ಕಲಬುರಗಿ/ಬೆಳಗಾವಿ: ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹೊರವಲಯದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ದಂಪತಿ ಸೇರಿ ನಾಲ್ವರು ಮೃತಪಟ್ಟಿದ್ದು, ಓರ್ವ ಗಂಭೀರ ಗಾಯಗೊಂಡಿರುವ ಘಟನೆ ರವಿವಾರ ಮಧ್ಯಾಹ್ನ ಸಂಭವಿಸಿದೆ.
ಮೀರಜ್ ಕಡೆಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಗೆ ಕೊಲ್ಹಾಪುರದ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗಿ ಕಲಬುರಗಿಯತ್ತ ವಾಪಸಾಗುತ್ತಿದ್ದ ಕಾರೊಂದು ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಕೆಲವರು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ದುದ್ದುಣಗಿ ಗ್ರಾಮದವರಾಗಿದ್ದಾರೆ. ಮೃತಪಟ್ಟ ನಾಲ್ವರ ಶವವನ್ನು ಪೋಸ್ಟ್ ಮಾರ್ಟಂ ಗೆ ಸಾಗಿಸಲಾಗಿದ್ದು, ಓರ್ವ ಅಥಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಅಥಣಿ ಪೊಲೀಸರು ತಿಳಿಸಿದ್ದಾರೆ.
ರಾಹುಲ್ ರಾಜು ಮ್ಯಾಲೇಜಿ (28), ರಾಧಿಕಾ ರಾಹುಲ್ ಮ್ಯಾಲೇಜಿ (22), ಸಂಗಮೇಶ್ ಗಿರೀಶ್ ಅಮರಗೊಂಡ(23), ಗಿರೀಶ್ ಅಶೋಕ್ ಬಳೂರಗಿ (30) ಮೃತಪಟ್ಟಿದ್ದು, ಗಂಭೀರ ಗಾಯಗೊಂಡ ಕಲಬುರಗಿ ಮೂಲದ ವಿನಾಯಕ ಪ್ರತಾಪ್ ತಿವಾರಿ (28) ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಲ್ಲದೆ, ಬಸ್ಸಿನಲ್ಲಿದ್ದ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿರುವುದು ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.