ಕಲಬುರಗಿ: ಚಿತ್ತಾಪುರ ಪಟ್ಟಣದ ಬಾಹರಪೇಟ್ ಸಮೀಪದ ಕೊತಲಾಪೂರ ಯಲ್ಲಮ್ಮ ದೇವಸ್ಥಾನದ ಬಾಗಿಲಿನ ಕೀಲಿ ಕೈ ಮುರಿದು ಒಳಗಡೆಯ ದೇವಿಯ ಬೆಳ್ಳಿ ಮೂರ್ತಿಯ ಎರಡು ಕೈಗಳನ್ನು ಕಟ್ ಮಾಡಿ, ಬೆಳ್ಳಿ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ನವರಾತ್ರಿ ನಿಮಿತ್ತ ದೇವಸ್ಥಾನಕ್ಕೆ ಸುಣ್ಣ ಬಣ್ಣ ಮಾಡಿ ಅಲಂಕಾರ ಕಾರ್ಯ ನಡೆಯುತ್ತಿದೆ ಅದರಂತೆ ಮಂಗಳವಾರ ಕೊನೆ ಹಂತಕ್ಕೆ ತಲುಪಿತ್ತು. ಉಳಿದ ಕಾರ್ಯ ನಾಳೆ ಮಾಡಿದರಾಯಿತು ಎಂದು ದೇವಸ್ಥಾನದ ಗೇಟ್ ಮುಚ್ಚಿ ಕೀಲಿಕೈ ಹಾಕಿ ಹೋಗಲಾಗಿತ್ತು. ಎಂದಿನಂತೆ ಬುಧವಾರ ಬೆಳಗ್ಗೆ ದೇವಿಯ ಪೂಜೆ ಕಾರ್ಯಕ್ಕೆ ಅರ್ಚಕ ಮಂಜುನಾಥ ಆಗಮಿಸಿದಾಗ ದೇವಸ್ಥಾನ ಗೇಟ್ ಗೆ ಹಾಕಿದ ಕೀಲಿಕೈ ಮುರಿದು ಒಳಗಡೆ ಇರುವ ದೇವಿಯ ಬೆಳ್ಳಿ ಮೂರ್ತಿಯ ಎರಡು ಕೈಗಳನ್ನು ಕಟ್ ಮಾಡಿ ಕಳ್ಳತನ ಆಗಿರುವುದು ಕಂಡುಬಂದಿದೆ. ಅಲ್ಲದೇ ಬೆಳ್ಳಿಯ ಕಣ್ಣು ಬಿಟ್ಟು ಹಾಗೂ ಪಾದುಕೆ, ತಟ್ಟೆ ಸಹ ಕಳ್ಳತನವಾಗಿದ್ದು, ದೇವಿಯ ಮೂರ್ತಿಯನ್ನೇ ಕಳ್ಳತನ ಮಾಡುವ ಪ್ರಯತ್ನ ನಡೆದಿದೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆ ಪಿಎಸ್‌ಐ ಶ್ರೀಶೈಲ್ ಅಂಬಾಟಿ, ರವಿಕುಮಾರ, ಬಸವರಾಜ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.


