ಕಲಬುರಗಿ: ನಗರದ ವಿಟಿಯು ಪ್ರಾದೇಶಿಕ ಕೇಂದ್ರದಲ್ಲಿ ಕರ್ನಾಟಕ ಸರ್ಕಾರದ ಸೈಬರ್ ಸೆಕ್ಯೂರಿಟಿ ಸೆಂಟರ್ ಆಫ್ ಎಕ್ಸಲೆನ್ಸ್ ಸೈಸೆಕ್ ಸಂಸ್ಥೆ ಮತ್ತು ವಿತಾವಿ, ಪ್ರಾದೇಶಿಕ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ ಎರಡು ದಿನಗಳ ಸೈಬರ್ ಸೆಕ್ಯೂರಿಟಿ ಬೂಟ್ ಕ್ಯಾಂಪನ್ನು ಉದ್ಘಾಟನೆ ಮಾಡಲಾಯಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಸೈಸೆಕ್ ಸಂಸ್ಥೆಯ ಮುಖ್ಯಸ್ಥ ರಂಜಿತ್ ಮಿಶ್ರಾ ಮಾತನಾಡುತ್ತಾ, ವರ್ತಮಾನದಲ್ಲಿ ಸೈಬರ್ ಸೆಕ್ಯೂರಿಟಿ ವಿಷಯ ಎಲ್ಲ ಕ್ಷೇತ್ರದಲ್ಲಿ ತನ್ನದೇ ಸಂಚಲನ ಸೃಷ್ಠಿಸುತ್ತಿದೆ. ವೈಜ್ಞಾನಿಕ ಬೆಳವಣಿಗೆ ಹೇಗೆ ಬೆಳೆಯುತ್ತಿದೆಯೋ ಹಾಗೆಯೇ ಸೈಬರ್ ವಂಚನೆಗಳು ಹೆಚ್ಚಾಗುತ್ತಿವೆ. ದತ್ತಾಂಶಗಳ ಭದ್ರತೆ, ಮಾಹಿತಿ ಭದ್ರತೆ, ನೆಟ್ವರ್ಕ್ ಭದ್ರತೆ ಮತ್ತು ಅಪ್ಲಿಕೇಷನ್ ಭದ್ರತೆಗಳಿಗೆ ಧಕ್ಕೆ ಉಂಟಾಗುತ್ತಿದೆ ಆದ್ದರಿಂದ ಎಲ್ಲರಿಗೂ ಈ ಕುರಿತಾಗಿ ಶಿಕ್ಷಣ ನೀಡುವುದರ ಜೊತೆಗೆ ಮಾಹಿತಿ ಹಂಚಿಕೆ ಮಾಡಬೇಕಿದೆ. ಅದರಲ್ಲಿಯೂ ಯುವಪೀಳಿಗೆಯು ಈ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಕಲಿಯಬೇಕು ಎಂದು ಹೇಳಿದರು. ಈ ನಿಟ್ಟಿನಲ್ಲಿ ಸೈಸೆಕ್ ಸಂಸ್ಥೆಯು ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಮನದಲ್ಲಿಟ್ಟುಕೊಂಡು ಈ ರೀತಿಯ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯೂರಿಟಿ ಕುರಿತಾಗಿ ನುರಿತ ತರಬೇತುದಾರರಿಂದ ವಿಶೇಷ ತರಗತಿಗಳು ಮತ್ತು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ, ಈ ಸ್ಪರ್ಧೆಗಳಲ್ಲಿ ಜಯಶಾಲಿಯಾದ ಐವತ್ತು ವಿದ್ಯಾರ್ಥಿಗಳನ್ನು ಎರಡು ತಿಂಗಳಗಳ ಕಾಲ ಉಚಿತ ತರಬೇತಿ ಮತ್ತು ಜಾಬ್ ಪ್ಲೇಸಮೆಂಟ್ ಮಾಡಿಕೊಡಲಾಗುವುದು.
ಈ ಕಾರ್ಯಕ್ರಮದಲ್ಲಿ ಕಲಬುರಗಿ, ಯಾದಗಿರಿ ಮತ್ತು ಬೀದರ್ ಜಿಲ್ಲೆಗಳ ಆರು ಇಂಜೀನಿಯರಿಂಗ್ ಕಾಲೇಜುಗಳಿಂದ 300ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪಾಲ್ಗೊಂಡಿದ್ದಾರೆ.
ಕಾರ್ಯಕ್ರಮದ ವೇದಿಕೆ ಮೇಲೆ ಸೈಸೆಕ್ ಸಂಸ್ಥೆಯ ಕಾರ್ಯಕ್ರಮ ನಿರ್ದೇಶಕ ಆನಂದ, ವಿಟಿಯು ಕಂಪ್ಯೂಟರ್ ಸೈನ್ಸ್ ಇಂಜಿನೀಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಎಮ್. ಎ. ವಹೀದ್, ವಿಚಿಯ ಸಂಶೋಧನೆ ಮತ್ತು ಅಭಿವೃದ್ಧಿ ಕೋಶದ ಸಂಯೋಜಕ ಡಾ. ಬ್ರಿಜ್ ಭೂಷಣ ಇದ್ದರು.