ಕಲಬುರಗಿ| ಕ್ಷೇತ್ರಗಳ ವಿಂಗಡಣೆ ಮಾಡದೆ ಮಹಿಳಾ ಮೀಸಲಾತಿ ಜಾರಿಗೊಳಿಸಿ: ಮಲ್ಲಿಕಾರ್ಜುನ ಖರ್ಗೆ

Date:

Share post:

ಕಲಬುರಗಿ: ಮಹಿಳಾ ಮೀಸಲಾತಿ ಜಾರಿಗೊಳಿಸುವುದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಆದರೆ, ಕ್ಷೇತ್ರಗಳ ಮರುವಿಂಗಡಣೆ ಮಾಡಿದ ನಂತರ ಮೀಸಲಾತಿ ಜಾರಿಗೊಳಿಸುವುದೇಕೆ? ಕ್ಷೇತ್ರಗಳ ಮರುವಿಂಗಡಣೆ ಮಾಡದೆಯೇ ಮಹಿಳಾ ಮೀಸಲಾತಿಯನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭಾ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು.

ಬುಧವಾರ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಸಚಿವ ಕಿರಣ್ ರಿಜಿಜು ಅವರು ಒಟ್ಟಿಗೆ ಕುಳಿತು ಚರ್ಚಿಸಲಿ. ರಿಜಿಜು ಅವರಿಗೆ ಸಂಪೂರ್ಣ ಅಧಿಕಾರವಿಲ್ಲ; ಮೋದಿ ಮತ್ತು ಅಮಿತ್ ಶಾ ಹೇಳಿದಂತೆ ಅವರು ನಡೆದುಕೊಳ್ಳುತ್ತಾರೆ. ನಿಜವಾಗಿಯೂ ಅವರಿಗೆ ಸಂಪೂರ್ಣ ಅಧಿಕಾರವಿದ್ದರೆ, ನಾಳೆಯೇ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸಲಿ. ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಲಿದೆ. ಈಗಾಗಲೇ ಈ ಮಸೂದೆಗೆ ಬೆಂಬಲ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

 

ಮೋದಿ – ಶಾ ಸುಳ್ಳು ಹೇಳುವ ಮೂಲಕ ದೇಶವನ್ನು ಹಾಳು ಮಾಡುತ್ತಿದ್ದಾರೆ. ಇವರು ಮುಂದಿನ ದಿನಗಳಲ್ಲಿ ದೇಶವನ್ನು ವಿನಾಶದ ಅಂಚಿಗೆ ಕೊಂಡೊಯ್ಯಲಿದ್ದಾರೆ ಎಂದು ಆರೋಪಿಸಿದ ಖರ್ಗೆ, ಯುವಕರಿಗೆ ಉದ್ಯೋಗ, ವಿವಿಧ ಯೋಜನೆಗಳಿಗೆ ಅನುದಾನ ಕೊಟ್ಟು ಅವುಗಳನ್ನು ಉಳಿಸಲು ಪ್ರಯತ್ನಿಸಬೇಕು. ಎಷ್ಟೋ ವಿವಿಗಳು ಅನುದಾನದ ಕೊರತೆಗಳಿಂದ ನರಳಾಡುತ್ತಿವೆ. ಇಂತಹ ಕೆಲಸಗಳನ್ನು ಮಾಡಲು ಅವರಿಗೆ ಸಮಯವಿಲ್ಲ. ಇಂತಹ ಸಂದರ್ಭದಲ್ಲಿ ದೇಶವನ್ನು ಉಳಿಸಲು ಕಾಂಗ್ರೆಸ್ ನಿರಂತರ ಹೋರಾಟ ನಡೆಸಲಿದೆ ಎಂದರು.

 

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ರದ್ದುಪಡಿಸಬೇಕು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು. 2023ರ ಕಾಯ್ದೆಯನ್ನು ಹಿಂಪಡೆಯಬೇಕು ಹಾಗೂ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆಗಳನ್ನು ನಡೆಸಬೇಕು ಎಂದು ಖರ್ಗೆ ಒತ್ತಾಯಿಸಿದರು.

 

ರಾಹುಲ್ ಗಾಂಧಿ ಟೀಕಿಸುವುದೇ ಬಿಜೆಪಿಯ ಕೆಲಸವೇ?

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ನಿರಂತರವಾಗಿ ಟೀಕಿಸಲಾಗುತ್ತಿದೆ. ಕಾಂಗ್ರೆಸ್ ಪ್ರತಿಭಟನೆಯಲ್ಲಿ 8 ಸಾವಿರ ಜನರು ಭಾಗವಹಿಸಿದರೆ ಏನಾಗುತ್ತದೆ ಎಂದು ಪ್ರಶ್ನಿಸುತ್ತಾರೆ. ಹಾಗಾದರೆ ಲಕ್ಷಾಂತರ ಜನರನ್ನು ಸೇರಿಸಿ ಗಲಾಟೆ ಮಾಡಿ ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸಬೇಕೇ ಎಂದು ಖರ್ಗೆ ಪ್ರಶ್ನಿಸಿದರು.

 

ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಪ್ರತಿಭಟನೆಗಳನ್ನು ನಡೆಸಲಾಗುತ್ತದೆ. ಒಂದು ಕಡೆ 8ರಿಂದ 10 ಸಾವಿರ ಜನರಿಂದ ನಮಗೆ ಭಯವಿಲ್ಲ ಎಂದು ಅಮಿತ್ ಶಾ ಹೇಳುತ್ತಾರೆ. ಆದರೆ, ಇಡೀ ದೇಶದ ಕೋಟ್ಯಂತರ ಜನರು ಒಟ್ಟಾಗಿ ಪ್ರತಿಭಟನೆ ನಡೆಸಿದರೆ ಅದನ್ನು ಒಪ್ಪಿಕೊಳ್ಳುತ್ತೀರಾ ಎಂದು ಪ್ರಶ್ನಿಸಿದರು.

ಇತರರನ್ನು ಟೀಕಿಸುವುದನ್ನೇ ಮುಂದುವರಿಸುವುದರಿಂದ ಏನು ಪ್ರಯೋಜನ? ರಾಹುಲ್ ಗಾಂಧಿ ಅವರನ್ನು ಎಷ್ಟು ದಿನ ಟೀಕಿಸುತ್ತೀರಿ? ನೆಹರೂ ಮತ್ತು ಇಂದಿರಾ ಗಾಂಧಿ ಅವರನ್ನು ಟೀಕಿಸುತ್ತಲೇ ಬಂದಿದ್ದೀರಿ. ರಾಜೀವ್ ಗಾಂಧಿ ಅವರ ನಂತರ ಅವರ ಕುಟುಂಬದ ಯಾರಾದರೂ ಪ್ರಧಾನಿಯಾಗಿದ್ದಾರೆಯೇ ಅಥವಾ ಸಚಿವರಾಗಿದ್ದಾರೆಯೇ ಎಂದು ಖರ್ಗೆ ಪ್ರಶ್ನಿಸಿದರು.

Share post:

spot_imgspot_img

Popular

More like this
Related

ಕಲಬುರಗಿ| ದೇಶದ ರಕ್ಷಣೆಗಾಗಿ ಹುತಾತ್ಮರಾದ ಪೊಲೀಸರ ತ್ಯಾಗ ಸದಾ ಸ್ಮರಣೀಯ: ಇಕ್ರಮ್ ಶರೀಫ್

ಕಲಬುರಗಿ: ದೇಶದ ರಕ್ಷಣೆ ಮತ್ತು ಭದ್ರತೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕರ್ತವ್ಯ...

ಕಲಬುರಗಿ| ಆದಿವಾಸಿ ತಾಂಡಾಗಳಲ್ಲಿ ಮೂಲಸೌಕರ್ಯ ಕೊರತೆ: ಲತಾ ಮೋಹನ್ ಪರಿಶೀಲನೆ

ಕಲಬುರಗಿ: ಜಿಲ್ಲೆಯ ವಿವಿಧ ಆದಿವಾಸಿ ತಾಂಡಾಗಳಿಗೆ ಭೇಟಿ ನೀಡಿದ ಕರ್ನಾಟಕ ರಾಜ್ಯ...

ಕಲಬುರಗಿಯಲ್ಲಿ ಜೋಯಾಲುಕ್ಕಾಸ್‌ನ ‘ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ’

ಕಲಬುರಗಿ: ಜಗತ್ತಿನ ಪ್ರಸಿದ್ಧ ಜ್ಯುವೆಲ್ಲರಿ ಬ್ರ್ಯಾಂಡ್ ಜೋಯಾಲುಕ್ಕಾಸ್, ಕಲಬುರಗಿ ನಗರದ ತನ್ನ...

ಕಲಬುರಗಿ| ಬಿ.ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡಿ: ರಾಜಕುಮಾರ್ ಪಾಟೀಲ್ ತೆಲ್ಕೂರ್

ಕಲಬುರಗಿ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ರೂಪಾಯಿ ಹಗರಣಕ್ಕೆ...