ಕಲಬುರಗಿ| ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ

Date:

Share post:

ಕಲಬುರಗಿ: ನೈಸರ್ಗಿಕ ಸಂಪತನ್ನು ಹಿತ-ಮಿತವಾಗಿ ಬಳಕೆ ಮಾಡದೆ ಮಾನವ ದುರಾಸೆಯಿಂದ ಅವ್ಯಾಹತವಾಗಿ ಬಳಕೆ ಮಾಡಿದ ಪರಿಣಾಮ ಇಂದು ಎಲ್ಲೆಡೆ ನೀರು, ಆಹಾರ, ಗಾಳಿ ಮಲೀನವಾಗಿ ನಾನಾ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ. ಪರಿಸರ ಸಮತೋಲನ ಕಾಪಾಡುವುದು ಅತೀ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಯಾರಾದರು ಅರಣ್ಯ ಒತ್ತುವರಿ ಮಾಡಿದರೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ ಹೇಳಿದರು.

 

ಶನಿವಾರ ಕಲಬುರಗಿ ನಗರದ ರಿಂಗ್ ರಸ್ತೆಯ ಕೆ.ಸಿ.ಟಿ. ಇಂಜನಿಯರಿಂಗ್ ಕಾಲೇಜು ಮೈದಾನದಲ್ಲಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇವುಗಳ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆಗೊಂಡು 50 ವರ್ಷಗಳಾದ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದ ಅವರು, ಇಂದು ವಿಶ್ವಕ್ಕೆ ಪರಿಸರ ಸಮತೋಲನ ಕಾಪಾಡುವುದೇ ದೊಡ್ಡ ಸವಾಲಾಗಿದೆ. ಕೋವಿಡ್ ಮಹಾಮಾರಿಯಲ್ಲಿ ಆಮ್ಲಜನಕ ಕೊರತೆಯಿಂದ ಲಕ್ಷಾಂತರ ಜನ ಸಾವನಪ್ಪಿರುವ ಕರಾಳ ಘಟನೆ ಕಣ್ಮುಂದಿದೆ ಎಬುದನ್ನು ಯಾರು ಮರೆಯಬಾರದು. ಪರಿಸರ ಉಳಿದರೆ ಮಾತ್ರ ಭವಿಷ್ಯದ ಜೀವನ ಎಂಬುದನ್ನು ಅರಿಯಬೇಕು ಎಂದರು.

 

ಇತ್ತೀಚೆಗೆ ಕಂಪ್ಯೂಟರ್ ಮತ್ತು ಮೋಬೈಲ್ ಬಳಕೆ ಹೆಚ್ಚಾಗಿರಿಂದ ಕೆಟ್ಟು ಹೋದ ಈ ವಸ್ತುಗಳಿಂದ ಮನೆಗಳಲ್ಲಿ ಇ-ತ್ಯಾಜ್ಯ ಹೆಚ್ಚಾಗಿ ಉತ್ಪತ್ತಿಯಾಗುತ್ತಿದೆ. ಈ ಕುರಿತು ಇದನ್ನು ಮರುಬಳಕೆ ಅಥವಾ ವೈಜ್ಞಾನಿಕ ವಿಲೇವಾರಿಗೆ ಚಿಂತನೆ ನಡೆದಿದೆ. ಇದಲ್ಲದೆ ಆಸ್ಪತ್ರೆಗಳಲ್ಲಿ ಉತ್ಪತ್ತಿಯಾಗುವ ವೈದ್ಯಕೀಯ ಘನತ್ಯಾಜ್ಯ ಎಲ್ಲೆಂದಲ್ಲಿ ಬಿಸಾಡಿದಲ್ಲಿ ಅದು ಪ್ರಾಣಿಗಳು ಮತ್ತು ಕಸ ಸಂಗ್ರಹಿಸುವ ಪೌರ ಕಾರ್ಮಿಕರ ಜೀವಕ್ಕೆ ಆಪತ್ತು ಎದುರಾಗುತ್ತದೆ. ಹೀಗಾಗಿ ಆಸ್ಪತ್ರೆಗಳು ವೈದ್ಯಕೀಯ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು ಎಂದರು.

 

100 ಕೋಟಿ ರೂ. ಮೊತ್ತದ ಅರಣ್ಯ ಆವಿಷ್ಕಾರಕ್ಕೆ ಅನುಮೋದನೆ:

 

ಮುಂದಿನ 15 ದಿನದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಡಿಮೆ ಅರಣ್ಯ ಪ್ರದೇಶದ 5 ಜಿಲ್ಲೆಗಳಲ್ಲಿ ಅರಣ್ಯ ಇಲಾಖೆ ಮತ್ತು ಕೆ.ಕೆ.ಆರ್.ಡಿ.ಬಿ ಮಂಡಳಿಯ 50-50 ಯೊಜನೆಯಡಿ 100 ಕೋಟಿ ರೂ. ಮೊತ್ತದ ಅರಣ್ಯ ಆವಿಷ್ಕಾರ ಕಾರ್ಯಕ್ರಮದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿ ಅರಣ್ಯೀಕರಣ ಕೆಲಸ ಪ್ರಾರಂಭಿಸಲಾಗುವುದು. ಇದರಲ್ಲಿ ಹೆಚ್ಚಿನ ಬಿಸಿಲಿಗೆ ಖ್ಯಾತಿಯಾಗಿರುವ ಕಲಬುರಗಿಯಲ್ಲಿಯೆ 25 ಕೋಟಿ ರೂ. ಖರ್ಚು ಮಾಡಿ ಸೂರ್ಯ ನಗರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದರು.

 

ಕಲಬುರಗಿಯಲ್ಲಿ ಈಗಾಗಲೇ ಲುಂಬಿನಿ ಉದ್ಯಾನವನ ಸ್ಥಾಪಿಸಲಾಗಿದೆ. 33 ಕೋಟಿ ರೂ. ವೆಚ್ಚದಲ್ಲಿ ಚಿತ್ತಾಪುರ ತಾಲೂಕಿನ ಮಾಡಬೂಳದಲ್ಲಿ ಪ್ರಾಣಿ ಸಂಗ್ರಹಾಲಯ ಸ್ಥಾಪಿಸಲಾಗುತ್ತಿದೆ. ಹುಲಿ, ಸಿಂಹ ಸೇರಿದಂತೆ ಅನೇಕ ವನ್ಯಜೀವಿಗಳನ್ನು ಇಲ್ಲಿ ಕಾಣಬಹುದಾಗಿದೆ. ಚಿಂಚೋಳಿಯ ಚಂದ್ರಂಪಳ್ಳಿಯಲ್ಲಿ ಟ್ರೆಕ್ಕಿಂಗ್ ಆರಂಭಿಸಲಾಗಿದೆ ಎಂದ ಅವರು, ಬೀದರ ಜಿಲ್ಲೆಯಲ್ಲಿ ಈ ವರ್ಷ ದಾಖಲೆ ಪ್ರಮಾಣದಲ್ಲಿ ಸಸಿ ನೆಡಲಾಗಿದೆ ಎಂದರು.

 

ಗುಣಮಟ್ಟದ ವಾಯು,ನೀರು ಉಳಿಸಿಕೊಳ್ಳುವುದು ಅತ್ಯಗತ್ಯ:

 

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪರಿಸರವನ್ನು ಉಳಿಸಿಕೊಳ್ಳಬೇಕಾದುದು ಅತ್ಯಂತ ಅಗತ್ಯ ಕೆಲಸವಾಗಿದೆ. ಗುಣಮಟ್ಟದ ವಾಯು ಮತ್ತು ಗುಣಮಟ್ಟದ ನೀರು ಇಲ್ಲದ ಭವಿಷ್ಯವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

 

ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚಿನ ಸಿಮೆಂಟ್ ಕಾರ್ಖಾನೆಗಳಿವೆ. ಪಕ್ಕದ ಯಾದಗಿರಿಯಲ್ಲಿ ಫಾರ್ಮಾ ಫ್ಯಾಕ್ಟರಿಗಳಿದ್ದು, ಈ ಕೈಗಾರಿಕೆಗಳು ಬಿಡುತ್ತಿರುವ ನೀರಿನಿಂದ ಆಗುತ್ತಿರುವ ಜಲ ಮಾಲಿನ್ಯ ಮತ್ತು ಹೊಗೆಯಿಂದ ಆಗುತ್ತಿರುವ ವಾಯು ಮಾಲಿನ್ಯದ ಬಗ್ಗೆ ಮಂಡಳಿಯ ಪ್ರಾದೇಶಿಕ ಕಚೇರಿಗಳು ನಿಗಾ ಇಟ್ಟಿವೆ. ಮತ್ತೊಮ್ಮೆ ತಾವು ಕಲಬುರಗಿಗೆ ಬಂದು ಈ ಕೈಗಾರಿಕಗಳೀಗೆ ಭೇಟಿ ನೀಡಿ ಪರಿಶೀಲಿಸುವೆ. ಪ್ಲಾಸ್ಟಿಕ್ ಮುಕ್ತ ಕಲಬುರಗಿ ನಮ್ಮ ಗುರಿಯಾಗಿದೆ. ಪರಿಸರ ಉಳಿದರೆ ಮಾತ್ರ ಭವಿಷ್ಯ ಉಳಿಯುವುದು ಎಂಬುದನ್ನು ಸತ್ಯ ಎಲ್ಲರು ಅರಿಯಬೇಕಿದೆ. ಇದಲ್ಲದೆ ನದಿ ನೀರಿನ ಮಾಲಿನ್ಯವನ್ನು ಮಾಪನ ಮಾಡುವುದಕ್ಕಾಗಿ ಪ್ರತಿ ತಿಂಗಳು ನದಿ ನೀರಿನ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆ ಮಾಡಲಾಗುತ್ತದೆ. ಜಿಲ್ಲೆಯ ಅಫಜಲಪೂರ ತಾಲ್ಲೂಕಿನ ಗಾಣಗಾಪೂರದಲ್ಲಿ ಹರಿಯುವ ಭೀಮಾ ನದಿ ನೀರಿನ ಗುಣಮಟ್ಟವನ್ನು ತಪಾಸಿಸುವುದಕ್ಕಾಗಿ Real Time Water Quality Monitoring ಉಪಕರಣ ಅಳವಡಿಸಲಾಗಿದೆ ಎಂದರು.

 

ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ 1974ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧೀನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಸ್ಥಾಪಿಸಿ ಮಾಲಿನ್ಯ ನಿಯಂತ್ರಣಕ್ಕೆ ಮುನ್ನುಡಿ ಬರೆದರು. ಈಗ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 50 ವರ್ಷ ಪೂರೈಸಿ ರಾಜ್ಯಾದ್ಯಂತ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣ ಮಾಡುವುದರಲ್ಲಿ ಯುವಕರ ಪಾತ್ರ ಬಹಳ ಮಹತ್ವದ್ದು ಎಂದು ಪರಿಗಣಿಸಿ ‘ಪರಿಸರದ ಬಗ್ಗೆ ರಿಲ್ಸ್ ಮಾಡಿ ಬಹುಮಾನ ಗೆಲ್ಲಿ’ ಎಂಬ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಪರಿಸರ ಕಾಳಜಿ, ಸಂರಕ್ಷಣೆಯ ಸಂದೇಶ ಸಾರುವ ಉತ್ತಮ ರೀಲ್ಸ್ಗೆ 50 ಸಾವಿರ ರೂ. ಪ್ರಥಮ ಬಹುಮಾನ, 25 ಸಾವಿರ ರೂ. ದ್ವಿತೀಯ ಬಹುಮಾನ ಹಾಗೂ 10 ಸಾವಿರ ರೂ. ತೃತೀಯ ಬಹುಮಾನ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ನೀಡಲಾಗುವುದು ಎಂದು ಮಂಡಳಿಯ ಅಧ್ಯಕ್ಷರಾದ ನರೇಂದ್ರಸ್ವಾಮಿ ವಿವರಿಸಿದರು.

 

ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ ಪ್ರದಾನ:

 

ಇದೇ ಸಂದರ್ಭದಲ್ಲಿ ಪರಿಸರ ಉಳಿವಿಗಾಗಿ ಹಾಗೂ ಮಾಲಿನ್ಯ ನಿಯಂತ್ರಣಕ್ಕಾಗಿ ಎಲೆ ಮರೆಯ ಕಾಯಿಗಳಂತೆ ಕೆಲಸ ಮಾಡುತ್ತಿರುವ ಡಾ.ನಾಗನಾಥ ಬಿ., ಮನೋಹರ ಎಸ್., ಡಾ.ಶ್ರೀನಿವಾಸ ಕುಷ್ಠಗಿ ಹಾಗೂ ಮಲ್ಲಿಕಾರ್ಜುನ ನಿಂಗಪ್ಪ ಅವರನ್ನು ಸಚಿವರು ಮತ್ತು ಗಣ್ಯರು ‘ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ’ ನೀಡಿ ಗೌರವಿಸಿದರು. ಇದಲ್ಲದೆ ವಿವಿಧ ಸ್ಪರ್ಧೇಯಲ್ಲಿ ವಿಜೇತ ಮಕ್ಕಳನ್ನು ಸಹ ಅಭಿನಂದಿಸಲಾಯಿತು.

 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಅಧ್ಯಕ್ಷರು ಹಾಗೂ ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ ಅವರು ಮಾತನಾಡಿ, ಸರ್ಕಾರವೇ ಪರಿಸರ ಸಂರಕ್ಷಣೆ ಮಾಡಬೇಕೆಂದರೆ ಅದು ಆಗದು. ಇಲ್ಲಿ ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರ ಭಾಗೀದಾರಿ ತುಂಬಾ ಅತ್ಯಗತ್ಯವಾಗಿದೆ. ನವೀನ ತಂತ್ರಜ್ಞಾನಗಳನ್ನು ಸದ್ಬಳಕೆ ಮಾಡಿಕೊಂಡು ಮಂಡಳಿ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಇನ್ನು ವಿನೂತನ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.

 

ಕಾರ್ಯಕ್ರಮದಲ್ಲಿ ಶಾಸಕರಾದ ಅಲ್ಲಮಪ್ರಭು ಪಾಟೀಲ, ಎಂ.ವೈ.ಪಾಟೀಲ, ವಿಧಾನ ಪರಿಷತ್ ಶಾಸಕರಾದ ಚಂದ್ರಶೇಖರ ಪಾಟೀಲ, ಜಗದೇವ ಗುತ್ತೇದಾರ, ಮಾಜಿ ಎಂ.ಎಲ್.ಸಿ ಅರವಿಂದ ಅರಳಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಶರಣಕುಮಾರ ಮೋದಿ, ಭೀಮರಾಯನಗುಡಿ ಕಾಡಾ ಅಧ್ಯಕ್ಷ ಬಾಬು ಹೊನ್ನಾ ನಾಯಕ್, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂ ಖಾನ್, ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ ಕಾಡ್ಲೂರ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಲಿಂಗರಾಜ ಎಸ್.ಎಸ್., ಡಿ.ಸಿ.ಎಫ್ ಸುಮಿತ್ ಪಾಟೀಲ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಸಹಾಯಕ ಆಯುಕ್ತೆ ಸಾಹಿತ್ಯ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳಾದ ಸಣ್ಣ ವೆಂಕಟೇಶ, ಅದಮ್ ಪಟೇಲ್ ಸೇರಿದಂತೆ ಅನೇಕ ಅಧಿಕಾರಿಗಳು, ಇತರೆ ಚುನಾಯಿತ ಪ್ರತಿನಿಧಿಗಳು, ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು, ಸಾರ್ವಜನಿಕರು ಭಾಗವಹಿಸಿದ್ದರು. ಹಿರಿಯ ಪರಿಸರ ಅಧಿಕಾರಿ ಬಿ.ಎಸ್.ಮುರಳಿಧರ ಸರ್ವರನ್ನು ಸ್ವಾಗತಿಸಿದರು. ಶಿವಾನಂದ ಅಣಜಗಿ ನಿರೂಪಿಸಿದರು.

Share post:

spot_imgspot_img

Popular

More like this
Related

ಕಲಬುರಗಿ| ಜಿಲ್ಲೆಯಾದ್ಯಂತ ಮತದಾರರ ವಿಶೇಷ ಮಿಂಚಿನ ನೋಂದಣಿ ಅಭಿಯಾನ: ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಈಗಾಗಲೇ...

ಕಲಬುರಗಿ| ಸಿಲಿಂಡರ್ ಸ್ಫೋಟ; ಅದೃಷ್ಟವಶಾತ್ ನಾಲ್ವರು ಪಾರು

ಕಲಬುರಗಿ: ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯಲ್ಲಿದ್ದ ಚಿನ್ನಾಭರಣ, ನಗದು ಹಣ ಸೇರಿದಂತೆ...

ಕಲಬುರಗಿ| ದಾರಿದ್ರ್ಯ ರಹಿತ ಸಮಾಜ ನಮ್ಮೆಲ್ಲರ ಕನಸು: ಡಾ.ಜ್ಯೋತಿ.ಕೆ.ಎಸ್

ಕಲಬುರಗಿ: ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ...

ಕಲಬುರಗಿ| ಜಿಲ್ಲೆಯಾದ್ಯಂತ ಮತದಾರರ ವಿಶೇಷ ಮಿಂಚಿನ ನೋಂದಣಿ ಅಭಿಯಾನ: ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಈಗಾಗಲೆ...