ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇದೇ 15 ರಂದು ನಗರದ ಕನ್ನಡ ಭವನದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದೆ.
ಈ ಬಾರಿ ಪೌರ ಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸುವುದರೊಂದಿಗೆ ಸ್ವಾತಂತ್ರೋತ್ಸವ ಆಚರಿಸಲಾಗುತ್ತಿದೆ. ಅಂದು ಬೆಳಗ್ಗೆ 8. 30 ಕ್ಕೆ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು. ನಂತರ ಬೆಳಗ್ಗೆ 11ಕ್ಕೆ ಚಿತ್ರಕಲಾವಿದ ಡಾ.ರೆಹಮನ್ ಪಟೆಲ್ ಅವರ ನೇತೃತ್ವದಲ್ಲಿ ಜಿಲ್ಲೆಯ 15 ಜನ ಕಲಾವಿದರಿಂದ ಚಿತ್ರಕಲಾ ಪ್ರದರ್ಶನ ಆಯೋಜಿಸಲಾಗಿದೆ.

ಹೊಸ ಪೀಳಿಗೆಗೆ ಸ್ವಾತಂತ್ರ್ಯ ಹೋರಾಟದ ಕುರಿತಾಗಿ ಮಾಹಿತಿ ನೀಡುವ ಉದ್ದೇಶದಿಂದ ಅಪರೂಪದ ಚಿತ್ರಕಲಾ ಪ್ರದರ್ಶನ ರೂಪಿಸಲಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಇತಿಹಾಸ ತಿಳಿಸುವ ಹೊಸದೊಂದು ಕಾರ್ಯಕ್ರಮ ಏರ್ಪಡಿಸಲಾಗಿದೆ.
ಜಿಲ್ಲಾ ನ್ಯಾಯಾದೀಶರೂ ಆದ ಖಾಯಂ ಜನತಾ ನ್ಯಾಯಾಲಯದ ಅಧ್ಯಕ್ಷ ಎಸ್. ಎಲ್. ಚವ್ಹಾಣ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಹಾಂತ ಸ್ವಾಮಿಗಳು ಮುದಗಲ್ ಅವರು ಸಾನಿಧ್ಯ ವಹಿಸಲಿದ್ದಾರೆ. ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ವಿಶ್ರಾಂತ ಆಯುಕ್ತ ದಯಾನಂದ ಪಾಟೀಲ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ, ಕಸಾಪ ಕೇಂದ್ರ ಸಮಿತಿಯ ಸಂಘ ಸಂಸ್ಥೆಗಳ ಪ್ರತಿನಿಧಿ ಸೈಯ್ಯದ್ ನಜಿರುದ್ದಿನ್ ಮುತ್ತವಲಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.