ಕಲಬುರಗಿ: ಮಣ್ಣು ಗಣಿಗಾರಿಕೆ ಹೊಂಡದಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ಮುಳುಗಿ ಮೃತಪಟ್ಟ ಘಟನೆ ಚಿಂಚೋಳಿ ತಾಲ್ಲೂಕಿನ ಕುಂಚಾವರಂ ಸಮೀಪದ ತೆಲಂಗಾಣ ಗಡಿಪ್ರದೇಶದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಕುಂಚಾವರಂ ಗ್ರಾಮದ ಅಜಯ್ (15) ಮತ್ತು ಸುರೇಂದ್ರ (15) ಮೃತ ಬಾಲಕರೆಂದು ತಿಳಿದುಬಂದಿದೆ.
ಶುಕ್ರವಾರ ಸಂಜೆ ವೇಳೆಯಲ್ಲಿ ಹೊಂಡದ ಬಳಿ ತೆರಳಿದ್ದ ಇಬ್ಬರು ಬಾಲಕರು ನೀರಿಗಿಳಿದು ಈಜಲು ಹೋಗಿದ್ದಾರೆ ಎನ್ನಲಾಗಿದೆ. ಹೊಂಡದಲ್ಲಿ ನೀರು ಆಳವಾಗಿದ್ದರಿಂದ ಇಬ್ಬರೂ ಮುಳುಗಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಾಲಕರ ಶವಗಳನ್ನು ಹೊರತೆಗೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಬ್ಬರು ಬಾಲಕರ ಅಕಾಲಿಕ ಸಾವಿಗೆ ಸಂತಾಪ ಸೂಚಿಸಿರುವ ಕರ್ನಾಟಕ ರಕ್ಷಣಾ ವೇದಿಕೆ–ಸ್ವಾಭಿಮಾನಿ ಸೇನೆಯ ಚಿಂಚೋಳಿ ತಾಲ್ಲೂಕು ಅಧ್ಯಕ್ಷ ಲಿಂಬಾಜಿ ಚವ್ಹಾಣ್, ಮೃತರ ಕುಟುಂಬಗಳಿಗೆ ತಲಾ ₹55 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.


