ಕಲಬುರಗಿ: ಕ್ಷೇತ್ರದಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಸಂಘಟಿಸಿ ಮುಂಬರುವ ಚುನಾವಣೆಗಳು ಸಮರ್ಥವಾಗಿ ಎದುರಿಸುವ ಮೂಲಕ ಅಭ್ಯರ್ಥಿಗಳನ್ನು ಗೆಲ್ಲಿಸಿ ಜನ ಸಾಮಾನ್ಯರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ಪಕ್ಷದ ರಾಜಾಧ್ಯಕ್ಷ ಶಾಸಕ ಬಿ.ವೈ.ವಿಜಯೇಂದ್ರ ಅವರು ಕರೆ ಕಾರ್ಯಕರ್ತರಿಗೆ ನೀಡಿದರು.
ಆಳಂದ ಪಟ್ಟಣದ ಎಸ್‌ಆರ್‌ಜಿ ಕಾಂಪ್ಲೆಕ್ಸ್ ಬಳಿ ತಾಲೂಕು ಬಿಜೆಪಿ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳಲ್ಲೇ ಕಾಲಹರಣ ಮಾಡಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ಕಾಲಹರಣ ಮಾಡುತ್ತಿದೆ. ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ರೈತಪರ ಜನಪರ ಯೋಜನೆಗಳು ಜಾರಿಗೆ ತರಲಾಗಿತ್ತು. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹಿಂದುಳಿದವರ ಹೆಸರಿನಲ್ಲಿ ಹಿಂದುಗಳನ್ನು ಒಡೆದಾಳುತ್ತಿದೆ. ಇಂಥ ಸರ್ಕಾರವನ್ನು ಕಿತ್ತೆಯೆಸುವ ಮೂಲಕ ಕಾರ್ಯಕರ್ತರು ಮುಖಂಡರು ಪಣತೊಡಬೇಕು. ದೈರ್ಯದಿಂದ ಮುನ್ನುಗ್ಗಿ ಪ್ರಧಾನಿ ನರೇಂದ್ರಮೋದಿ ಅವರ ಅಭಿವೃದ್ಧಿ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಸಾಧನೆಗಳನ್ನು ಹೆಳಿ ಜನರಿಗೆ ಮನವರಿಕೆ ಮಾಡಿ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಕ್ಷೇತ್ರದಲ್ಲೂ ಬಲಿಷ್ಠರಾಗಬೇಕು ಎಂದು ಹೇಳಿದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರದಿಂದ ರಾಜ್ಯವೇ ದಿವಾಳಿ ಅಂಚಿಗೆ ತಲುಪಿಸಿದೆ.ಪಕ್ಷದ ಕಾರ್ಯಕರ್ತರು ಮುಂಬರುವ ದಿನಗಳಲ್ಲಿ ಪಕ್ಷವನ್ನು ಸಂಘಟಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು ಎಂದರು.
ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರು ಮಾತನಾಡಿ, ಪಟ್ಟಣ ಸೇರಿ ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳನ್ನು ಆಲಿಸಲು ಪಕ್ಷದ ಕಚೇರಿಯ ಅವಶ್ಯಕತೆಯನ್ನು ಮನಗಂಡು ಕಚೇರಿಯನ್ನು ರಾಜಾಧ್ಯಕ್ಷರ ಮೂಲಕ ಉದ್ಘಾಟಿಸಲಾಗಿದೆ. ಜನರು ತಮ್ಮ ಸಮಸ್ಯೆಗಳನ್ನು ಕಚೇರಿಗೆ ಬಂದು ಲಿಖಿತ ಅಥವಾ ಮೌಖಿಕವಾಗಿ ತಿಳಿಸಿದರೆ ನಿವಾರಣೆಗೆ ಪ್ರತ್ನಿಸಲಾಗುವುದು. ಕಾರ್ಯಕರ್ತರು ಎದುರಾಳಿಗಳಿಗೆ ಎದೆಗುಂದದೆ ಕೆಲಸಮಾಡಬೇಕು ಎಂದ ಅವರು, ತೆರೆದ ಪಕ್ಷದ ಕಚೇರಿಗೆ ಬಂದು ಸಮಸ್ಯೆಗಳನ್ನು ಕಾರ್ಯಕರ್ತರು ಮತ್ತು ಸಾರ್ವಜನಿಕರಿಗೆ ಬಂದು ಚರ್ಚಿಸಿ ಸದಾ ಬಾಗಿಲು ತೆರೆದಿರಿಸಲಾಗುವುದು ಎಂದು ಹೇಳಿದರು.
ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಅವರು ಮಾತನಾಡಿ, ಕ್ಷೇತ್ರದಲ್ಲಿ ಹಿಂದೆ ತಂದೆ ಸುಭಾಷ ಗುತ್ತೇದಾರ ತಂದ ಅನುದಾನವೇ ಈಗಿನ ಶಾಸಕರು ನಾನೇ ತಂದಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಅಭಿವೃದ್ಧಿ ಬದಲು ಹಿಂಬಾಲಕರನ್ನೇ ಮುಂದೆ ಮಾಡಿ ಭ್ರಷ್ಟಾಚಾರದಲ್ಲಿ ತೊಡಗಿ ಕ್ಷೇತ್ರದ ಜನತೆಯನ್ನುಅನ್ಯಾಯ ಮಾಡುತ್ತಿದ್ದಾರೆ. ಈ ಕುರಿತು ಪಕ್ಷದ ಸಂಘಟಿತ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು, ಎಂಎಲ್‌ಸಿ ಶಶೀಲ ನಮೋಶಿ, ಸಚೀನ ಕಲ್ಯಾಣ ಶೆಟ್ಟಿ, ಡಾ.ಶೈಲೇಂದ್ರ ಬೆಲ್ದಾಳ, ಈಶ್ವರಸಿಂಗ ಠಾಕೂರ, ಸಿದ್ಧಲಿಂಗ ಪಾಟೀಲ, ಅಮರನಾಥ ಪಾಟೀಲ, ಕಲಬುರಗಿ ನಗರಾಧ್ಯಕ್ಷ ಚಂದು ಪಾಟೀಲ, ಗ್ರಾಮೀಣ ಅಧ್ಯಕ್ಷ ಅಶೋಕ ಬಗಲಿ, ನಿತೀನ ಗುತ್ತೇದಾರ, ತಾಲೂಕು ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗುಳೆ, ಮಾಜಿ ಅಧ್ಯಕ್ಷ ಆನಂದ ಪಾಟೀಲ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಮಾನೆ, ಬಾಬುಗೌಡ ಪಾಟೀಲ, ಅಶೋಕ ಹತ್ತರಕಿ, ಸಂತೋಷ ಗುತ್ತೇದಾರ, ಜಿಪಂ ಮಾಜಿ ಸದಸ್ಯ ವೀರಣ್ಣಾ ಮಂಗಾಣೆ ಸೇರಿದಂತೆ ಅನೇಕರು ಇದ್ದರು.


