ಕಲಬುರಗಿ| ಆದಿವಾಸಿ ತಾಂಡಾಗಳಲ್ಲಿ ಮೂಲಸೌಕರ್ಯ ಕೊರತೆ: ಲತಾ ಮೋಹನ್ ಪರಿಶೀಲನೆ

Date:

Share post:

ಕಲಬುರಗಿ: ಜಿಲ್ಲೆಯ ವಿವಿಧ ಆದಿವಾಸಿ ತಾಂಡಾಗಳಿಗೆ ಭೇಟಿ ನೀಡಿದ ಕರ್ನಾಟಕ ರಾಜ್ಯ ಆದಿವಾಸಿ ಬುಡಕಟ್ಟು ಮಹಾಸಭಾದ ರಾಜ್ಯ ಮಹಿಳಾ ಅಧ್ಯಕ್ಷೆ ಲತಾ ಮೋಹನ್ ಅವರು, ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಶೀಲನೆ ನಡೆಸಿದರು.

 ಮಹಾಸಭಾದ ಗೌರವ ಅಧ್ಯಕ್ಷ ಸಿ.ಎಸ್. ದ್ವಾರಕನಾಥ್ ಹಾಗೂ ರಾಜ್ಯಾಧ್ಯಕ್ಷ ಜಗ್ಗು ಅವರ ಆದೇಶದ ಮೇರೆಗೆ ಲತಾ ಮೋಹನ್ ಅವರು ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಶ್ಯಾಮಸಿಂಗ ಕಾಳೆ, ಉಪಾಧ್ಯಕ್ಷ ಕಲ್ಲಪ್ಪ ಪವಾರ್ ಸೇರಿದಂತೆ ಲಗಮು ಕಾಳೆ, ಗೋವಿಂದ ಚವ್ಹಾಣ, ರಂಗನಾಥ್ ಪವಾರ್, ಸದಾನಂದ ಕಾಳೆ, ಮೀಟನಪ್ಪ ಕಾಳೆ ಹಾಗೂ ಕಲ್ಲು ಚವ್ಹಾಣ ಉಪಸ್ಥಿತರಿದ್ದರು.

 ಕಲಬುರಗಿ ತಾಲೂಕಿನ ಸಿಂದಗಿ (ಬಿ), ಆಳಂದ ತಾಲೂಕಿನ ಝಳಕಿ (ಕೆ) ಗ್ರಾಮದ ಪಾರ್ದಿ ತಾಂಡಾ, ಮಾದನ ಹಿಪ್ಪರ್ಗಾ ಪಾರ್ದಿ ತಾಂಡಾ, ದರ್ಗಾಶಿರೂರ ತಾಂಡಾ, ಮೋಘಾ (ಬಿ), ಶಕಾಪುರ ತಾಂಡಾ, ಕಂಸರನಾಯಕ ತಾಂಡಾ ಹಾಗೂ ಆಳಂದ ಪಟ್ಟಣದ ವ್ಯಾಪ್ತಿಯಲ್ಲಿ ಜನರೊಂದಿಗೆ ಚರ್ಚೆ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಲಾಯಿತು.

 ಈ ವೇಳೆ ಸ್ಥಳೀಯರು ತಮ್ಮ ತಾಂಡಾಗಳಲ್ಲಿ ಮನೆ, ರಸ್ತೆ, ಕುಡಿಯುವ ನೀರು, ಶಾಲೆ, ಅಂಗನವಾಡಿ, ಆಸ್ಪತ್ರೆ ಹಾಗೂ ಸಾರಿಗೆ ಸೇರಿದಂತೆ ಮೂಲಸೌಕರ್ಯಗಳ ಕೊರತೆಯಿದೆ ಎಂದು ಅಳಲು ತೋಡಿಕೊಂಡರು. ಉದ್ಯೋಗದ ಕೊರತೆಯಿಂದ ಕೂಲಿ ಕೆಲಸಕ್ಕಾಗಿ ವಲಸೆ ಹೋಗಿ ಜೀವನ ನಡೆಸುವ ಪರಿಸ್ಥಿತಿ ಎದುರಾಗಿದೆ ಎಂದು ತಮ್ಮ ಸಮಸ್ಯೆಗಳನ್ನು ವಿವರಿಸಿದರು.

 ಕೆಲವು ನಿವಾಸಿಗಳು ಪೊಲೀಸ್ ಇಲಾಖೆಯಿಂದ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಆರೋಪಿಸಿದ್ದು, ತಮ್ಮ ಸಮಸ್ಯೆಗಳಿಗೆ ಸೂಕ್ತ ನ್ಯಾಯ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜನಪ್ರತಿನಿಧಿಗಳು ಚುನಾವಣೆಯಲ್ಲಿ ಗೆದ್ದ ನಂತರ ತಮ್ಮ ಪ್ರದೇಶಗಳತ್ತ ಗಮನ ಹರಿಸುತ್ತಿಲ್ಲ ಎಂಬ ಆರೋಪವೂ ಕೇಳಿಬಂತು. ಸಮಾಜದ ಜನರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ರಕ್ಷಣೆ ಹಾಗೂ ನ್ಯಾಯಕ್ಕಾಗಿ ಸರ್ಕಾರದ ಗಮನ ಅಗತ್ಯ ಎಂದು ಒತ್ತಾಯಿಸಿದರು.

 ಲತಾ ಮೋಹನ್ ಮಾತನಾಡಿ, “ಅನೇಕ ಕುಟುಂಬಗಳಿಗೆ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳಿಲ್ಲ. ಇದರಿಂದ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ದೊರೆಯುತ್ತಿಲ್ಲ. ಶಿಕ್ಷಣದಿಂದಲೂ ಅನೇಕ ಮಕ್ಕಳು ವಂಚಿತರಾಗಿದ್ದಾರೆ,” ಎಂದು ಹೇಳಿದರು.

 

 “ಬೇರೆಯವರ ಜಾಗದಲ್ಲಿ ಟೆಂಟ್ ಹಾಕಿಕೊಂಡು ಜೀವನ ನಡೆಸುತ್ತಿರುವ ಕುಟುಂಬಗಳಿದ್ದು, ನೂರಾರು ಮಕ್ಕಳು ಮೂಲಭೂತ ಸೌಲಭ್ಯಗಳಿಂದ ದೂರವಾಗಿದ್ದಾರೆ. ಅವರಿಗೆ ಅಂಗನವಾಡಿ ಮತ್ತು ಶಾಲಾ ಸೌಲಭ್ಯಗಳಿಲ್ಲ. ಸಮರ್ಪಕ ಬಸ್ ವ್ಯವಸ್ಥೆ ಹಾಗೂ ಆಸ್ಪತ್ರೆ ಸೌಲಭ್ಯವೂ ಇಲ್ಲ. ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ,” ಎಂದು ಅವರು ಹೇಳಿದರು.

 ತಾಂಡಾಗಳಿಗೆ ನೇರವಾಗಿ ಭೇಟಿ ನೀಡಿ ಅಲ್ಲಿನ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಲಾಗಿದ್ದು, ಹಲವು ಸಮಸ್ಯೆಗಳು ತಕ್ಷಣ ಪರಿಹಾರವಾಗಬೇಕಾಗಿದೆ. ಸಂಬಂಧಪಟ್ಟ ಇಲಾಖೆಗಳು ಹಾಗೂ ಸರ್ಕಾರ ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಮೂಲಸೌಕರ್ಯ ಮತ್ತು ಸರ್ಕಾರಿ ಸೌಲಭ್ಯಗಳನ್ನು ಒದಗಿಸಬೇಕು ಎಂದು ಲತಾ ಮೋಹನ್ ಒತ್ತಾಯಿಸಿದರು.

Share post:

spot_imgspot_img

Popular

More like this
Related

ಕಲಬುರಗಿಯಲ್ಲಿ ಜೋಯಾಲುಕ್ಕಾಸ್‌ನ ‘ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ’

ಕಲಬುರಗಿ: ಜಗತ್ತಿನ ಪ್ರಸಿದ್ಧ ಜ್ಯುವೆಲ್ಲರಿ ಬ್ರ್ಯಾಂಡ್ ಜೋಯಾಲುಕ್ಕಾಸ್, ಕಲಬುರಗಿ ನಗರದ ತನ್ನ...

ಕಲಬುರಗಿ| ಬಿ.ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡಿ: ರಾಜಕುಮಾರ್ ಪಾಟೀಲ್ ತೆಲ್ಕೂರ್

ಕಲಬುರಗಿ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ರೂಪಾಯಿ ಹಗರಣಕ್ಕೆ...

Kalaburagi| ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಆರ್ ಪಾಟೀಲ್ ರಾಜೀನಾಮೆ 

ಕಲಬುರಗಿ: ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ...

ಕಲಬುರಗಿ: 9,950ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ

ಕಲಬುರಗಿ: ಆಸ್ತಿ ವರ್ಗಾವಣೆಗೆ ಸಂಬಂಧಿಸಿದ ಕಡತವನ್ನು ವಿಲೇವಾರಿ ಮಾಡಲು ಲಂಚ ಪಡೆಯುತ್ತಿದ್ದ...