ಕಲಬುರಗಿ: ಮತಗಳ್ಳತನ ಮೂಲಕ ಅಧಿಕಾರ ಹಿಡಿಯುತ್ತಿರುವ ಬಿಜೆಪಿ ವಿರುದ್ಧ ಕಲಬುರಗಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ನಗರದ ಮುಖ್ಯ ರಸ್ತೆಗಳಲ್ಲಿ ‘ಮತಗಳ್ಳತನ ಪೋಸ್ಟರ್’ ಅಭಿಯಾನ ನಡೆಸಲಾಯಿತು.
‘ನಡೆಯುವುದಿಲ್ಲ, ನಡೆಯುವುದಿಲ್ಲ, ವೋಟ್ ಕಳ್ಳತನ ನಡೆಯುವುದಿಲ್ಲ’ ಎನ್ನುವ ಘೋಷಣೆ ಕೂಗುವ ಮೂಲಕ ಯುವ ಕಾಗ್ರೆಸ್ ಸಮಿತಿಯ ಮುಖಂಡರು ಇಲ್ಲಿನ ಸರ್ದಾರ್ ವಲ್ಲಭ್ ಭಾಯ್ ಪಟೇಲ್ ವೃತ್ತ ಸೇರಿದಂತೆ ಇತರ ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್, ಆಟೋ, ಮತ್ತಿತರ ವಾಹನಗಳ ಮೇಲೆ ಪೋಸ್ಟರ್ ಅಂಟಿಸಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಕೀಲ್ ಸರಡಗಿ, ಕೇಂದ್ರದ ಬಿಜೆಪಿ ಸರ್ಕಾರ, ಕೇಂದ್ರ ಚುನಾವಣಾ ಆಯೋಗಕ್ಕೆ ಒತ್ತಡ ಹಾಕುತ್ತಿದೆ, ಇದರ ಬಗ್ಗೆ ತನಿಖೆ ನಡೆಯಬೇಕು, ನಮ್ಮ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಅವರು ಈಗಾಗಲೇ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಆದರೂ ಕ್ರಮ ಆಗುತ್ತಿಲ್ಲ ಎಂದ ಅವರು, ಚುನಾವಣೆಯಲ್ಲಿ ನಿಯತ್ತಾಗಿ ಗೆದ್ದು ಅಧಿಕಾರ ಹಿಡಿಯಬೇಕು ವಿನಃ ಈ ತರಹ ಮತ ಕಳ್ಳತನ ಮಾಡಿ ಅಧಿಕಾರಕ್ಕೆ ಇರಬಾರದು ಎಂದು ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ಮುಖಂಡ ಈರಣ್ಣ ಪಾಟೀಲ್ ಝಳಕಿ ಮಾತನಾಡಿ, ಮತ ಕಳ್ಳತನ ಮಾಡುವ ಮೂಲಕ ಬಿಜೆಪಿ ಅಕ್ರಮವಾಗಿ ಅಧಿಕಾರ ಹಿಡಿಯುತ್ತಿದೆ, ಒಂದೊಂದು ಅಸೆಂಬ್ಲಿಯಲ್ಲಿ 1 ಲಕ್ಷಕ್ಕೂ ಹೆಚ್ಚಿನ ಮತಗಳ ಸೇರ್ಪಡೆ ಮಾಡಿ ಅಕ್ರಮ ಎಸಗಿರುವುದು ಕಾಣುತ್ತಿದೆ, ಇದರ ಬಗ್ಗೆ ಹೋರಾಡಿದರೂ ಅಂಥವರಿಗೆ ಬಂಧಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಈ ಕುರಿತು ಸಮಗ್ರ ತನಿಖೆ ನಡೆಯುವವರೆಗೂ ನಮ್ಮ ಅಭಿಯಾನ ನಡೆಯುತ್ತಲೇ ಇರುತ್ತದೆ ಎಂದರು.
ಈ ಸಂದರ್ಭದಲ್ಲಿ ಅಮರ ಶಿರವಾಳ, ಪರಶುರಾಮ ನಾಟೀಕರ್, ಉಮರ್ ಜುನೈದಿ, ರಾಜು ಮಾಳಗಿ, ಏಜಾಜ್ ನಿಂಬಾಳ್ಕರ್, ಗಣೇಶ ನಾಗನಹಳ್ಳಿ, ಸಂಗಪಾಲ್ ಕಾಂಬ್ಳೆ, ಮಿಸ್ತ್ರಿ ಶರ್ಫುದ್ದೀನ್, ಅಸ್ಲಾಂ ಸಿಂದಗಿ, ಕಾರ್ತಿಕ್ ಹೊಸಮನಿ ಸೇರಿದಂತೆ ಮತ್ತಿತರರು ಇದ್ದರು.