ಕಲಬುರಗಿ: ಕೋಟನೂರ್, ನಾಗನಹಳ್ಳಿ, ಉದನೂರು, ನಂದಿಕೂರ್, ಸೀತನೂರ್ ಹಾಗೂ ಕಲಬುರ್ಗಿ ದಕ್ಷಿಣ ಮತಕ್ಷೇತ್ರದ ಗ್ರಾಮಗಳಲ್ಲಿ ನಿರಂತರ ಧಾರಾಕಾರ ಮಳೆಯ ಪರಿಣಾಮವಾಗಿ ಸಾಕಷ್ಟು ಬೆಳೆ ಹಾನಿ ಸಂಭವಿಸಿದೆ. ಈ ವ್ಯಾಪ್ತಿಯನ್ನು ಅತೀವೃಷ್ಟಿ ಪೀಡಿತ ಪ್ರದೇಶ ಎಂದು ಘೋಷಿಸಬೇಕೆಂದು ಕೋಟನೂರ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಲ್ಲಿನಾಥ ನಾಗನಹಳ್ಳಿ ಆಗ್ರಹಿಸಿದ್ದಾರೆ.
ಈ ಪ್ರದೇಶದಲ್ಲಿ ಸುರಿದ ಭಾರೀ ಮಳೆಯ ಪ್ರಮಾಣದಿಂದಾಗಿ ಸೋಯಾಬೀನ್, ಉದ್ದು, ಹೆಸರು, ಜೋಳ, ಹತ್ತಿ ಮುಂತಾದ ಪ್ರಮುಖ ಕೃಷಿ ಬೆಳೆಗಳು ನೀರುಪಾಲಾಗಿ ಸಾವಿರಾರು ಹೆಕ್ಟೇರ್ ಭೂಮಿಯು ಹಾನಿಗೊಳಗಾಗಿದ್ದು, ರೈತರ ಜೀವನ ಭವಿಷ್ಯ ಗೊಂದಲಕ್ಕೆ ಒಳಗಾಗಿದೆ. ಕೂಡಲೇ ರೈತರ ಪರ ಸರ್ಕಾರ ಧಾವಿಸಲಿ ಎಂದು ಒತ್ತಾಯಿಸಿದ್ದಾರೆ.
ರೈತರು ವಿವಿಧ ಮೂಲಗಳಿಂದ ಸಾಲ ತೆಗೆದುಕೊಂಡು ಜಮೀನುಗಳಲ್ಲಿ ಬೀಜ, ರಸಗೊಬ್ಬರ ಸೇರಿದಂತೆ ಮತ್ತಿತರ ಸಾಮಗ್ರಿಗಳನ್ನು ಖರೀದಿಸಿ, ಬಿತ್ತನೆ ಹಾಕಿದ್ದಾರೆ, ಆದರೆ ಏಕಾಏಕಿ ಮಳೆ ನಿರಂತರ ಸುರಿಯುತ್ತಿರುವುದರಿಂದ ಬೆಳೆ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.