ಕಲಬುರಗಿ: ನಮಗಿಷ್ಟವಾದ ಪುಸ್ತಕಗಳು ನಮ್ಮ ಜೊತೆಗಿದ್ದರೆ ನಾವು ಬಯಸಿದ್ದೆಲ್ಲವನ್ನು ಸಾಧಿಸಬಹುದು,ಮನೆ ಮತ್ತು ಮನ ಬೆಳಗಲು ಪುಸ್ತಕದಿಂದ ಮಾತ್ರ ಸಾಧ್ಯ ಎಂದು ನಿವೃತ್ತ ಪ್ರಾಧ್ಯಾಪಕರಾದ ಡಾ.ಸಿದ್ರಾಮಯ್ಯ ಮಠ ಹೇಳಿದರು.
ನಗರದ ಜ್ಯೋತಿ ನಗರದ ಹಿರಿಯ ಸಾಹಿತಿಗಳು ಹಾಗೂ ನಿವೃತ್ತ ಉಪನ್ಯಾಸಕರಾದ ರೇವಣಸಿದ್ದಪ್ಪ ದುಕಾನ ಅವರ ಮನೆಯಲ್ಲಿ “ಮನೆಗೊಂದು ಗ್ರಂಥಾಲಯ” ಕಾರ್ಯಕ್ರಮದಲ್ಲಿ ಅವರನ್ನು ಕನ್ನಡ ಪುಸ್ತಕ ಪ್ರಾದಧಿಕಾರದ ವತಿಯಿಂದ ಅಭಿನಂದನಾ ಪತ್ರ ನೀಡಿ ಮಾತನಾಡುತ್ತ ಕನ್ನಡ ಪುಸ್ತಕಗಳನ್ನು ಕೊಂಡು ಓದುವವರು ಕಡಿಮೆ ಆಗಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕನ್ನಡ ಪುಸ್ತಕ ಪ್ರಾಧಿಕಾರವು ಮನೆಗೊಂದು ಗ್ರಂಥಾಲಯ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ,ಇದರಿಂದ ಸಾಧ್ಯವಾಗಬಹುದು ಎಂದು ಮಠ ಹೇಳಿದರು.
ಕಾರ್ಯಕ್ರಮದಲ್ಲಿ ಆಶಯ ಮಾತುಗಳನ್ನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ರಾಜ್ಯ ಸದಸ್ಯರಾದ ಬಿ.ಎಚ್.ನಿರಗುಡಿ ಅವರು ಮಾತನಾಡುತ್ತಾ ಮನೆಯಲ್ಲಿ ದೇವರ ಕೋಣೆ, ಅಡುಗೆ ಕೋಣೆ ಹೇಗೆ ಅವಶ್ಯಕವೊ ಹಾಗೆ ಜ್ಞಾನ ಸಂಪಾದನೆಗೆ ಪುಸ್ತಕ ಕೋಣೆಯ ಅವಶ್ಯಕತೆ ಇದೆ ಎಂದರು. ಅವರು ಮಾತು ಮುಂದುವರಿಸಿ ಕನ್ನಡ ಪುಸ್ತಕ ಪ್ರಾಧಿಕಾರವು ನಾಡಿನಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತ ಬರುತ್ತಿದೆ ಪುಸ್ತಕ ಪ್ರದರ್ಶನ, ಪುಸ್ತಕ ಮೇಳ, ವಿಚಾರ ಸಂಕೀರ್ಣ, ಅಂಗಳದಲ್ಲಿ ತಿಂಗಳ ಪುಸ್ತಕ, ನನ್ನ ನೆಚ್ಚಿನ ಪುಸ್ತಕ, ಸಂಪುಟಗಳ ಬಿಡುಗಡೆ ಸಮಾರಂಭ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ,ರಸಪ್ರಶ್ನೆ ಸ್ಪರ್ಧೆ ಹೀಗೆ ಒಂದಲ್ಲ ಎರಡಲ್ಲ ಇಂತಹ ಅನೇಕ ಕಾರ್ಯಕ್ರಮಗಳನ್ನು ಪುಸ್ತಕ ಪ್ರಾಧಿಕಾರ ಮಾಡುತ್ತಾ ಬರುತ್ತಿದೆ ಎಂದು ಬಿ.ಎಚ್. ನಿರಗುಡಿಯವರು ಹೇಳಿದರು.
ಸಾಹಿತಿಗಳು ಹಾಗೂ ನಿವೃತ್ತ ಉಪನ್ಯಾಸಕರಾದ ರೇವಣಸಿದ್ದಪ್ಪ ದುಕಾನ ಅವರು ಮಾತನಾಡುತ್ತ ‘ಓದುವ ಹವ್ಯಾಸ ಬೆಳೆಸಿಕೊಂಡು ಮನೆಯಲ್ಲಿ ನೂರಾರು ಪುಸ್ತಕಗಳ ಸಂಗ್ರಹ ಮಾಡಿದ್ದೇನೆ ಸುಮಾರು ಐದು ದಶಕಗಳಿಂದ ಪುಸ್ತಕದ ನಂಟನ್ನು ಹೊಂದಿರುವ ನನ್ನನು ಇಷ್ಟು ಎತ್ತರಕ್ಕೆ ಬೆಳೆಯುವ ಹಾಗೆ ಪುಸ್ತಕಗಳು ಮಾಡಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶರಣ ಚಿಂತಕರಾದ ರೇವಣಸಿದ್ದಯ್ಯ ಮಠಪತಿ, ವಿಶ್ವನಾಥ್ ಸಿಂಪಿ , ಸೋಮನಾಥ ಮರಡಿ, ಶಿವಪುತ್ರಪ್ಪ ಗುಡ್ಡದ, ಮೋನಯ್ಯ ಸ್ವಾಮಿ, ಹಣಮಂತ ಕುರುಕೋಟಾ ಇತರರು ಇದ್ದರು.


