ನವ ಕಲಬುರಗಿ ನಿರ್ಮಾಣಕ್ಕೆ ಪಣ: 300 ಕೋಟಿ ರೂ. ವೆಚ್ಚದಲ್ಲಿ ನಗರಾಭಿವೃದ್ಧಿಗೆ ಆದ್ಯತೆ: ಪ್ರಿಯಾಂಕ್ ಖರ್ಗೆ

Date:

Share post:

ಕಲಬುರಗಿ: ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಕಲಬುರಗಿ ನಗರದ ನಿವಾಸಿಗಳ ಜೀವನಮಟ್ಟ ಸುಧಾರಣೆ ಮತ್ತು ಹಸಿರು-ನೀಲಿ ಸುಸ್ಥಿರ ಅಭಿವೃದ್ಧಿ ಯೋಜನೆಗಳನ್ನು ಹಾಕಿಕೊಳ್ಳುವ ಮೂಲಕ ನವ ಕಲಬುರಗಿ ನಿರ್ಮಾಣ ಮಾಡಲು ಸರ್ಕಾರ ಪಣತೊಟ್ಟಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ರವಿವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಭವಿಷ್ಯದಲ್ಲಿ ಕಲಬುರಗಿ ನಗರ ಹೇಗಿರಬೇಕೆಂಬ ಪರಿಕಲ್ಪನೆಯೊಂದಿಗೆ ಸಕಲ ಸೌಲಭ್ಯವುಳ್ಳ ನಗವನ್ನಾಗಿಸಲು ಈಗಾಗಲೆ ಅರ್ಬನ್ ಪ್ಲ್ಯಾನರ್‌ಗಳ ಸೇವೆ ಪಡೆದು ನೀಲಿ ನಕ್ಷೆ ಸಿದ್ದಪಡಿಸಿದ್ದು, ಅದರಂತೆ ಅಭಿವೃದ್ಧಿ ಕೆಲಸ ಕಾರ್ಯಗಳು ಹಂತ-ಹಂತವಾಗಿ ಮಾಡಲಾಗುತ್ತಿದೆ ಎಂದರು.

ಪ್ರಪ್ರಥಮ ಬಾರಿಗೆ ನಮ್ಮ ಸರ್ಕಾರ ಕಲಬುರಗಿ ಮಹಾನಗರದಲ್ಲಿ ರೋಡ್ ಅಡಿಟ್ ಮಾಡಿಸಿದೆ. 783.82 ಕಿ.ಮೀ ನೆಲಗಟ್ಟಿದ ರಸ್ತೆ, 219.96 ಕಿ.ಮೀ. ನೆಲಹಾಸು ಇಲ್ಲದ ರಸ್ತೆ ಇದ್ದು, ಒಟ್ಟಾರೆ 1003.78 ಕಿ.ಮೀ. ರಸ್ತೆ ಜಾಲ ನಗರದಲ್ಲಿರುವುದನ್ನು ಗುರುತಿಸಲಾಗಿದೆ. ಸುಮಾರು 300 ಕೋಟಿ ರೂ. ರಸ್ತೆ ಸುಧಾರಣೆಗೆ ಅವಶ್ಯಕವಾಗಿದ್ದು, ಇದರಲ್ಲಿ ಈಗಾಗಲೆ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ 2.0ರಡಿ 53 ರಸ್ತೆಗಳನ್ನು 127.50 ಕೋಟಿ ರೂ. ವೆಚ್ಚದಲ್ಲಿ, ಎಸ್.ಎಫ್.ಸಿ. ಅನುದಾನದಲ್ಲಿ ಕಲಬುರಗಿ ಉತ್ತರ ಕ್ಷೇತ್ರದಲ್ಲಿ 10 ರಸ್ತೆಗಳನ್ನು 25 ಕೋಟಿ ರೂ. ವೆಚ್ಚದಲ್ಲಿ ಹಾಗೂ 12.44 ಕೋಟಿ ರೂ. ವೆಚ್ಚದಲ್ಲಿ ಎನ್.ಸಿ.ಎ.ಪಿ ಅನುದಾನದಡಿ ಎಸ್.ವಿ.ಪಿ. ವೃತ್ತ-ಜಗತ್ ವೃತ್ತ, ಜಗತ್ ವೃತ್ತ-ಹುಮನಬಾದ ಬೇಸ್ ಹಾಗೂ ಅನ್ನಪೂರ್ಣ ಕ್ರಾಸ್-ಸೇಡಂ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಒಟ್ಟಾರೆಯಾಗಿ 164 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.

ಇದಲ್ಲದೆ 31 ವಾರ್ಡ್ಗಳಲ್ಲಿ 60.51 ಕಿ.ಮೀ ರಸ್ತೆ ನಿರ್ಮಾಣ ಮತ್ತು ರಿಲೇಯಿಂಗ್ ಮಾಡಬೇಕಾಗಿದ್ದು, ಇದಕ್ಕಾಗಿ 157.62 ಕೋಟಿ ರೂ. ಡಿ.ಪಿ.ಆರ್. ಸಿದ್ದಪಡಿಸಲಾಗಿದೆ. ಮುಂದಿನ ದಿನದಲ್ಲಿ ಈ ರಸ್ತೆಗಳ ನಿರ್ಮಾಣದಿಂದ ಸಂಪರ್ಕ ಜಾಲ ವೃದ್ದಿಯಾಗಿ ನಗರ ನಿವಾಸಿಗಳಿಗೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.

ಕಲಬುರಗಿ ಮಹಾನಗರ ಪಾಲಿಕೆಯಿಂದ 2024-25ನೇ ಸಾಲಿನ ಕೆ.ಕೆ.ಆರ್.ಡಿ.ಬಿ. ಮ್ಯಾಕ್ರೋ ಯೋಜನೆಯಡಿ ಒಟ್ಟು 4 ನಾಲ್ಕು ಉದ್ಯಾನವನ 7.50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, 3 ಕಾಮಗಾರಿಗಳು ಟೆಂಡರ್ ಪ್ರಕ್ರಿಯೆಯಲ್ಲಿದ್ದರೆ, ಅಕ್ಕಮಹಾದೇವಿ ಕಾಲೋನಿ ಉದ್ಯಾನವನ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಅಮೃತ 2.0 ಯೋಜನೆಯಡಿ 4 ಕೋಟಿ ರೂ. ವೆಚ್ಚದಲ್ಲಿ ಐದು ಗಾರ್ಡನ್ ಅಭಿವೃದ್ಧಿಪಡಿಸಲಾಗುತ್ತಿದೆ. ಇದಲ್ಲದೆ ಪಾಲಿಕೆಯಿಂದ ಗುಲ್ಶನ್ ಗಾರ್ಡನ್ 3 ಕೋಟಿ ರೂ., ಧರಿಯಾಪೂರ-ಕೊಟನೂರ ಜಿ.ಡಿ.ಎ ಲೇಔಟ್‌ನಲ್ಲಿರುವ ರಾಜೀವ ಗಾಂಧಿ ಥೀಮ್ ಪಾರ್ಕ್ 3 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಸಚಿವರು ವಿವರಿಸಿದರು.

ಇದಲ್ಲದೆ ಕೆ.ಆರ್.ಐ.ಡಿ.ಎಲ್ ಸಂಸ್ಥೆಯಿಂದ ಕಲಬುರಗಿ ದಕ್ಷಿಣ ಮತಕ್ಷೇತ್ರದ ವಿವಿಧ ವಾರ್ಡ್ ಗಳಲ್ಲಿ ಸುಮಾರು 2.10 ಕೋಟಿ ರೂ. ವೆಚ್ಚದಲ್ಲಿ 7 ಉದ್ಯಾನವನ ಅಭಿವೃದ್ಧಿಪಡಿಸಲಾಗುತ್ತಿದ್ದು, ಪ್ರಮುಖವಾಗಿ ಅಕ್ಕಮಹಾದೇವಿ ಕಾಲೋನಿ, ಹರಿಕೃಷ್ಣ ನಗರ, ತಿಲಕ್ ನಗರ, ಘಾಟಗೇ ಲೇಔಟ್ ಹಾಗೂ ಬಸವ ನಗರ ಉದ್ಯಾನವನಗಳು ಸೇರಿವೆ. ಇದರ ಜೊತೆಗೆ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ 4.50 ಕೋಟಿ ರೂ. ವೆಚ್ಚದಲಿ 18 ಪಾರ್ಕ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಒಟ್ಟಾರೆಯಾಗಿ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದಿಂದ 22.40 ಕೋಟಿ ರೂ. ವೆಚ್ಚದಲ್ಲಿ ನಗರದಾದ್ಯಂತ 33 ಗಾರ್ಡನ್ ಮತ್ತು ಪಾರ್ಕ್ ಗಳು ತನ್ನ ಸೌಂದರ್ಯವನ್ನು ಮರುಪಡೆಯಲಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

25 ಸರ್ಕಲ್ ಸೌಂದರ್ಯೀಕರಣ:

ಕಲಬುರಗಿ ಮಹಾನಗರ ಪಾಲಿಕೆ ಮತ್ತು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಗರದಲ್ಲಿ 25 ಜಂಕ್ಷನ/ ಸರ್ಕಲ್ ಸೌಂಧಯೀಕರಣ ಮಾಡಲಾಗುತ್ತಿದ್ದು, ಇದಕ್ಕಾಗಿ ಸುಮಾರು 13.40 ಕೊಟಿ ರೂ. ವ್ಯಯ ಮಾಡಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ತಿಳಿಸಿದರು.

ಮಹಾನಗರ ಪಾಲಿಕೆಯಿಂದ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ 2.0 ರಡಿ 4 ಕೋಟಿ ರೂ. ವೆಚ್ಚದಲ್ಲಿ ಪ್ರಮುಖವಾಗಿ ಎಸ್.ವಿ.ಪಿ. ಸರ್ಕಲ್, ಸರ್ಕಾರಿ ಆಸ್ಪತ್ರೆ ಸರ್ಕಲ್, ಹಳೇ ಆರ್.ಟಿ.ಓ ಸರ್ಕಲ್, ಜಗತ್ ಸರ್ಕಲ್, ಉದನೂರ್ ಕ್ರಾಸ್ ಸರ್ಕಲ್, ಶಹಾಬಜಾರ್ ಸರ್ಕಲ್, ಬಸವೇಶ್ವರ ಸರ್ಕಲ್ ಹಾಗೂ ಮಹರ್ಷಿ ವಾಲ್ಮೀಕಿ ವೃತ್ತ ಸೌಂದರ್ಯೀಕರಣ ಮಾಡಲಾಗುತ್ತಿದ್ದು,. ಈ ಎಲ್ಲಾ ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ. ಇನ್ನು ಎನ್.ಸಿ.ಎ.ಪಿ ಯೋಜನೆಯಡಿ 2022-23ನೇ ಸಾಲಿನಲ್ಲಿ 2 ಕೋಟಿ ರೂ ವೆಚ್ಚದಲ್ಲಿ 5 ಜಂಕ್ಷನ್ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿದ್ದು, 4 ಕಾಮಗಾರಿ ಪೂರ್ಣಗೊಂಡಿದ್ದು, ಒಂದು ಕಾಮಗಾರಿ ಪ್ರಗತಿಯಲ್ಲಿದೆ. 2023-24ನೇ ಸಾಲಿನಲ್ಲೆ ತೆಗೆದುಕೊಂಡು ಎರಡು ಕಾಮಗಾರಿಗಳು ಪ್ರಗತಿಯಲ್ಲಿವೆ. ಇದರಲ್ಲಿ ಸಿಟಿ ಬಸ್ ಸ್ಟ್ಯಾಂಡ್, ಹೆರಿಟೇಜ್ ಹೋಟೆಲ್, ಎಸ್.ಬಿ.ಪೆಟ್ರೋಲ್ ಪಂಪ್, ಶಹಾಬಾದ ಕ್ರಾಸ್ ಇಲ್ಲಿ ಜಂಕ್ಷಣ ಸೌಂದರ್ಯೀಕರಣ ಕೆಲಸ ಮತ್ತು ರಸ್ತೆ ಸಂಚಾರಿಗಳು ಮುಕ್ತವಾಗಿ ಎಡ ತಿರುವ ಪಡೆಯಲು ರಸ್ತೆ ಅಗಲೀಕರಣ ಮಾಡಲಾಗಿದೆ. ತಾಜ ಸುಲ್ತಾನಪುರ ರಸ್ತೆ ಸರ್ಕಲ್ ಪ್ರಗತಿಯಲ್ಲಿದ್ದು, ಸೇಡಂ ರಸ್ತೆ ಸರ್ಕಲ್ ಮತ್ತು ಗೋವಾ ಹೋಟೆಲ್ ಸರ್ಕಲ್ ಕಾಮಗಾರಿಗಳು ಇನ್ನಷ್ಟೆ ಆರಂಭವಾಗಬೇಕಿದೆ ಎಂದರು.

ಇನ್ನು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ 5.80 ಕೋಟಿ ರೂ. ವೆಚ್ಚದಲ್ಲಿ ನಗರದಲ್ಲಿನ ಪ್ರಮುಖ 10 ಜಂಕ್ಷನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ. ಇದರಲ್ಲಿ ಪ್ರಮುಖವಾಗಿ 128.85 ಲಕ್ಷ ರೂ. ವೆಚ್ಚದ ರಾಮ ಮಂದಿರ ಜಂಕ್ಷನ್, 146.65 ಲಕ್ಷ ರೂ. ವೆಚ್ಚದ ಆಳಂದ ಚೆಕ್ ಪೋಸ್ಟ್ ಜಂಕ್ಷನ್, 198.50 ಲಕ್ಷ ರೂ. ವೆಚ್ಚದ ಹುಮನಾಬಾದ ಜಂಕ್ಷನ್, 103 ಲಕ್ಷ ರೂ. ವೆಚ್ಚದ ಅಫಜಲಪೂರ ಜಂಕ್ಷನ್ ಸೇರಿದೆ. ಇದಲ್ಲದೆ ಶಹಾಬಾದ ರಸ್ತೆ, ತಾಜ ಸುಲ್ತಾನಪುರ, ಸೂಪರ್ ಮಾರ್ಕೆಟ್, ನಾಗನಹಳ್ಳಿ, ಹಾಗರಗಾ ಕ್ರಾಸ್ ಹಾಗೂ ಮಿಸ್ಬಾ ನಗರದ ಬಳಿ ಜಂಕ್ಷನ್ ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದು, ಡಲ್ಟ್ ಸಂಸ್ಥೆ ಡಿ.ಪಿ.ಆರ್. ತಯಾರಿಸುತ್ತಿದೆ ಎಂದರು.

34.50 ಕೊಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ:

ನಗರದ ಹೃದಯ ಭಾಗದಲ್ಲಿರುವ ಅಪ್ಪ ಕೆರೆ 1 ಕೋಟಿ ರೂ. ವೆಚ್ಚದಲ್ಲಿ, ಬಹಮನಿ ಕೋಟೆ ಕಂದಕ ಪ್ರದೇಶ 14.50 ಕೊಟಿ ರೂ. ಮೊತ್ತದಲ್ಲಿ ಮಹಾನಗರ ಪಾಲಿಕೆಯಿಂದ ಹಾಗೂ ನಗರಾಭಿವಧ್ಧಿ ಪ್ರಾಧಿಕಾರದಿಂದ 20 ಕೋಟಿ ರೂ. ವೆಚ್ಚದಲ್ಲಿ ಕುಸನೂರ ಕೆರೆ ಮತ್ತು 65 ಕೋಟಿ ರೂ. ವೆಚ್ಚದಲ್ಲಿ ಖಾಜಾ ಕೋಟನೂರ ಕೆರೆ ಅಭಿವೃದ್ಧಿಪಡಿಸುವ ಮೂಲಕ ಜಲ ಮೂಲಗಳ ಸಂರಕ್ಷಣೆಗೂ ಆದ್ಯತೆ ನೀಡಲಾಗಿದೆ ಎಂದರು.

ಸ್ವಚ್ಛ ಕಲಬುರಗಿ-ಶಾಶ್ವತ ಸಮೃದ್ಧಿಗೆ ಕೈಜೋಡಿಸಿ:

ಕಲಬುರಗಿ ನಗರವನ್ನು ಸ್ವಚ್ಛ ಮತ್ತು ಸುಸ್ಥಿರವಾಗಿರಿಸಲು ಘನತ್ಯಾಜ್ಯ ನಿರ್ವಹಣೆಗೆ 55.70 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಪಾಲಿಕೆ ಕೈಗೆತ್ತಿಕೊಂಡಿದೆ. ಇದರ ಮುಂದುವರಿದ ಭಾಗವಾಗಿ ನಗರದ ಜನತೆಯಲ್ಲಿ ಸ್ವಚ್ಛತೆ ಮತ್ತು ಸುಂದರ ಪರಿಸರ ಕಾಳಜಿ ಹೆಚ್ಚಿಸಲು ಮುಂದಿನ ವರ್ಷಗಳ ಕಾಲ ನಿರಂತರವಾಗಿ ಜಾಗೃತಿ ಮೂಡಿಸಲು ಸ್ವಚ್ಛ ಕಲಬುರಗಿ-ಶಾಶ್ವತ ಸಮೃದ್ಧಿ ಅಭಿಯಾನ ಕೈಗೊಂಡಿದೆ. ಜನವರಿ 26 ರಂದು ಸುಮಾರು 350 ಶಾಲೆಯಲ್ಲಿ ಏಕಕಾಲಕ್ಕೆ ಸುಮಾರು 1 ಲಕ್ಷ ಜನರಿಂದ ಸ್ವಚ್ಛತೆಯ ಪ್ರತಿಜ್ಞೆ ತೆಗೆದುಕೊಳ್ಳಲಾಗುತ್ತಿದ್ದು, ನಗರದ ನಿವಾಸಿಗಳು ಇದರಲ್ಲಿ ಭಾಗಿಯಾಗಬೇಕು. ಬೇರಿ ಊರಿನ ಸೌಂದರ್ಯ, ಸ್ವಚ್ಚತೆ ಬಗ್ಗೆ ಮಾತನಾಡುವ ಬದಲು ನಮ್ಮ ಊರು, ನಮ್ಮ ಮನೆ ಸ್ವಚ್ಚತೆಯಾಗಿಟ್ಟುಕೊಳ್ಳಲು ಮುಂದಾಗಬೇಕು. ಪಾಲಿಕೆ ಸಿಬ್ಬಂದಿಗೆ ವಿಂಗಡಿಸಿದ ಕಸ ನೀಡುವ ಮೂಲಕ ಸ್ವಚ್ಛತೆಗೆ ಸಹಕರಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಹಾನಗರದ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಶಾಸಕ ಜಗದೇವ ಗುತ್ತೇದಾರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಡಿ.ಸಿ. ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಡಿ.ಸಿ.ಎಫ್ ಸುಮಿತ್ ಪಾಟೀಲ, ಸಹಾಯಕ ಅಯುಕ್ತೆ ಸಾಹಿತ್ಯ ಇದ್ದರು. ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಅವರು ನಗರದಲ್ಲಿ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಡೆಯುತ್ತಿರುವ ಕಾಮಗಾರಿಗಳ ಕುರಿತು. ಪಿ.ಪಿ.ಟಿ. ಮೂಲಕ ವಿವರಿಸಿದರು.

Share post:

spot_imgspot_img

Popular

More like this
Related

ಕಲಬುರಗಿ| ಚಾಂದ ಬೀಬೀ ಕಾಲೇಜಿನಲ್ಲಿ ಗಣರಾಜ್ಯೋತ್ಸವ ದಿನಾಚರಣೆ

ಕಲಬುರಗಿ: ಚಾಂದ ಬೀ ಬೀ ಮಹಿಳಾ ಶಿಕ್ಷಣ ಮಹಾವಿದ್ಯಾಲಯದಲ್ಲಿ 77ನೆಯ ಗಣರಾಜ್ಯೋತ್ಸವ...

ಕಲಬುರಗಿ| ಹಾಸ್ಟೆಲ್ ಸಿಬ್ಬಂದಿಗಳಿಗೆ ಐದು ತಿಂಗಳಿಂದ ಸಿಗದ ವೇತನ; ಪ್ರತಿಭಟನೆ

ಕಲಬುರಗಿ: ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಕಳೆದ 16-20...

ಕಲಬುರಗಿ| ಕೆ.ಹೆಚ್.ಬಿ ಗ್ರೀನ್ ಪಾರ್ಕಿನಲ್ಲಿ 77ನೇ ಗಣರಾಜ್ಯೋತ್ಸ ಆಚರಣೆ

ಕಲಬುರಗಿ: ಕೆ. ಹೆಚ್.ಬಿ.ಗ್ರೀನ್ ಪಾರ್ಕ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇಲ್ಲಿನ...

ಕಲಬುರಗಿ| ರಸ್ತೆ ಸುರಕ್ಷತಾ ಜಾಗೃತಿ ಬೈಕ್ ರ್ಯಾಲಿಗೆ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ ಚಾಲನೆ

ಕಲಬುರಗಿ: ಪೊಲೀಸರು ಕೇವಲ ಕಾನೂನು ಜಾಗೃತಿ ಕಾರ್ಯಕ್ರಮಗಳಿಗೆ ಸೀಮಿತವಾಗದೆ, ಕಟ್ಟುನಿಟ್ಟಿನ ಅನುಷ್ಠಾನ...