್.ಡಿ.ಆರ್.ಎಫ್. ಪರಿಹಾರದ ಜೊತೆಗೆ ಪ್ರತಿ ಹೆಕ್ಟೇರ್‌ಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 8,500 ರೂ. ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹೆಚ್ಚುವರಿ ಪರಿಹಾರ ಘೋಷಣೆಯಿಂದಾಗಿ ಮಳೆಯಾಶ್ರಿತ ಪ್ರತಿ ಹೆಕ್ಟೇರ್‌ಗೆ 8,500 + 8,500 ಸೇರಿ 17,000 ರೂ., ನೀರಾವರಿ ಬೆಳೆಗಳಿಗೆ 17,000 + 8,500 ಸೇರಿ 25,500 ರೂ. ಹಾಗೂ ಬಹು ವಾರ್ಷಿಕ ಬೆಳೆಗಳಿಗೆ 22,500 + 8,500 ಸೇರಿ 31,000 ರೂ. ಪರಿಹಾರ ಸಿಗಲಿದೆ ಎಂದರು.

ಸತತ ಮಳೆಯಿಂದ ಇದೂವರೆಗೆ ಶೇ.50ರಷ್ಟು ಪ್ರದೇಶದಲ್ಲಿ ಮಾತ್ರ ಸಮೀಕ್ಷೆ ಕಾರ್ಯ ಮುಗಿದಿದೆ. ಉಳಿದೆಡೆ ಮಳೆ ತಗ್ಗಿದ ಬಳಿಕ ಕೂಡಲೆ ಜಂಟಿ ಸಮೀಕ್ಷೆ ಮಾಡಿ ಪರಿಹಾರ ಹಣವನ್ನು ರೈತರ ಖಾತೆಗೆ ಜಮೆ ಮಾಡುವಂತೆ ಸೂಚನೆ ನೀಡಿದ್ದೇನೆ. ಒಟ್ಟಾರೆಯಾಗಿ ಎನ್.ಡಿ.ಆರ್.ಎಫ್. ಮತ್ತು ಹೆಚ್ಚುವರಿ ಪರಿಹಾರ ಸೇರಿ ರಾಜ್ಯ ಸರ್ಕಾರದಿಂದ 2,000 ಕೋಟಿ ರೂ. ಕ್ಕಿಂತ ಹೆಚ್ಚಿನ ಹಣ ರೈತರಿಗೆ ಪರಿಹಾರ ರೂಪದಲ್ಲಿ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ರಾಜ್ಯದಲ್ಲಿ ಜೂನ್ 1 ರಿಂದ ಸೆಪ್ಟೆಂಬರ್ 29ರ ವರೆಗೆ ಸರಾಸರಿಯಂತೆ 845 ಮಿ.ಮಿ. ಮಳೆಯಾಗಬೇಕಿತ್ತು. ಆದರೆ 879 ಮಿ.ಮಿ ಮಳೆಯಾಗಿದೆ. ವಾಡಿಕೆಗ್ಗಿಂತ ಶೇ.4ರಷ್ಟು ಮಳೆ ಮಾತ್ರ ಹೆಚ್ಚಾಗಿದೆ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಮಹಾರಾಷ್ಟçದಿಂದ ಹೆಚ್ಚಿನ ನೀರು ಬಿಟ್ಟಿರುವ ಕಾರಣ ಮತ್ತು ಸತತ ಮಳೆಯಿಂದ ವಿಜಯಪುರ ಜಿಲ್ಲೆಯಲ್ಲಿ-58, ಬಾಗಲಕೋಟೆ-37, ಕಲಬುರಗಿ-34, ಯಾದಗಿರಿ-29, ಬೆಳಗಾವಿ-26, ರಾಯಚೂರು-21, ಗದಗ-17 ಹಾಗೂ ಬೀದರ ಜಿಲ್ಲೆಯಲ್ಲಿ ಶೇ.16ರಷ್ಟು ಹೆಚ್ಚುವರಿ ಮಳೆಯಿಂದಾಗಿ ಪ್ರಾಥಮಿಕ ಅಂದಾಜಿನ ಪ್ರಕಾರ 8,88,953 ಹೆಕ್ಟೇರ್ ಕೃಷಿ ಮತ್ತು 71,624 ತೋಟಗಾರಿಕೆ ಬೆಳೆಗಳು ಹಾನಿಗೊಳಗಾಗಿವೆ. ರಾಜ್ಯದಲ್ಲಿ ಹಾನಿಯಾದ 10 ಲಕ್ಷ ಹೆಕ್ಟೇರ್ ಪ್ರದೇಶಗಳ ಪೈಕಿ ಉತ್ತರ ಕರ್ನಾಟಕದ ಈ ಜಿಲ್ಲೆಗಳಲ್ಲಿಯೇ ಶೇ.90ರಷ್ಟು ಹಾನಿಯಾಗಿದೆ ಎಂದು ಮುಖ್ಯಮಂತ್ರಿಗಳು ಉತ್ತರ ಕರ್ನಾಟಕದ ಮಳೆ ಹಾನಿ ಸ್ಥಿತಿ ವಿವರಿಸಿದರು.

ಇಂದಿಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೇರಿದಂತೆ ಪ್ರದೇಶದ ಸಚಿವರೊಂದಿಗೆ ವಿಜಯಪುರ, ಕಲಬುರಗಿ, ಬೀದರ, ಯಾದಗಿರಿ ಜಿಲ್ಲೆಯ ವೈಮಾನಿಕ ಸಮೀಕ್ಷೆ ನಡೆಸಿದ್ದು, ಜಮೀನುಗಳು ಕೆರೆಗಳಾಗಿ ಮಾರ್ಪಟ್ಟಿವೆ. ರಸ್ತೆ ಸಂಪರ್ಕ ಕಡಿತಗೊಂಡಿವೆ, ಸೇತುವೆ ಹಾಳಾಗಿವೆ, ಅನೇಕ ಮೂಲಸೌಕರ್ಯ ಹಾನಿಯಾಗಿದ್ದು ಕಂಡುಬಂದಿದೆ. ರೈತರು ಎರಡೆರೆಡು ಬಾರಿ ಬೆಳೆದರು ಫಲ ಸಿಕ್ಕಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಸಹ ಈ ಪ್ರದೇಶಕ್ಕೆ ಹೆಚ್ಚುವರಿಯಾಗಿ ಪರಿಹಾರ ನೀಡಬೇಕು. ಜಂಟಿ ಸಮೀಕ್ಷೆ ಮುಗಿದ ನಂತರ ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗಲಾಗುವುದು ಎಂದು ಸಿ.ಎಂ. ಸಿದ್ದರಾಮಯ್ಯ ತಿಳಿಸಿದರು.

ರಾಜ್ಯದಾದ್ಯಂತ ಇದೂವರೆಗೆ 52 ಜನ ಮಾನವ ಹಾನಿಯಾಗಿದ್ದು, 422 ಜಾನುವಾರುಗಳು ಮಳೆಗೆ ಕೊಚ್ಚಿ ಹೋಗಿವೆ. ಎಲ್ಲದಕ್ಕೂ ಪರಿಹಾರ ನೀಡಲಾಗಿದೆ. 547 ಪೂರ್ಣ ಪ್ರಮಾಣದಲ್ಲಿ ಮನೆ ಹಾನಿಯಾಗಿದ್ದು, ತಲಾ 1.20 ಲಕ್ಷ ರೂ. ಗಳಂತೆ ಮತ್ತು ಭಾಗಶ: ಮನೆ ಹಾನಿಯಾದ 75 ಪ್ರಕರಣಗಳಲ್ಲಿ ತಲಾ 50 ಸಾವಿರ ರೂ. ಗಳಂತೆ ಪರಿಹಾರ ನೀಡಲಾಗಿದೆ. 3,881 ಮನೆಗಳು ಶೇ.15 ರಿಂದ 25ರಷ್ಟು ಹಾನಿಗೊಳಗಾಗಿದ್ದು, ಮನೆ ಮಾಲೀಕರಿಗೆ 6,500 ರೂ. ಗಳಂತೆ ಪರಿಹಾರ ನೀಡಲಾಗಿದೆ. ಮನೆಗೆ ನೀರು ನುಗ್ಗಿ ಆಹಾರ ಧಾನ್ಯ, ಗೃಹಪಯೋಗಿ ವಸ್ತುಗಳ ಹಾನಿಗೆ ಇದುವರೆಗೆ 2.50 ಕೋಟಿ ರೂ. ಪರಿಹಾರ ನೀಡಲಾಗಿದೆ. ಜಂಟಿ ಸಮೀಕ್ಷೆ ನಡೆಯುತ್ತಿದ್ದು, ಪರಿಹಾರ ವಿತರಣೆ ಕಾರ್ಯ ನಿರಂತರವಾಗಿರಲಿದೆ ಎಂದರು.

117 ಗ್ರಾಮಕ್ಕೆ ತೊಂದರೆ, 80 ಕಾಳಜಿ ಕೇಂದ್ರ ಸ್ಥಾಪನೆ:

ತೀವ್ರ ಅತಿವೃಷ್ಠಿಗೆ ಒಳಗಾದ ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆಯಲ್ಲಿ ಭೀಮಾ ನದಿ ಪ್ರವಾಹದಿಂದ 117 ಗ್ರಾಮಗಳು ತೊಂದರೆಗೀಡಾಗಿದ್ದು, ಕಲಬುರಗಿ-56, ವಿಜಯಪುರ-17 ಹಾಗೂ ಯಾದಗಿರಿಯಲ್ಲಿ 7 ಸೇರಿದಂತೆ ಒಟ್ಟಾರೆ 80 ಕಾಳಜಿ ಕೇಂದ್ರ ತೆರೆದು 10,576 ಜನ ಸಂತ್ರಸ್ತರಿಗೆ ಊಟೋಪಚಾರದ ಜೊತೆಗೆ ಅಗತ್ಯ ಮೂಲಸೌಕರ್ಯ ಒದಗಿಸಲಾಗಿದೆ ಎಂದು ಸಿ.ಎಂ. ಸಿದ್ದರಾಮಯ್ಯ ತಿಳಿಸಿದರು.

 

ಪತ್ರಿಕಾಗೋಷ್ಠಿಯಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್, ವೈದ್ಯಕೀಯ ಶಿಕ್ಷಣ, ಕೌಶಾಲಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಆರ್.ಪಾಟೀಲ್, ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪೂರ, ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್, ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ. ಅಜಯಸಿಂಗ್, ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ್ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ಚಂದ್ರಶೇಖರ ಪಾಟೀಲ, ಜಗದೇವ ಗುತ್ತೇದಾರ, ಇಂಧನ ಇಲಾಖೆಯ ಹೆಚ್ಚುವರಿ ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ, ಕೆ.ಪಿ.ಟಿ.ಸಿ.ಎಲ್. ವ್ಯವಸ್ಥಾಪಕ ನಿರ್ದೇಶಕರು ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಂಕಜ್ ಕುಮಾರ ಪಾಂಡೆ, ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಇದ್ದರು.

LEAVE A REPLY

Please enter your comment!
Please enter your name here

Share post:

spot_imgspot_img

Popular

More like this
Related

ಕಲಬುರಗಿ| ಜಿಲ್ಲೆಯಾದ್ಯಂತ ಮತದಾರರ ವಿಶೇಷ ಮಿಂಚಿನ ನೋಂದಣಿ ಅಭಿಯಾನ: ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಈಗಾಗಲೇ...

ಕಲಬುರಗಿ| ಸಿಲಿಂಡರ್ ಸ್ಫೋಟ; ಅದೃಷ್ಟವಶಾತ್ ನಾಲ್ವರು ಪಾರು

ಕಲಬುರಗಿ: ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯಲ್ಲಿದ್ದ ಚಿನ್ನಾಭರಣ, ನಗದು ಹಣ ಸೇರಿದಂತೆ...

ಕಲಬುರಗಿ| ದಾರಿದ್ರ್ಯ ರಹಿತ ಸಮಾಜ ನಮ್ಮೆಲ್ಲರ ಕನಸು: ಡಾ.ಜ್ಯೋತಿ.ಕೆ.ಎಸ್

ಕಲಬುರಗಿ: ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ...

ಕಲಬುರಗಿ| ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ

ಕಲಬುರಗಿ: ನೈಸರ್ಗಿಕ ಸಂಪತನ್ನು ಹಿತ-ಮಿತವಾಗಿ ಬಳಕೆ ಮಾಡದೆ ಮಾನವ ದುರಾಸೆಯಿಂದ ಅವ್ಯಾಹತವಾಗಿ...