ಕಲಬುರಗಿಗೆ ನಿರಂತರ ನೀರು ಪೂರೈಕೆ ಯೋಜನೆಯ ಕಾಮಗಾರಿ ಮುಗಿಸಿ: ಸಚಿವ ಯತೀಂದ್ರ ಸಿದ್ಧರಾಮಯ್ಯ ವಾರ್ನಿಂಗ್

Date:

ಕಲಬುರಗಿ: ಕಲಬುರಗಿ ಮಹಾನಗರಕ್ಕೆ ನಿರಂತರ ಕುಡಿಯುವ ನೀರು ಪೂರೈಕೆ 24×7 ಯೋಜನೆಯ ಕಾಮಗಾರಿ ಚುರುಕುಗೊಳಿಸಿ ಜೂನ್ 2027 ರೊಳಗೆ ಕಾಮಗಾರಿ ಮುಗಿಸುವಂತೆ ಎಲ್ & ಟಿ ಕಂಪನಿಗೆ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಗಡುವು ನೀಡಿದರು.

ಸೋಮವಾರ ಇಲ್ಲಿನ ಜಲ ಭವನದಲ್ಲಿ ನಡೆದ ಕಲಬುರಗಿ ಮಹಾನಗರ ಪಾಲಿಕೆ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ, ಕೆ.ಯು.ಐ.ಡಿ.ಎಫ್.ಸಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಉದ್ದೇಶಿತ ಯೋಜನೆ ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ‌ ಸಚಿವರು, ನಾಲ್ಕು ಬಾರಿ ಯೋಜನೆ ಪೂರ್ಣಕ್ಕೆ ಕಾಲಮಿತಿ ವಿಸ್ತರಣೆ ಮಾಡಿದ್ದರು, ಇನ್ನು‌ ಮುಗಿದಿಲ್ಲ ಎಂದರೆ ನಾವು ಜನರಿಗೆ ನೀಡಿದ‌ ವಾಗ್ದಾನ ಪೂರೈಸುವುದೆ ಹೇಗೆ ಎಂದು ಪ್ರಶ್ನಿಸಿದಲ್ಲದೆ ಈ ಬಾರಿ ಮತ್ತೆ ವಿಸ್ತರಣೆ ಮಾಡಲ್ಲ. ಕಾಲಮಿತಿಯಲ್ಲಿ ಮುಗಿಸಬೇಕು ಇಲ್ಲದಿದ್ದರೆ ಕಂಪನಿ ಮತ್ತು ಮೇಲುಸ್ತುವಾರಿ ವಹಿಸಬೇಕಾದ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

24×7 ನಿರಂತರ ಕುಡಿಯುವ ನೀರು ಯೋಜನೆ ಕಾಮಗಾರಿಯಲ್ಲಿ ನಗರದ 55 ವಾರ್ಡುಗಳಲ್ಲಿ 62,767 ಪೈಕಿ 30,907 ಮನೆಗೆ ಮಾತ್ರ ನಲ್ಲಿ ಸಂಪರ್ಕ‌ ಕಲ್ಪಿಸಿದ್ದು, 31,860 ಬಾಕಿ ಇವೆ. ಉಳಿದ ಮನೆಗಳಿಗೂ ಬೇಗ ಸಂಪರ್ಕ ಕಲ್ಪಿಸಬೇಕಿದೆ. ಇನ್ನು ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಕಳಪೆ ಕಾಮಗಾರಿಗೆ ಇಲ್ಲಿ ಅವಕಾಶ ಇಲ್ಲ ಎಂದರು.

ಮೇಯರ್ ವರ್ಷಾ ರಾಜೀವ ಜಾನೆ ಮಾತನಾಡಿ ಹೆಚ್ಚಿನ ಕಾರ್ಮಿಕರನ್ನು ನಿಯೋಜಿಸಿ ಕಾಮಗಾರಿಗೆ ವೇಗ ನೀಡಬೇಕಾದ ಎಲ್ & ಟಿ ಕಂಪನಿ ಇತ್ತೀಚೆಗೆ ಏಕಾಏಕಿ 50 ಜನ ಸಿಬ್ಬಂದಿ ತೆಗೆದು ಹಾಕಿದೆ ಎಂದು ಸಚಿವರ ಗಮನ‌ ಸೆಳೆದರು. ಕಾರ್ಮಿಕರ ಕೊರತೆಯಿಂದಲೆ ಕಾಮಗಾರಿ ವಿಳಂಬವಾಗಿರುವಾದ ಇರುವವರನ್ನು ತೆಗೆದರೆ ಹೇಗೆ? ಏಕಾಏಕಾ ಅವರನ್ನು ತೆಗೆದರೆ ಹೇಗೆ ಎಂದು ಕೂಡಲೆ‌ ಅವರೆಲ್ಲರನ್ನು ಕೆಲಸಕ್ಕೆ ತೆಗೆದುಕೊಳ್ಳಿ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಕಂಪನಿ ಅಧಿಕಾರಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ಈ ಯೋಜನೆಯಡಿ ‘ಎ’ ಮತ್ತು ‘ಬಿ’ ಸ್ಕೀಮ್ ಎಂದು ವಿಂಗಡಿಸಿದ್ದು, ಈ ಅಂಕಿ ಸಂಖ್ಯೆ ಕೇವಲ ‘ಎ’ ಸ್ಕೀಮಿಗೆ ಸಂಬಂಧಿಸಿದೆ. ‘ಬಿ’ ಸ್ಕೀಮ್ ನಲ್ಲಿ ರಿಂಗ್ ರಸ್ತೆ ಹೊರಗಡೆ ಪ್ರದೇಶದ ಸುಮಾರು 35,000 ಮನೆಗಳಿವೆ. ಇವೆಲ್ಲ ಮನೆಗಳಿಗೆ ನಿರಂತರ ಪೂರೈಸಬೇಕಾದರೆ ಭೀಮಾ, ಬೆಣ್ಣೆತೋರಾ ಜಲಮೂಲದಿಂದ ಸಾಧ್ಯವಿಲ್ಲ. ನಗರಕ್ಕೆ ಭೀಮಾ ನದಿ ಮೂಲಕ ಪೂರೈಸುವ ನೀರು ಕಲುಷಿತವಾಗಿದೆ. ಕುಡಿಯಕ್ಕೆ ಯೋಗ್ಯವಿಲ್ಲ. ಹೀಗಾಗಿ ನಾರಾಯಣಪುರ ಜಲಾಶಯದಿಂದ ನೀರು ಹರಿಸುವ 1,850 ಕೋಟಿ ರೂ. ಮೊತ್ತದ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಮತ್ತು ನಗರದ ಎಲ್ಲಾ ವಾರ್ಡ್ ಗಳಿಗೆ ನಿರಂತರ‌ ನೀರು ಸರಬರಾಜು ಮಾಡಲು ಸಾಧ್ಯವಾಗಲಿದೆ ಎಂದರು.

ಇನ್ನು ನಗರದಲ್ಲಿ 40 ವರ್ಷದ ಹಳೇ ಚರಂಡಿ ವ್ಯವಸ್ಥೆ ಇರುವುದರಿಂದ ಎಲ್ಲೆಂದರಲ್ಲಿ ಸೋರಿಕೆ ಕಂಡು ದಿನದಿಂದ‌ ದಿನಕ್ಕೆ ನೈರ್ಮಲ್ಯ ಹದಗೆಡುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ನಗರದಲ್ಲಿ 700 ಕಿ.ಮೀ ಉದ್ದದ ಹೊಸದಾಗಿ ಒಳಚರಂಡಿ ನಿರ್ಮಾಣ ಕಾಮಗಾರಿ ಕೈಗೊಳ್ಳುವ ಅವಶ್ಯಕತೆ ಇದೆ ಎಂದು ಸಚಿವರ‌ ಗಮನಕ್ಕೆ ತಂದರು. ಇದಕ್ಕೆ‌ ಸ್ಪಂದಿಸಿದ ಸಚಿವರು ಯಾವೆಲ್ಲ ಮೂಲಗಳಿಂದ ಅರ್ಥಿಕ ಸಂಪನ್ಮೂಲ ಕ್ರೂಢಿಕರಿಸಿ ಒಳಚರಂಡಿ ಯೋಜನೆ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಕೂಲಂಕುಷವಾಗಿ ಪ್ರಸ್ತಾವನೆ ತಯಾರಿಸುವಂತೆ ಪಾಲಿಕೆ ಆಯುಕ್ತರಿಗೆ ನಗರಾಭಿವೃದ್ಧಿ ಸಚಿವರು ಸೂಚಿಸಿದರು.

ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ‌ ಮಾತನಾಡಿ, ಎಲ್‌& ಟಿ‌ ಕಂಪನಿ ನಿ‌ಧಾನಗತಿ ಕಾರ್ಯ ಹಿನ್ನೆಲೆಯಲ್ಲಿ ಇದುವರೆಗೆ ಕಂಪನಿಗೆ 54 ಕೋಟಿ ರೂ. ದಂಡ‌ ವಿಧಿಸಿದೆ‌. ಪ್ರಸ್ತುತ ಬರ ಪರಿಸ್ಥಿತಿ ಕಾರಣ 35 ಟ್ಯಾಂಕರ್ ಮೂಲಕ ಪ್ರತಿ ದಿನ 150 ಟ್ರಿಪ್ ಮೂಲಕ ಬೇಡಿಕೆ‌ ಇದ್ದ ಬಡಾವಣೆಗಳಿಗೆ ನೀರು ಪೂರೈಸಲಾಗುತ್ತಿದೆ ಎಂದಾಗ, ಸಭೆಯಲ್ಲಿದ್ದ ಶಾಸಕರು ಮತ್ತು ಪಾಲಿಕೆ ಮೇಯರ್ ಈ ಸಂಖ್ಯೆ ಸಾಲುತ್ತಿಲ್ಲ, ಟ್ರಿಪ್ ಸಂಖ್ಯೆ ಹೆಚ್ಚಿಸಬೇಕೆಂದು ಒತ್ತಾಯಿಸಿದ್ದಾಗ ಸಚಿವ ಯತೀಂದ್ರ ಸಿದ್ದರಾಮಯ್ಯ ಸ್ಪಂದಿಸಿ, ಕೂಡಲೆ 5-10 ಹೆಚ್ಚುವರಿ ಟ್ಯಾಂಕರ್ ಪಡೆದು ಟ್ರಿಪ್ ಹೆಚ್ಚಿಸಬೇಕೆಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ‌ ನಗರ ವಿಕಾಸ ಯೋಜನೆ ಹಂತ 2ರಲ್ಲಿ 127.50 ಕೋಟಿ ರೂ. ಮೊತ್ತದಲ್ಲಿ ಕೈಗೊಳ್ಳುತ್ತಿರುವ 54 ಕಾಮಗಾರಿಗಳು ಮತ್ತು ಅಮೃತ್ 2.0 ನಲ್ಲಿ 9.40 ಕೋಟಿ ರೂ. ವೆಚ್ಚದಲ್ಲಿ ಐದು ಉದ್ಯಾನವನ ಸೇರಿದಂತೆ 8 ಕಾಮಗಾರಿಗಳಿಗೆ ವೇಗ ನೀಡಿ ಕಾಲಮಿತಿಯಲ್ಲಿ ಪುರ್ಣಗೊಳಿಸುವಂತೆಯೂ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಶುದ್ಧ ಕುಡಿಯುವ ನೀರು ಪೂರೈಸಿ:

ಕಲಬುರಗಿ ನಗರಕ್ಕೆ ಶೇ.100ರಷ್ಟು ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದು ಪಾಲಿಕೆ, ಕೆ.ಯು.ಐ.ಡಿ.ಎಫ್.ಸಿ ಸಂಸ್ಥೆಯ ಆದ್ಯತೆಯಾಗಿರಬೇಕು. ನಗರಕ್ಕೆ ನೀರು ಪೂರೈಕೆ ಮಾಡುವ 102 ಎಂ.ಎಲ್.ಡಿ. ನೀರು ಸಂಪೂರ್ಣ ಸಂಸ್ಕರಿಸಿದ ಬಳಿಕವೆ ಪೂರೈಸಬೇಕು. ಭೀಮಾ ನದಿಗೆ ಚರಂಡಿ ನೀರು ಸೇರದಂತೆ ಎಚ್ಚರ ವಹಿಸಿಬೇಕು ಎಂದರು.

 

ಪ್ರಸ್ತುತ ಬರದ ಛಾಯೆ ಕಾರಣ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಬಾರದು. ಬೇಡಿಕೆ ಇದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಅಗತ್ಯವಿದ್ದೆಡೆ ಕೊಳವೆ ಬಾವಿ ಕೊರೆಯಬೇಕು. ಬಾವಿ, ಬಾಡಿಗೆ ಕೊಳವೆ ಬಾವಿ ಮೂಲಕ ನೀರು ಪಡೆದು ಸಾರ್ವಜನಿಕರಿಗೆ ನೀರು ಪೂರೈಸಿಬೇಕು ಎಂದರು.

 

ಕಲಬುರಗಿ ಮಹಾನಗರ ಪಾಲಿಕೆಯು ಮನೆ ಮನೆಗೆ ಹೋಗಿ ಕಸ‌ ಸಂಗ್ರಹಣೆ ಮಾಡಬೇಕು. ಶೇ.100ರಷ್ಟು ಕಸ‌ ವಿಂಗಡಣೆ ಮಾಡಿಯೆ ಮನೆಗಳಿಂದ ಪಡೆಯಬೇಕು. ವಿಂಗಡಿಸಿ ಕಸ‌ ನೀಡದವರಿಗೆ ದಂಡ ಹಾಕಬೇಕು. ದಾವಣಗೆರೆಯಲ್ಲಿ ಶೇ.100ರಷ್ಟು ಕಸ ವಿಂಗಡಣೆ ಮಾಡಿಯೆ ಸಂಗ್ರಹಿಸಲಾಗುತ್ತದೆ. ವೈಜ್ಞಾನಿಕವಾಗಿ ಘನತ್ಯಾಜ್ಯ ವಿಲೇವಾರಿ ಮಾಡಬೇಕು. ಬೀದಿ ಬದಿ ನಾಯಿಗಳಿಗೆ ಶೆಲ್ಟರ್ ಸ್ಥಾಪಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.

 

ನಗರದ‌ ನಿವಾಸಿಗಳಿಗೆ ಇ-ಖಾತಾ ಸೇರಿದಂತೆ ಸಾರ್ವಜನಿಕ ಸೇವೆಗಳಲ್ಲಿ ವ್ಯತ್ಯಯವಾಗಬಾರದು. ಅನಗತ್ಯ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸಬಾರದು. ನಿವಾಸಿಗಳು ಮೂಲಸೌಕರ್ಯ ಕೊರತೆ, ಸೇವೆಯಲ್ಲಿ ವ್ಯತ್ಯಯಕ್ಕೆ ಸಂಬಂಧಿಸಿದಂತೆ ಅವರ ಕುಮದುಕೊರತೆ, ದೂರು ಆಲಿಸಲು ವ್ಯವಸ್ಥೆ ಮಾಡಬೇಕು. ಯಾವ ಸಮಸ್ಯೆಗಳಿಗೆ ಯಾರನ್ನು ಸಂಪರ್ಕಿಸಬೇಕು ಎಂಬುದನ್ನು ಸಾರ್ವಜನಿಕವಾಗಿ ತಿಳಿಸಿದಲ್ಲೆ ಸರ್ಕಾರ ಇನ್ನು ಉತ್ತಮ ಸೇವೆ ನೀಡಲು ಸಾಧ್ಯ ಎಂದರು.

 

ಪ್ರಾಧಿಕಾರ‌ ಸಭೆ ಮಾಸಿಕ‌ ಕರೆಯಿರಿ:

 

ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶಿಲಿಸಿದ ಸಚಿವರಿ, ಪ್ರಾಧಿಕಾರದ ಸಭೆ ಮಾಸಿಕವಾಗಿ ಕರೆದು ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ಪ್ರಸ್ತುತ ಚಾಲ್ತಿಯಲ್ಲಿರುವ ಹಾಗರಗಾ, ಕುಸನೂರು, ಅಟಲ್‌ ಬಿಹಾರಿ ವಾಜಪೇಯಿ ಬಡಾವಣೆ ವಸತಿ ಯೋಜನೆಗಳು ಸೇರಿದಂತೆ ಬಾಕಿ ಇರುವ ಸಿ.ಎ, ಮೂಲೆ‌ ನಿವೇಶನ ಹರಾಜು ಮಾಡಬೇಕು‌ ಎಂದರು. ಇದಕ್ಕು ಪ್ರಾಧಿಕಾರದ ಆಯುಕ್ತ ಶೈಲೆಂದ್ರ‌ಸಿಂಗ್ ಮಾತನಾಡಿ ಪ್ರಾಧಿಕಾರಕ್ಕೆ ಮಂಜೂರಾದ 41 ಹುದ್ದೆಗಳ ಪೈಕಿ‌ ಪ್ರಸ್ತುತ 11 ಹುದ್ದೆ ಮಾತ್ರ ತುಂಬಿದ್ದರಿಂದ ದೈನಂದಿನ ಆಡಳಿತ ಮತ್ತು ಟೆಂಡರ್ ಪ್ರಕ್ರಿಯೆ ನಡೆಸಲು ಕಷ್ಟವಾಗುತ್ತಿದೆಮ‌ಹುದ್ದೆ ಭರ್ತಿಗೆ ಕ್ರಮ ವಹಿಸಬೇಕು. 25 ಲಕ್ಷ ಮೇಲ್ಪಟ್ಟ ಯೋಜನೆಗೆ ಸರ್ಕಾರದ ಹಂತದಲ್ಲಿ ತ್ವರಿತಗತಿಯಲ್ಲಿ ಅನುನೋದನೆ ಸಿಕ್ಕಲ್ಲ ಅನುಕೂಲವಾಗಲಿದೆ ಎಂದರು.

 

ಸಭೆಯಲ್ಲಿ ವಿಧಾನ ಪರಿಷತ್ ಶಾಸಕ ಜಗದೇವ ಗುತ್ತೇದಾರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಕಲಬುರಗಿ‌ ಮಹಾನಗರ ಪಾಲಿಕೆ ಮೇಯರ್ ವರ್ಷಾ ರಾಜೀವ ಜಾನೆ, ಉಪ ಮೇಯರ್ ತೃಪ್ತಿ ಲಾಖೆ, ಸಾರ್ವಜನಿಕ‌ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆ ಅನುಪಮಾ ಕಮಕನೂರ, ಅರೋಗ್ಯ ಸ್ಥಾಯಿ‌ ಸಮಿತಿ ಅಧ್ಯಕ್ಷ ಅಯಾಜ್ ಖಾನ್, ಪಾಲಿಕೆ‌ ಸದಸ್ಯೆ ರೇಣುಕಾ, ಕೆ.ಯು.ಐ.ಡಿ.ಎಫ್.ಸಿ ಅಧೀಕ್ಷಕ ಅಭಿಯಂತ ಆರ್.ಪಿ.ಜಾಧವ ಸೇರಿದಂತೆ ಪಾಲಿಕೆ ಮತ್ತು ಪ್ರಾಧಿಕಾರದ ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

Share post:

spot_imgspot_img

Popular

More like this
Related

ಕಲಬುರಗಿ| ಎಸ್ಐಆರ್: ಶೇ.100ರಷ್ಟು ಗಣತಿ ನಮೂನೆ ವಿತರಣೆ ಮಾಡಿ: ವಿ.ಅನ್ಬುಕುಮಾರ್

ಕಲಬುರಗಿ: ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಬಿ.ಎಲ್.ಓ.ಗಳು ತಮ್ಮ ಬಳಿ...

Kalaburagi| ಊಟ ಸೇವನೆಯಿಂದ ಮಕ್ಕಳ ಅಸ್ವಸ್ಥ ಪ್ರಕರಣ: ಶಾಲೆಯ ಪ್ರಭಾರಿ ಪ್ರಾಂಶುಪಾಲ, ವಾರ್ಡನ್ ಅಮಾನತ್ತು

ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ...

ಕಲಬುರಗಿ| ಹೈಕೋರ್ಟ್ ಕ್ರಾಸ್ ಬಳಿ ಲಾರಿ-ಕಾರು ಭೀಕರ ಡಿಕ್ಕಿ; ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

ಕಲಬುರಗಿ: ನಗರದ ಹೊರವಲಯದ ಹೈಕೋರ್ಟ್ ಕ್ರಾಸ್ ಸಮೀಪ ಶುಕ್ರವಾರ ಸಂಭವಿಸಿದ ಭೀಕರ...

ಕಲಬುರಗಿ| ಲಂಚ ಪಡೆದ ತಹಸೀಲ್ದಾರರಿಗೆ 4 ವರ್ಷ ಜೈಲು ಶಿಕ್ಷೆ, 20 ಸಾವಿರ ದಂಡ!

ಕಲಬುರಗಿ: ಲಂಚ ಸ್ವೀಕರಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಫಜಲಪುರ ತಾಲೂಕಿನ ತಹಸೀಲ್ದಾರರಾಗಿದ್ದ...