ಕಲಬುರಗಿ: ಆಸ್ತಿ ವರ್ಗಾವಣೆಗೆ ಸಂಬಂಧಿಸಿದ ಕಡತವನ್ನು ವಿಲೇವಾರಿ ಮಾಡಲು ಲಂಚ ಪಡೆಯುತ್ತಿದ್ದ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯನ್ನು ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಬಲೆಗೆ ಬೀಳಿಸಿ ಬಂಧಿಸಿದ್ದಾರೆ.
ಕರ್ನಾಟಕ ಲೋಕಾಯುಕ್ತ ಕಲಬುರಗಿ ಪೊಲೀಸ್ ಅಧೀಕ್ಷಕರಾದ ಸಿದ್ಧರಾಜು ಸಿ. ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಕಲಬುರಗಿ ಜಿಲ್ಲೆಯ ಹಾಗರಗಾ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ವೇದಾಂಗ್ ಅವರನ್ನು 9,950 ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ರೆಡ್ಹ್ಯಾಂಡ್ ಆಗಿ ಬಂಧಿಸಿದರು.
ದೂರುದಾರ ಸಂಜೀವ್ ಅವರು ನೀಡಿದ ದೂರಿನ ಪ್ರಕಾರ, ಅವರ ಮಾವ ಕಿಶನ್ ಪವಾರ್ ನಿಧನ ಹೊಂದಿದ್ದು, ಅವರ ಪತ್ನಿ ದಸ್ಮಾಬಾಯಿ ಕಿಶನ್ ಪವಾರ್ ಅವರು ವಯೋಸಹಜ ಕಾರಣಗಳಿಂದ ಮುಂಬೈನಲ್ಲಿ ವಾಸವಾಗಿದ್ದಾರೆ. ಹಾಗರಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಜಾದಪುರ ಗ್ರಾಮದ ಸರ್ವೆ ನಂ. 111/1 ರ ಖುಲ್ಲಾ ನಿವೇಶನ ಸಂಖ್ಯೆ 12 ಅನ್ನು ಮೃತ ಕಿಶನ್ ಪವಾರ್ ಅವರ ಹೆಸರಿನಿಂದ ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಡಲು ಅವರು ಮನವಿ ಮಾಡಿದ್ದರು.
ಈ ಸಂಬಂಧ ಅಗತ್ಯ ದಾಖಲೆಗಳಾದ ಮರಣ ಪ್ರಮಾಣಪತ್ರ, ಸ್ಟ್ಯಾಂಪ್ ಪತ್ರಗಳು ಹಾಗೂ ಇತರೆ ದಾಖಲೆಗಳನ್ನು ಗ್ರಾಮ ಪಂಚಾಯಿತಿಗೆ ಸಲ್ಲಿಸಲಾಗಿತ್ತು. ಆದರೆ ಆಸ್ತಿ ವರ್ಗಾವಣೆಯ ಪ್ರಕ್ರಿಯೆ ಪೂರ್ಣಗೊಳಿಸಲು ಕಾರ್ಯದರ್ಶಿ ವೇದಾಂಗ್ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ದೂರಿನ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿ, ಕಾರ್ಯದರ್ಶಿ ವೇದಾಂಗ್ ಅವರು 9,950 ಲಂಚ ಸ್ವೀಕರಿಸುತ್ತಿದ್ದ ವೇಳೆ ಅವರನ್ನು ರೆಡ್ಹ್ಯಾಂಡ್ ಆಗಿ ಬಂಧಿಸಿದರು.
ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ರವಿ ಪವಾರ್ ಅವರ ನೇತೃತ್ವದಲ್ಲಿ ತನಿಖೆ ನಡೆಸಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


