ಕಲಬುರಗಿ: ರಾಜ್ಯ ಸರಕಾರಿ ಮಹಿಳಾ ನೌಕರರಿಗೆ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ನೌಕರರಿಗೆ ವೇತನ ಸಹಿತ ಋತುಚಕ್ರ ರಜೆ ಮಂಜೂರಾತಿಗೆ ಅನುಮೋದನೆ ನೀಡಿರುವ ಸರ್ಕಾರದ ಕ್ರಮಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದ ಕಲಬುರಗಿ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ಸೇರಿದಂತೆ ಇತರೆ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಒಡಿಶಾ ಸರ್ಕಾರ 2024 ರಲ್ಲಿ ಮಹಿಳಾ ನೌಕರರಿಗೆ ವೇತನ ಸಹಿತ ರಜೆ ನೀಡುವುದನ್ನು ಜಾರಿ ಮಾಡಿತ್ತು. ಅದೇ ರೀತಿಯಲ್ಲಿ ಕರ್ನಾಟಕ ರಾಜ್ಯದಲ್ಲೂ ಜಾರಿಗೆ ತರಬೇಕೆಂದು ರಾಜ್ಯ ಸರ್ಕಾರಿ ನೌಕರರ ಸಂಘ ಒತ್ತಾಯಿಸಿತ್ತು. ಸಂಘದ ಮನವಿ ಮೇರೆಗೆ ರಾಜ್ಯದ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟ ಈ ಅನುಮೋದನೆಗೆ ಒಪ್ಪಿಗೆ ನೀಡಿರುವುದು ಸಂತಸವಾಗಿದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಮಹೇಶ್ ಹೂಗಾರ, ಶ್ರೀಮಂತ್ ಪಟ್ಟೇದಾರ, ಧರ್ಮರಾಜ ಜವಳಿ, ಸುರೇಶ್ ಶರ್ಮಾ, ಚಂದ್ರಕಾಂತ್ ಏರಿ, ಎಂ.ಬಿ.ಪಾಟೀಲ್, ಸುರೇಶ್ ಬಗ್ಗೆ ಸೇರಿದಂತೆ ಮತ್ತಿತರರು ಹರ್ಷ ವ್ಯಕ್ತಪಡಿಸಿದ್ದಾರೆ.


