ಕಲಬುರಗಿ: ಸಮಾಜವು ಮಾನಸಿಕ ಅಸ್ವಸ್ಥರನ್ನು ಕೆಟ್ಟದಾಗಿ ನೋಡುವುದಾಗಲಿ, ಹಿಂಸೆ ನೀಡುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಇತರರಂತೆ ಅವರಿಗೂ ಸಮಾಜದಲ್ಲಿ ಜೀವಿಸುವ ಹಕ್ಕು ಇದೆ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದು ಕಲಬುರಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀನಿವಾಸ ನವಲೆ ಹೇಳಿದರು.
ಶುಕ್ರವಾರ ಇಲ್ಲಿನ ಜಿಮ್ಸ್ ಕಾಲೇಜಿನಲ್ಲಿ ಬಯೋಲಾಜಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಜಿಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಹಿನ್ನೆಲೆಯಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ಆಯೋಜಿಸಿದ ಮಾನಸಿಕ ಆರೋಗ್ಯದ ಕುರಿತು ಅರಿವು ಮತ್ತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾನಸಿಕ ಅಸ್ವಸ್ಥರ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಕಂಡುಬಂದಲ್ಲಿ ಪುನರ್ ವಿಮರ್ಷೆ ಮಂಡಳಿಗೆ ಮಾಹಿತಿ ನೀಡಬೇಕು ಎಂದರು.
ಭಾರತ ದೇಶದಲ್ಲಿ ಬಹುತೇಕ ಜನರು ಒಂದಿಲ್ಲ ಒಂದು ಮಾನಸಿಕ ರೋಗಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವುದು ವಿಷಾಧನಿಯ ಸಂಗತಿಯಾಗಿದೆ. ಅತಿಯಾದ ಕೆಲಸದ ಒತ್ತಡದಿಂದಾಗಿ ನೆಮ್ಮದಿ ಮತ್ತು ಶಾಂತಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ. ನಿರುದ್ಯೋಗ, ಬಡತನ, ತಂಬಾಕು ಮತ್ತು ಧೂಮಪಾನ ಸೇವನೆಯಿಂದಲು ಸಹ ಇಂದಿನ ಯುವ ಜನಾಂಗವು ಮಾನಸಿಕ ಕಾಯಿಲೆಗಳಿಗೆ ತುತ್ತಾಗಿ ಅಮೂಲ್ಯವಾದ ಜೇವನವನ್ನು ಕಳೆದುಕೊಳ್ಳುತ್ತಿದ್ದಾರೆ. ಇಂದಿಲ್ಲಿ ತರಬೇತಿ ಪಡೆದುಕೊಳ್ಳುವ ಪ್ರತಿಯೊಬ್ಬ ಶಿಕ್ಷಕರು ಪಠ್ಯ ಬೋಧನೆಯ ಜೊತೆಗೆ ಸಮಾಜದ ಆರೋಗ್ಯವನ್ನು ಕಾಪಾಡುವ ಜವಾಬ್ದಾರಿ ಹೊಂದಿದ್ದು, ಈ ಕುರಿತು ಹೆಚ್ಚಿನ ಜಾಗೃತಿಯನ್ನು ಮೂಡಿಸಬೇಕು ಎಂದು ಶಿಕ್ಷಕರಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಿ.ಡಿ.ಪಿ.ಐ ಸೂರ್ಯಕಾಂತ ಮದಾನೆ ಅವರು ಮಾತನಾಡಿ, ಜೀವನದಲ್ಲಿ ಜಿಗುಪ್ಸೆ, ಒತ್ತಡ ಮತ್ತು ನಿರಾಶೆಯಿಂದಾಗಿ ಮಾನಸಿಕ ಖಾಯಿಲೆ ಮತ್ತು ಖಿನ್ನತೆಗೆ ವಿದ್ಯಾರ್ಥಿ ಸಮೂಹ ಒಳಗಾಗುತ್ತಿದೆ. ಶಿಕ್ಷಕರು ತರಬೇತಿಯನ್ನು ಪಡೆದ ನಂತರ ವಿಶೇಷವಾಗಿ 6 ರಿಂದ 10ನೇ ತರಗತಿಯ ಮಕ್ಕಳಲ್ಲಿ ಮಾನಸಿಕ ರೋಗದ ಲಕ್ಷಣಗಳು ಕಂಡುಬಂದಲ್ಲಿ ಅದನು ಸೂಕ್ಷ್ಮವಾಗಿ ಗಮನಿಸಿ ತಜ್ಞ ವೈದ್ಯರಿಂದ ಸೂಕ್ತ ಚಿಕಿತ್ಸೆಯನ್ನು ಪಡೆಯುವಂತೆ ಅರಿವು ಮತ್ತು ಜಾಗೃತಿಯನ್ನು ಮೂಡಿಸಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ಜಿಲ್ಲಾ ಮಾನಸಿಕ ಆರೋಗ್ಯ ಮತ್ತು ಕಾರ್ಯಕ್ರಮ ಅಧಿಕಾರಿಗಳಾದ ಡಾ. ವಿವೇಕಾನಂದ ರೆಡ್ಡಿ ಮಾತನಾಡಿ, ಮಾನಸಿಕ ಕಾಯಿಲೆಯು ಗಂಭೀರವಾದ ಸ್ವರೂಪವನ್ನು ತಲುಪುವುದಕ್ಕು ಮೊದಲು ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಬೇಕು. ಇಂದಿನ ಒತ್ತಡದ ಜೀವನದಲ್ಲಿ ಪ್ರತಿಯೊಂದು ಸಮಸ್ಯೆ ಮತ್ತು ಸವಾಲುಗಳನ್ನು ಧೈರ್ಯದಿಂದ ಎದುರಿಸಬೇಕು ಎಂದರು.
ಕಲಬುರಗಿ ಜಿಮ್ಸ್ ಆಸ್ಪತ್ರೆಯ ಮನೋರೋಗ ವಿಭಾಗದ ಮುಖ್ಯಸ್ಥ ಡಾ. ಪ್ರಭುಕಿರಣ ವಿ. ಗೋಗಿ ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ ಡಾ.ಮೊಹಮ್ಮದ್ ಇರ್ಫಾನ್ ಅವರು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲಾ ಮಾನಸಿಕ ಆರೋಗ್ಯ ಮನಶಾಸ್ತ್ರಜ್ಞ ಸಂತೋಷಿ ಗೋಳೆ, ಕಲಬುರಗಿ ಉತ್ತರ ಮತ್ತು ದಕ್ಷಿಣ, ಅಫಜಲಪೂರ ಮತ್ತು ಆಳಂದ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಶಿಕ್ಷಕರು ಮ್ತತು ಆರೋಗ್ಯ ಇಲಾಖೆಯ ಇತರೆ ಅಧಿಕಾರಿ-ಸಿಬ್ಬಂದಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು. ಅಂಭಿಕಾ ಅವರು ಪ್ರಾರ್ಥನೆ ಗೀತೆ ಹಾಡಿದರು. ನಾಗರಾಜ ಬಿರಾದಾರ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.
ಜಾಥಾಕ್ಕೆ ಚಾಲನೆ: ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಹಿನ್ನೆಲೆಯಲ್ಲಿ ಕಲಬುರಗಿ ಜಿಮ್ಸ್ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಳ್ಳಲಾದ ಜಾಥಾಕ್ಕೆ ಡಿ.ಎಚ್.ಓ ಡಾ. ಶರಣಬಸಪ್ಪ ಕ್ಯಾತನಾಳ ಅವರು ಚಾಲನೆ ನೀಡಿದರು.


