ಕಲಬುರಗಿ: ಐರಾವತ ಬಸ್ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ಮುಖಾಮುಖಿ ಢಿಕ್ಕಿ ಸಂಭವಿಸಿ ಸ್ಥಳದಲ್ಲೇ ಇಬ್ಬರು ಬಸ್ ಚಾಲಕರು ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಕಮಲಾಪುರ ತಾಲೂಕಿನ ಡೊಂಗರಗಾoವ ಕ್ರಾಸ್ ಸಮೀಪ ಶನಿವಾರ ಸಂಜೆ ನಡೆದಿದೆ.
ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ತುಕಾರಾಮ ಹಾಗೂ ಐರಾವತ ಬಸ್ ಚಾಲಕ ಶಿವಾನಂದ ರೆಡ್ಡಿ ಮೃತಪಟ್ಟವರೆಂದು ತಿಳಿದುಬಂದಿದೆ.
ಐರಾವತ ಬಸ್ ಬೀದರ್ ನಿಂದ ದಾವಣಗೆರೆ ಕಡೆಗೆ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ಕಲಬುರಗಿಯಿಂದ ಬೀದರ್ ಕಡೆಗೆ ಹೋಗುತ್ತಿದ್ದ ವೇಳೆ ಮುಖಾಮುಖಿ ಢಿಕ್ಕಿಯಾಗಿವೆ. ಢಿಕ್ಕಿ ರಭಸಕ್ಕೆ ಓರ್ವ ಚಾಲಕ ಮೃತಪಟ್ಟರೆ, ಗಂಭೀರ ಗಾಯಗೊಂಡ ಇನ್ನೋರ್ವ ಚಾಲಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.


