ಕಲಬುರಗಿ: ಹೊಸ ಪೀಳಿಗೆಯಲ್ಲಿ ಕನ್ನಡ ಭಾಷೆಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಸೆಪ್ಟೆಂಬರ್ ಮೊದಲ ವಾರದಲ್ಲಿ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿರುವ ಕಲಬುರಗಿ ತಾಲೂಕಾ ೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಕಲ್ಯಾಣ ನಾಡಿನ ಹಿರಿಯ ವಿದ್ವಾಂಸರೂ ಆದ ಹಿರಿಯ ಸಾಹಿತಿ ಡಾ. ಶ್ರೀಶೈಲ ನಾಗರಾಳ ಅವರನ್ನು ತಾಲೂಕಾ ಕಸಾಪ ಕಾರ್ಯಕಾರಿ ಸಮಿತಿಯಲ್ಲಿ ಒಮ್ಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕಸಾಪ ತಾಲೂಕಾಧ್ಯಕ್ಷೆ ಶಿವಲೀಲಾ ಎಸ್ ಕಲಗುರ್ಕಿ ತಿಳಿಸಿದ್ದಾರೆ.
ಕನ್ನಡ ಎಂಬುದು ಒಂದು ಭಾಷೆ ಮಾತ್ರವಲ್ಲ. ಅದು ನಮ್ಮ ಬದುಕು. ಕವಿ-ಸಾಹಿತಿಗಳ ಮೂಲಕ ಅಕ್ಷರ ರೂಪದಲ್ಲಿ ಕನ್ನಡ ಭಾಷೆ ಜೀವಂತವಾಗಿದೆ. ಪ್ರತಿಯೊಬ್ಬರೂ ಕನ್ನಡ ಸಾಹಿತ್ಯವನ್ನು ಓದುವ ಮೂಲಕ ನಮ್ಮ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕಾಗಿದೆ. ಇದಕ್ಕೆ ಪ್ರೇರಣೆ ನೀಡುವ ಕಾರ್ಯ ಈ ಸಮ್ಮೇಳನ ಮಾಡಲಿದೆ ಎಂದು ಅವರು ವಿವರಿಸಿದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರ ನೇತೃತ್ವದಲ್ಲಿ ತಾಲೂಕಾ ಕಸಾಪ ದಿಂದ ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಈ ಸಮ್ಮೇಳನವೂ ಸಹ ಅರ್ಥಪೂರ್ಣವಾಗಿ ಆಯೋಜಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಸ್ವಾಗತ ಸಮಿತಿ ರಚನೆ, ಗೋಷ್ಠಿಗಳ ಆಯೋಜನೆ ಕುರಿತು ಚರ್ಚಿಸಲಾಗುತ್ತಿದೆ.
ತಾಲೂಕಾ ಕಸಾಪ ಕಾರ್ಯಕಾರಿ ಸಮಿತಿಯಲ್ಲಿ ಜಿಲ್ಲಾ ಕಸಾಪ ಕಾರ್ಯದರ್ಶಿ ಧರ್ಮಣ್ಣ ಎಚ್ ಧನ್ನಿ, ಗೌರವ ಕಾರ್ಯದರ್ಶಿಗಳಾದ ವಿಶಾಲಾಕ್ಷಿ ಮಾಯಣ್ಣನವರ್, ಮಲ್ಲಿಕಾರ್ಜುನ ಇಬ್ರಾಹಿಂಪುರ, ಕೋಶಾಧ್ಯಕ್ಷ ಕುಪೇಂದ್ರ ಬರಗಾಲಿ, ಪ್ರಮುಖರಾದ ಪ್ರಭವ ಪಟ್ಟಣಕರ್, ಕವಿತಾ ಕಾವಳೆ, ಭಾಗ್ಯಶ್ರೀ ಮರಗೋಳ, ಕುಶಾಲ ಧರ್ಗಿ , ಈರಣ್ಣ ಸೋನಾರ, ಸೇಖ್ ಸಮ್ರೀನ್, ಶಾರದಾ ಕಂದಗುಳೆ, ಶರಣು ಹಾಗರಗುಂಡಗಿ ಇತರರು ಉಪಸ್ಥಿತರಿದ್ದರು.
ಸಮ್ಮೇಳನಾಧ್ಯಕ್ಷರ ಪರಿಚಯ:
ಸುಮಾರು ನಾಲ್ಕು ದಶಕಗಳಿಂದ ಜಾನಪದ, ಕನ್ನಡ ಸಾಹಿತ್ಯ ಕ್ಷೇತ್ರಗಳಲ್ಲಿ ಸಂಶೋಧನೆ, ವಿಮರ್ಶೆಗಳಲ್ಲಿ ತೊಡಗಿಸಿಕೊಂಡಿರುವ ಡಾ. ಶ್ರೀಶೈಲ ನಾಗರಾಳ ಅವರು ಕಲ್ಯಾಣ ಕರ್ನಾಟಕದ ಹಿರಿಯ ಸಂವೇದನಾಶೀಲ ಲೇಖಕರಾಗಿದ್ದಾರೆ.
ಪ್ರತಿಷ್ಠಿತ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ವಿವಿಧ ಮಹಾವಿದ್ಯಾಲಯಗಳಲ್ಲಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ವೃತ್ತಿಯಿಂದ ನಿವೃತ್ತಿ ಹೊಂದಿದ್ದಾರೆ. ಗುಲಬರ್ಗ ವಿಶ್ವವಿದ್ಯಾಲಯ, ಹಂಪಿ ವಿಶ್ವವಿದ್ಯಾಲಯಗಳ ಸಂಶೋಧನಾ ಮಾರ್ಗದರ್ಶಕರಾಗಿದ್ದು, ೧೨ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ., ೪ ವಿದ್ಯಾರ್ಥಿಗಳು ಎಂ.ಫಿಲ್ ಪದವಿ ಪಡೆದಿದ್ದಾರೆ.
ವಿಮರ್ಶೆ, ಜನಪದ ಸಾಹಿತ್ಯ ಇವರ ಆಸಕ್ತಿ ಕ್ಷೇತ್ರಗಳಾಗಿದ್ದು, ಈ ವರೆಗೆ ಸುಮಾರು ೪೦ ಕ್ಕೂ ಹೆಚ್ಚು ವಿಮರ್ಶೆ, ಜೀವನ ಚರಿತ್ರೆ, ಸಂಶೋಧನೆ ವಿವಿಧ ವಿಶ್ವವಿದ್ಯಾಲಯಗಳಿಗೆ ಪಠ್ಯಗಳು ಇವರಿಂದ ರಚಿತವಾಗಿವೆ.
ಕಲಬುರಗಿಯ ಶ್ರೀ ಶರಣಬಸವೇಶ್ವರ, ಮಾಜಿ ಸಿಎಂ ವೀರೇಂದ್ರ ಪಾಟೀಲ, ಶರಣ ಏಕಾಂತರಾಮಯ್ಯ, ಸಿದ್ಧರಾಮ, ಉರಿವ ಬದುಕು, ಜೀವನ ಚರಿತ್ರೆಗಳು. ಕೃತಿ ಲೋಕ, ಆಕೃತಿ, ಹಂದರ, ಕಾಲದ ಕನ್ನಡಿ ಸಾಹಿತ್ಯ ವಿಮರ್ಶಾ ಕೃತಿಗಳಾಗಿವೆ. ಜಾನಪದ ವಿವೇಕ, ಜಾನಪದ ದೀಪ್ತಿ, ಜಾನಪದ ಬಾಗಿನ, ಜಾನಪದ ಸಮಾಜೋ ಸಂಸ್ಕೃತಿ ಇವ ಉ ಜಾನಪದ ವಿಮರ್ಶೆ, ಸಂಶೋಧನಾ ಗ್ರಂಥಗಳು.
ಸಣ್ಣ ಕಥೆಗಳ ಸಂಗ್ರಹ, ನಡುಗನ್ನಡ ಕಾವ್ಯ, ನಮ್ಮವರು ನಮ್ಮ ಹೆಮ್ಮೆ, ತಳವರ್ಗದ ವಚನಕಾರರು, ಡಾ. ಎಂ.ಎಸ್. ಲಠ್ಠೆ: ಆತ್ಮೀಯ ನೆನಪು, ಹಳಗನ್ನಡ ಸಾಹಿತ್ಯ ಸಂಚಯ, ಕಲಾ ಗಂಗಾ, ಸುವರ್ಣ ದಾಂಪತ್ಯ ಹೇಮ ಸಂಗಮ, ಕನ್ನಡ ಸಾಹಿತ್ಯ-ಸಂಸ್ಕೃತಿ; ಪ್ರಾಚೀನ ಕನ್ನಡ ಕಾವ್ಯಗಳ ಭಾಷಿಕ ಮತ್ತು ಛಂದಸ್ಸು, ಕನ್ನಡ ಸಾಹಿತ್ಯ-ಸಂಕ್ಷೀಪ್ತ ಪರಿಚಯ ಮುಂತಾದವುಗಳ ಸಂಗ್ರಹ, ಸಂಪಾದನೆ ಮತ್ತು ಪಠ್ಯ ರಚನೆಗಳಾಗಿವೆ.
ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ, ಗುಲಬರ್ಗ ವಿಶ್ವವಿದ್ಯಾಲಯದ ಕನ್ನಡ ರಾಜ್ಯೋತ್ಸವ ಪುಸ್ತಕ ಬಹುಮಾನ ಪ್ರಶಸ್ತಿ, ಲೋಹಿಯಾ ಪ್ರಶಸ್ತಿ, ಅಮ್ಮ ಗೌರವ ಪ್ರಶಸ್ತಿ, ಸಪ್ನ ವರ್ಷದ ಲೇಖಕ ಪ್ರಶಸ್ತಿ ಇವು ಪಡೆದ ಪ್ರಮುಖ ಪ್ರಶಸ್ತಿಗಳು.
ಡಾ. ಶ್ರೀಶೈಲ ನಾಗರಾಳ ಅವರು ಇಂಗ್ಲೆAಡ್, ಐರಲೆಂಡ್, ಸಿಂಗಾಪುರ ಮತ್ತು ಥಾಯ್‌ಲ್ಯಾಂಡ್ ದೇಶಗಳ ಪ್ರವಾಸ. ಐರಲೆಂಡ್ ನ ಸಿಟಿ ವಿಶ್ವವಿದ್ಯಾಲಯದಲ್ಲಿ ದಲಿತ ಸಣ್ಣ ಕಥೆಗಳ ಕುರಿತು ಪ್ರಬಂಧ ಮಂಡನೆ.
ಪ್ರಸ್ತುತ ಗುಲಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.