ಕಲಬುರಗಿ: ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರುಗಡೆ ಆಶಾಗಳ 3 ದಿನಗಳ ಧರಣಿಯು ಬುಧವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ನೂರಾರು ಸಂಖ್ಯೆಯಲ್ಲಿ ಆಶಾ ಕಾರ್ಯಕರ್ತೆಯರು ಜಿಲ್ಲಾಧಿಕಾರಿಗಳ ಕಛೇರಿ ಎದುರುಗಡೆ ರಸ್ತೆಯ ಮೇಲೆ ಧರಣಿ ಕುಳಿತಿದ್ದಾರೆ.
ಧರಣಿಯನ್ನು ಉದ್ದೇಶಿಸಿ ಎ.ಐ.ಎಂ.ಎಸ್.ಎಸ್ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಗುಂಡಮ್ಮಾ ಮಡಿವಾಳ ಮಾತನಾಡಿ, ಮುಖ್ಯಮಂತ್ರಿಗಳು ಆಶಾ ಕಾರ್ಯಕರ್ತೆಯರಿಗೆ ಮಾತು ಕೊಟ್ಟಂತೆ ಅವರ ವೇತನವನ್ನು 10,000/- ನಿಗದಿಗೊಳಿಸಬೇಕೆಂದು ಆಗ್ರಹಿಸಿದರು.
ಎ.ಐ.ಕೆ.ಕೆ.ಎಮ್.ಎಸ್. ಜಿಲ್ಲಾ ಅಧ್ಯಕ್ಷರಾದ ಗಣಪತ್ ರಾವ ಕೆ. ಮಾನೆ ಮಾತನಾಡಿ, ಸರಕಾರದ ಜನವಿರೋಧಿ, ಕಾರ್ಮಿಕ ವಿರೋಧಿ ಮತ್ತು ರೈತ ವಿರೋಧಿ ನೀತಿಗಳಿಂದಾಗಿ ಇಂದು ನಾವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಸರಕಾರವು ಶ್ರೀಮಂತ ಕೋಟ್ಯಾಧಿಶರ ಕೋಟ್ಯಾಂತರ ರೂಪಾಯಿ ತೆರಿಗೆಯನ್ನು ಮನ್ನಾ ಮಾಡುತ್ತದೆ, ಆದರೆ ಕಾರ್ಮಿಕರ ವೇತನವನ್ನು ಹೆಚ್ಚಿಸುವುದಿಲ್ಲ. ಬಂಡವಾಳಶಾಹಿಗಳು ಅತ್ಯಧಿಕ ಲಾಭಗಳಿಸಲು ಸರಕಾರ ಅನುಕೂಲ ಮಾಡಿಕೊಡುತ್ತದೆ. ರೈತರಿಗೆ ಸಹಾಯ ಮಾಡುವುದಿಲ್ಲ. ಆಶಾ ಕಾರ್ಯಕರ್ತೆಯರು ಬೀದಿಯಲ್ಲಿ ಕುಳಿತರು ಸರಕಾರಕ್ಕೆ ನಾಚಿಕೆ ಇಲ್ಲ. ತಮ್ಮ ನ್ಯಾಯ ಸಮ್ಮತ ಬೇಡಿಕೆಗಳಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದರು.
ಎ.ಐ.ಯು.ಟಿ.ಯು.ಸಿ ಜಿಲ್ಲಾ ಕಾರ್ಯದರ್ಶಿಗಳಾದ ಎಸ್.ಎಂ. ಶರ್ಮಾ ಮಾತನಾಡಿ, ಕಾರ್ಮಿಕರ ಸಮಸ್ಯೆಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಅವರ ಜೀವನ ಬಹಳ ದುರ್ಲಭವಾಗುತ್ತಿದೆ. ಸರಕಾರಗಳು ಕಾರ್ಮಿಕರ ಗೋಳು ಕೇಳುತ್ತಿಲ್ಲ. ಕಾಮಿಕರಿಗೆ ಹೋರಾಟ ಮಾಡದೇ ಬೇರೆ ದಾರಿ ಇಲ್ಲ. ಆಶಾ ಕಾರ್ಯಕರ್ತೆಯರ 3 ದಿನಗಳ ಅಹೋರಾತ್ರಿ ಧರಣಿ ಬಹಳ ದಿಟ್ಟತನದ ನಿರ್ಧಾರ, ಹೋರಾಟ ನಿರತ ಆಶಾ ಕಾರ್ಯಕರ್ತೆಯರಿಗೆ ಕ್ರಾಂತಿಕಾರಿ ಅಭಿನಂದನೆ ತಿಳಿಸಿದರು.
ಎರಡನೇ ದಿನದ ಧರಣಿಯಲ್ಲಿ ಸಂಗೀತಾ ಸಾವಳಗಿ, ಜಯಶ್ರೀ, ವಿಜಯಲಕ್ಷ್ಮೀ ತಾಯಮ್ಮ, ಶಾರದಾ ಈಜೇರಿ, ಲಕ್ಷ್ಮೀ ಮಂದೇವಾಲ, ಯಾಸಮೀನ ಅಂಕಲಗಾ, ಸುಗಂಧಾ ಅನ್ನೋಳ್ಳಿ, ಪ್ರಭಾ ತಹಾಬಾದ, ಮಂಜುಳಾ ವಾಡಿ, ಸಾವಿತ್ರಿ ಇಂಗಳಗಿ, ರೇಣುಕಾ, ನಾಗವೇಣಿ ಚಿಂಚೋಳಿ, ಯಶೋಧಾ, ಲಕ್ಷ್ಮೀ ಸುಲೆಪೇಟ, ಲಕ್ಷ್ಮೀ ಚಿಮ್ಮನಚೂಡ, ಸಾಬಮ್ಮ, ವಿಜಯಲಕ್ಷ್ಮೀ, ಲಕ್ಷ್ಮೀ ಮಲಖೇಡ, ಲಕ್ಷ್ಮೀ ಕುರಕುಂಟಾ, ಸವಿತಾ ಅಫಜಲಪುರ, ಭಾರತಿ, ಗೌರಮ್ಮ, ಲಕ್ಷ್ಮೀ ಗೊಬ್ಬುರ, ಮಮತಾಜ, ಸೇರಿದಂತೆ, ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕು ಹಾಗೂ ಹಳ್ಳಿಗಳಿಂದ ನೂರಾರು ಸಂಖ್ಯೆಯಲ್ಲಿ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಅಲ್ಲದೆ, ಎರಡನೇ ದಿನದ ಧರಣಿಗೆ ರೈತ ಸಂಘಟನೆ ಮುಖಂಡರಾದ ಶರಬಸಪ್ಪ ಮಮಶೆಟ್ಟಿ, ಭೀಮಾಶಂಕರ ಮಾಡಿಯಾಳ ಸೇರಿದಂತೆ ಹಲವು ಮುಖಂಡರು ಬೆಂಬಲ ವ್ಯಕ್ತಪಡಿಸಿದರು.