ಕಲಬುರಗಿ: ಭಾರೀ ಮಳೆ ಹಾಗೂ ಮಹಾರಾಷ್ಟ್ರದ ವಿವಿಧ ನದಿ, ಜಲಾಶಯಗಳಿಂದ 3.50 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕದ ಕಲಬುರಗಿ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಭೀಮಾ ನದಿಯ ಪ್ರವಾಹದಿಂದ ಉಂಟಾಗಿರುವ ಹಾನಿಯನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈಮಾನಿಕ ಸಮೀಕ್ಷೆ ನಡೆಸಿ, ವೀಕ್ಷಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಮಂಗಳವಾರ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಪ್ರವಾಹದಿಂದಾಗಿ ಭೀಮಾ ತೀರದ ಪ್ರದೇಶಗಳಲ್ಲಿ ಉಂಟಾಗಿರುವ ಹಾನಿ ಬಗ್ಗೆ ವಿಮಾನ ನಿಲ್ದಾಣದಲ್ಲೇ ಪ್ರಾದೇಶಿಕ ಆಯುಕ್ತೆ, ಜಿಲ್ಲಾಧಿಕಾರಿ ಸೇರಿ ಉನ್ನತಮಟ್ಟದ ಅಧಿಕಾರಿಗಳ ಜೊತೆಗೆ ಪ್ರಾಥಮಿಕ ಸಭೆ ನಡೆಸಿ ಮಾಹಿತಿ ಪಡೆದರು.
ಬಳಿಕ ಮೊದಲ ಹಂತದಲ್ಲಿ ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ಹಾನಿಗೀಡಾಗಿರುವ ಪ್ರದೇಶಗಳ ವೀಕ್ಷಣೆ ಮಾಡಿದರೆ, ಎರಡನೇ ಹಂತದಲ್ಲಿ ಬೀದರ್ ಹಾಗೂ ಯಾದಗಿರಿ ಜಿಲ್ಲೆಯ ನಷ್ಟವನ್ನು ಅವಲೋಕಿಸಿದರು.
ವೈಮಾನಿಕ ಸಮೀಕ್ಷೆಯ ವೇಳೆಯಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ಎಂ.ಬಿ.ಪಾಟೀಲ್, ಈಶ್ವರ ಖಂಡ್ರೆ, ರಹೀಮ್ ಖಾನ್ ಅವರೊಂದಿಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಕೂಡ ಸಿಎಂ ಸಿದ್ದರಾಮಯ್ಯರಿಗೆ ಸಾಥ್ ನೀಡಿದರು.


