ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ವಲಯದ ವತಿಯಿಂದ ಹಿರಿಯ ಸಾಹಿತಿ-ಪತ್ರಕರ್ತ ಡಾ. ಶ್ರೀನಿವಾಸ ಸಿರನೂರಕರ್ ಅವರ ಸರ್ವಾಧ್ಯಕ್ಷತೆಯಲ್ಲಿ ಒಂದು ದಿನದ ಕಲಬುರಗಿ ವಿಭಾಗ ದಾಸ ಸಾಹಿತ್ಯ ಸಮ್ಮೇಳನವನ್ನು ಇದೇ 18 ರಂದು ನಗರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ದಕ್ಷಿಣ ವಲಯದ ಅಧ್ಯಕ್ಷ ರವಿಕುಮಾರ ಶಹಾಪೂರಕರ್ ತಿಳಿಸಿದ್ದಾರೆ.
ಸಮಾಜ ಪರಿವರ್ತನೆಯಲ್ಲಿ ದಾಸ ಸಾಹಿತ್ಯ ಪ್ರಮುಖ ಪಾತ್ರ ವಹಿಸಿದೆ. ದಾಸರು ತಮ್ಮ ಕೀರ್ತನೆಗಳು ಮತ್ತು ಪ್ರಖರವಾದ ಚಿಂತನೆಗಳ ಮೂಲಕ ಅಂದಿನ ಸಮಾಜದಲ್ಲಿನ ಜಾತಿ ತಾರತಮ್ಯ, ಅಸ್ಪøಶ್ಯತೆ ಮತ್ತು ಇತರೆ ಅನಿಷ್ಠ ಪದ್ಧತಿಗಳನ್ನು ಖಂಡಿಸಿದ್ದಾರೆ. ಅವರು ಸಾಮಾಜಿಕ ಸಮಾನತೆ, ಮಾನವೀಯತೆ ಮತ್ತು ಭಕ್ತಿ ಕೇಂದ್ರಿತ ಜೀವನವನ್ನು ನಡೆಸಿದ್ದರು. ಇಂಥ ಶ್ರೇಷ್ಠ ಚಿಂತನೆಗಳ ಮೇಲೆ ಬೆಳಕು ಚೆಲ್ಲುವ ಕಾರ್ಯ ಈ ಸಮ್ಮೇಳನ ಮಾಡಲಿದೆ ಎಂದು ಅವರು ವಿವರಿಸಿದರು.
ಸಮ್ಮೇಳನದ ಯಶಸ್ವಿಗೆ ಪೂರಕವಾಗಿ ರಚಿಸಲ್ಪಟ್ಟ ಸ್ವಾಗತ ಸಮಿತಿಗೆ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಗೌರವಾಧ್ಯಕ್ಷ ಮಲ್ಲಣ್ಣ ಮಡಿವಾಳ, ಕಾರ್ಯಾಧ್ಯಕ್ಷ ಕೃಷ್ಣಾಜಿ ಕುಲಕರ್ಣಿ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ವಲಯ ಅಧ್ಯಕ್ಷ ರವಿಕುಮಾರ ಶಹಾಪೂರಕರ್ ಅವರುಗಳು ಅರ್ಥಪೂರ್ಣ ಸಮ್ಮೇಳನ ನಡೆಸಲು ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಅಂದು ಬೆಳಗ್ಗೆ 9.30 ಕ್ಕೆ ನಗರದ ಮಿನಿ ವಿಧಾನ ಸೌಧದಿಂದ ಕನ್ನಡ ಭವನದ ವರೆಗೆ ಸಮ್ಮೇಳನಾಧ್ಯಕ್ಷರ ಸಾಂಸ್ಕøತಿಕ ಮೆರವಣಿಗೆ ಜರುಗಲಿದ್ದು, ಕೇಂದ್ರ ಕಸಾಪ ಪ್ರತಿನಿಧಿ ಸೈಯ್ಯದ್ ನಜಿರುದ್ದೀನ್ ಮುತ್ತವಲ್ಲಿ ಮೆರವಣಿಗೆಗೆ ಚಾಲನೆ ನೀಡಲಿದ್ದು, ಕೆ.ಎಸ್.ಆರ್.ಪಿ. ಸಹಾಯಕ ಕಮಾಂಡೆಂಟ್ ಗುರುನಾಥ ಎಸ್ ಅವರು ನೇತೃತ್ವ ವಹಿಸಲಿದ್ದಾರೆ.
ಮಾಜಿ ಸೈನಿಕ ಶರಣಬಸಪ್ಪ ಆರ್. ಓಗಿ ವೇದಿಕೆಯಡಿಯಲ್ಲಿ ಬೆಳಗ್ಗೆ 11.15 ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಗುಲಬರ್ಗಾ ವಿ.ವಿ. ಕುಲಪತಿ ಡಾ. ಶಶಿಕಾಂತ ಉಡಿಕೇರಿ ಸಮ್ಮೇಳನ ಉದ್ಘಾಟಿಸಲಿದ್ದು, ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ, ಸಮ್ಮೇಳನಾಧ್ಯಕ್ಷ ಡಾ. ಶ್ರೀನಿವಾಸ ಸಿರನೂರಕರ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ವಾಸುದೇವ ಅಗ್ನಿಹೋತ್ರಿ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ ಸೇರಿ ಅನೇಕ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 12.45 ಕ್ಕೆ ಹಿರಿಯ ಪತ್ರಕರ್ತ ವಾದಿರಾಜ ವ್ಯಾಸಮುದ್ರ ಅಧ್ಯಕ್ಷತೆಯಲ್ಲಿ ನಡೆಯುವ ದಾಸ ಚಿಂತನೆ ಗೋಷ್ಠಿಯಲ್ಲಿ ದಾಸ ಸಾಹಿತ್ಯಕ್ಕೆ ಬ್ರಾಹ್ಮಣೇತರರ ಕೊಡುಗೆ ಕುರಿತು ಡಾ. ಜಗನ್ನಾಥ ತರನಳ್ಳಿ, ದಾಸ ಸಾಹಿತ್ಯ-ಸಾಮಾಜಿಕ ಕಾಳಜಿ ಕುರಿತು ಡಾ. ಶೈಲಜಾ ಕೊಪ್ಪರ, ಸಮ್ಮೇಳನಾಧ್ಯಕ್ಷರ ಬದುಕು-ಬರಹದ ಕುರಿತು ಶೇಷಮೂರ್ತಿ ಅವಧಾನಿ ಮಾತನಾಡಲಿದ್ದಾರೆ. ಪ್ರೊ. ಎಸ್.ಎಲ್. ಪಾಟೀಲ, ಸುರೇಶ ಗೌರೆ, ಚಂದ್ರಕಾಂತ ಏರಿ, ಜಗನ್ನಾಥ ಸೂರ್ಯವಂಶಿ ಉಪಸ್ಥಿತರಿರುವರು.
ಮಧ್ಯಾಹ್ನ 2.15 ಕ್ಕೆ ಗೀತ, ನೃತ್ಯ, ಭಜನಾ ಸಂಭ್ರಮ ಜರುಗಲಿದ್ದು, ಡಾ. ಶುಭಾಂಗಿ ಸುಧೀಂದ್ರ ಸಾರಥ್ಯದ ಓಂಕಾರ ನೃತ್ಯ ಸಾಧನಾ ಕಲಾ ತಂಡ, ಡಾ. ಸುನಂದಾ ಸಾಲವಾಡಗಿ ಸಾರಥ್ಯದ ಶಾರದಾ ಸಂಗೀತ ವಿದ್ಯಾಲಯ, ಮಹಾಲಕ್ಷ್ಮೀ ಭಜನಾ ಮಂಡಳಿ, ಕಲ್ಪವೃಕ್ಷ ಶಿಕ್ಷಣ ಸಂಸ್ಥೆಯ ಮಕ್ಕಳು, ರಂಗವಿಠಲ ಭಜನಾ ಮಂಡಳಿ ವತಿಯಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.
ಇಳಿಹೊತ್ತು 4.15 ಕ್ಕೆ ಸಮಾರೋಪ ಮತ್ತು ಸತ್ಕಾರ ಸಂಭ್ರಮ ಜರುಗಲಿದ್ದು, ಗುಲಬರ್ಗಾ ವಿ.ವಿ. ನಿವೃತ್ತ ಕುಲಪತಿ ಡಾ. ಪರಿಮಳಾ ಅಂಬೇಕರ್ ಸಮಾರೋಪ ನುಡಿಗಳನ್ನಾಡಲಿದ್ದು, ಶಾಸಕ ಅಲ್ಲಮಪ್ರಭು ಪಾಟೀಲ, ಮಹಾಪೌರರಾದ ವರ್ಷಾ ರಾಜೀವ ಜಾನೆ, ಉಪ ಮಹಾಪೌರರಾದ ತೃಪ್ತಿ ಶ್ರೀನಿವಾಸ ಲಾಖೆ. ಪಾಲಿಕೆಯ ವಿರೋಧ ಪಕ್ಷದ ನಾಯಕಿ ಶೋಭಾ ಜಿ ದೇಸಾಯಿ ಅವರು ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ. ಡಾ. ಸಂತೋಷ ಹೊಸಮನಿ, ಸುರೇಶ ಮಾಳೇಗಾಂವ, ಡಾ. ಪ್ರೇಮಚಂದ ಚವ್ಹಾಣ, ಜೆ.ಮಲ್ಲಪ್ಪ ಉಪಸ್ಥಿತರಿರುವರು. ಕಲಬುರಗಿ ವಿಭಾಗದ ವಿವಿಧ ಜಿಲ್ಲೆಗಳ ವಿವಿಧ ಕ್ಷೇತ್ರದ ಸುಮಾರು 20 ಕ್ಕೂ ಹೆಚ್ಚು ಸಾಧಕರನ್ನು ಸತ್ಕರಿಸಲಾಗುವುದು.


