ಕಲಬುರಗಿ: ಚಿತ್ತಾಪುರ ತಾಲೂಕಿನಾದ್ಯಂದ ಕಳೆದ ಕೆಲವು ದಿನಗಳಿಂದ ಅರ್ಭಟದ ಮಳೆ ಸುರಿಯುತ್ತಿದ್ದು, ಧಾರಾಕಾರ ಮಳೆಯಿಂದ ಕಾಗಿಣಾ ನದಿ ತುಂಬಿ ಹರಿದು ದಂಡೋತಿ ಗ್ರಾಮದ ಕಾಗಿಣಾ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಇದರಿಂದ ವಾಹನ ಸಂಚಾರ ಸ್ಥಗಿತಗೊಂಡು ಸವಾರರು ಪರದಾಡಿದ ಪ್ರಸಂಗ ನಡೆಯುತ್ತಿದೆ.
ಬುಧವಾರ ರಾತ್ರಿ ಸಮಯದಿಂದ ನದಿಯಲ್ಲಿ ಪ್ರವಾಹ ವೇಗವಾಗಿ ಏರುಗತಿಯಲ್ಲಿ ಹೆಚ್ಚಾಗಿ ಸೇತುವೆ ಸಮನಾಗಿ ನೀರು ಹರಿಯುತ್ತಿತ್ತು, ಗುರುವಾರ ಬೆಳಗ್ಗೆ ಸೇತುವೆಯ ಮೇಲಿಂದ ನೀರು ಹರಿಯುತ್ತಿದೆ.
ಕಾಗಿಣಾ ನದಿ ಮೇಲ್ಬಾಗದ ಸೇಡಂ, ಚಿಂಚೋಳಿ, ಕಾಳಗಿ ತಾಲೂಕುಗಳಲ್ಲಿ ಹಾಗೂ ಬೆಣ್ಣೆತೋರಾ ಜಲಾಶಯದಿಂದ ನೀರು ಬಿಟ್ಟಿದ್ದರಿಂದ ನದಿಯಲ್ಲಿ ಪ್ರವಾಹ ಉಕ್ಕೇರಿ ಹರಿಯುತ್ತಿದೆ.
ಸೇತುವೆ ಮಾರ್ಗವಾಗಿ ನಿತ್ಯವೂ ಕಲಬುರಗಿಗೆ ಸಂಚರಿಸುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಸಂಚಾರವನ್ನು ರಾವೂರ್, ಶಹಾಬಾದ ಮಾರ್ಗಕ್ಕೆ ಬದಲಿಸಲಾಗಿದೆ. ಸರ್ಕಾರಿ ನೌಕರರು, ಸಾರ್ವಜನಿಕರು, ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಪ್ರಯಾಣಿಕರು ಚಿತ್ತಾಪುರಕ್ಕೆ ಬರಲು ಮತ್ತು ಕಲಬುರಗಿಗೆ ಹೋಗಲು ಶಹಾಬಾದ್ ಮಾರ್ಗದ ಸಂಚಾರ ಅವಲಂಬಿಸಿದ್ದಾರೆ.
ಮರಗೋಳ ಕ್ರಾಸ್, ದಂಡೋತಿ ಗ್ರಾಮ, ಮರಗೋಳ ಕ್ರಾಸ್ ಹತ್ತಿರ ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್’ಐ ಶ್ರೀಶೈಲ್ ಅಂಬಾಟಿ ಹಾಗೂ ಸಿಬ್ಬಂದಿಗಳು ಕಾಗಿಣ ನದಿಯ ಹತ್ತಿರ ಹೋಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದಾರೆ.
ಬೆಳೆ ಸಂಪೂರ್ಣ ಹಾನಿ:
ಧಾರಾಕಾರ ಮಳೆಯಿಂದ ತಾಲೂಕಿನ ವಿವಿಧೆಡೆ ನದಿ, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದ್ದು, ದಂಡೋತಿ, ಭಾಗೋಡಿ, ಮುಡಬೂಳ, ಮರಗೋಳ, ಕದ್ದರಗಿ ಗ್ರಾಮದ ಹೊಲಗಳಲ್ಲಿ ಮಳೆ ನೀರು ಹೊಲಗಳಿಗೆ ನುಗ್ಗಿ ತೊಗರಿ, ಉದ್ದು, ಸೋಯಾ, ಹೆಸರು ಬೆಳೆಗಳು ಹಾನಿಯಾಗಿವೆ.
ಧಾರಾಕಾರ ಮಳೆಗೆ 18 ಮನೆಗಳಿಗೆ ಹಾನಿ.
ಚಿತ್ತಾಪುರ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಜೂನ್’ಯಿಂದ ಇಲ್ಲಿಯವರೆಗೆ 18 ಮನೆಗಳ ಮೇಲ್ಚಾವಣಿ ಮತ್ತು ಗೋಡೆ ಕುಸಿತಗೊಂಡಿವೆ ಎಂದು ತಹಶೀಲ್ದಾರ್ ನಾಗಯ್ಯ ಹಿರೇಮಠ ಮಾಹಿತಿ ನೀಡಿದ್ದಾರೆ.
ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಮನೆಗಳು ಹಾನಿಗೊಳಾಗುತ್ತಿದ್ದು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಸಾರ್ವಜನಿಕರು ಕೂಡ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದ್ದಾರೆ.