ಕಲಬುರಗಿ: ದುಡ್ಡು ಕೊಟ್ಟು ಮನೆ ಮಂಜೂರು ಮಾಡಲಾಗಿದೆ ಎನ್ನುವ ವಸತಿ ನಿಗಮದ ಹಗರಣವನ್ನು ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕೆಂದು ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಆಗ್ರಹಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಗಮದಲ್ಲಿ ಭ್ರಷ್ಟಾಚಾರ ಆಗಿದೆ ಎನ್ನುವ ವಿಚಾರದಲ್ಲಿ ನೈತಿಕ ಹೊಣೆ ಹೊತ್ತು ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು, ಇಲ್ಲದಿದ್ದರೆ ಸಿಎಂ ಅವರು ಝಮೀರ್ ಅವರನ್ನು ಸಂಪುಟ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ಸರಕಾರ ಅಧಿಕಾರ ಬಂದಾಗಿನಿಂದ ಕಳೆದ 2 ವರ್ಷದಿಂದಲೂ ಭ್ರಷ್ಟಾಚಾರದಲ್ಲಿ ತೊಡಗಿದೆ, ಯಾವುದಾದರೂ ಭ್ರಷ್ಟಾಚಾರದ ಆರೋಪಗಳು ಹೊರ ಬಿದ್ದರೆ, ಅಂತಹವುಗಳನ್ನು ಮುಚ್ಚಿ ಹಾಕಲು ಸರಕಾರ ವಿಷಯಾಂತರದ ಅಂಶಗಳನ್ನು ಬಿಚ್ಚಿಡುತ್ತದೆ. ಎಸ್.ಸಿ ಎಸ್.ಟಿ ಹಣ, ವಾಲ್ಮೀಕಿ ನಿಗಮಾದ ಹಣ, ಮೂಡಾ ಹಗರಣ ಮಾಡಿರುವುದು ನೋಡಿದರೆ ಸರಕಾರ ಭ್ರಷ್ಟಾಚಾರದಿಂದ ಕೂಡಿದೆ ಎಂದರ್ಥ ಎಂದು ವಿವರಿಸಿದರು.
ಕಾಂಗ್ರೆಸ್ ಸರಕಾರದ ವಿರುದ್ಧ ರಾಜ್ಯದ ಗುತ್ತಿಗೆದಾರ ಹೇಳುತ್ತಿದ್ದಾರೆ, ಇದು 60 ಪರ್ಸೆಂಟೇಜ್ ಸರಕಾರ, ಇದು ಆತ್ಮಹತ್ಯೆ ಸರಕಾರವಾಗಿದೆ ಎಂದು ಆರೋಪ ಮಾಡಿದರೆ, ಇತ್ತ ಕಾಂಗ್ರೆಸ್ ಶಾಸಕರೇ ಭ್ರಷ್ಟಾಚಾರದ ಕುರಿತು ಆರೋಪಗಳನ್ನು ಬಯಲಿಗೆಳೆಯುತ್ತಿದ್ದಾರೆ ಎಂದರು.
ನಿಗಮದಲ್ಲಿ ಆಗಿರುವಂತಹ ಭ್ರಷ್ಟಾಚಾರ ಕುರಿತಾಗಿ ಸಚಿವ ಪ್ರಿಯಾಂಕ್ ಖರ್ಗೆ ಬಾಯಿ ಬಿಡುತ್ತಿಲ್ಲ, ಅವರು ಯಾಕೆ ಮೌನ ವಹಿಸುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ. ಮಾತೆತ್ತಿದರೆ ಮೋದಿ, ಕೇಂದ್ರ ಸರಕಾರದ ವಿರುದ್ಧ ಮಾತನಾಡುವ ಸಚಿವ ಖರ್ಗೆ ಅವರು ಭ್ರಷ್ಟ ಸಚಿವರನ್ನು ವಜಾ ಮಾಡಬೇಕು ಎಂದು ಹೇಳಲಿ, ಸಿಎಂ ಅವರಿಗೆ ಹೇಳಿ ಸಚಿವರಿಂದ ರಾಜೀನಾಮೆ ಪಡೆಯಲಿ ಎಂದು ಸವಾಲು ಹಾಕಿದ್ದಾರೆ.
ಒಂದು ವೇಳೆ ಸಚಿವ ಝಮೀರ್ ಅಹ್ಮದ್ ಖಾನ್ ಅವರ ಸಚಿವ ಸ್ಥಾನವನ್ನು ವಜಾ ಗೊಳಿಸದೆ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರವಾಗಿ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನ ನಾವು ಹೋರಾಟ ಮಾಡಿದ್ದರೆ, ಎಸ್ ಐಟಿ ತನಿಖೆ ಮಾಡುವುದಾಗಿ ಸಿಎಂ ಹೇಳುತ್ತಾರೆ. ತಮ್ಮದೇ ಪೊಲೀಸರನ್ನು ಇಟ್ಟುಕೊಂಡು ಇವರು ಹೇಗೆ ತನಿಖೆ ಮಾಡುತ್ತಾರೆ ಎನ್ನುವುದು ಈಗಾಗಲೇ ಗೊತ್ತಾಗಿದೆ ಎಂದ ಅವರು, ಮುಡಾ ಹಗರಣಕ್ಕೆ ಕೋರ್ಟ್ ಛೀಮಾರಿ ಹಾಕಿದೆ, ವಾಲ್ಮೀಕಿ ಹಗರಣದಲ್ಲಿ ಮುಖ್ಯ ಆರೋಪಿ ನಾಗೇಂದ್ರ ಅವರನ್ನು ಕ್ಲೀನ್ ಚೀಟ್ ಮಾಡುವು ಪ್ರಯತ್ನ ಮಾಡಿದ್ದೀರಿ, ಆದರೆ ಕೋಟ್ಯಂತರ ಹಣ ದುರ್ಬಳಕೆ ಮಾಡಿರುವುದು ಇ.ಡಿ ಯಿಂದ ತಿಳಿದುಬಂದಿದೆ ಎಂದರು.
ಗ್ರಾಮ ಸಭೆ ಆಗಬೇಕು, ನಿಯಮ ಬಾಹಿರವಾಗಿ ಮಂಜೂರು ಆಗಿರುವ ಮನೆಗಳನ್ನು ರದ್ದು ಪಡಿಸಬೇಕು, ಫಲಾನುಭವಿಗಳಿಗೆ ಮನೆ ದೊರಕುವಂತೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಅಶೋಕ್ ಬಗಲಿ, ಶಾಸಕ ಬಸವರಾಜ್ ಮತ್ತಿಮಡು, ಚಂದು ಪಾಟೀಲ್, ಮಹದೇವ ಬೆಳಮಗಿ, ಅಮರನಾಥ್ ಪಾಟೀಲ್, ಹರ್ಷಾ ಗುತ್ತೇದಾರ್, ಆನಂದ ಪಾಟೀಲ್, ಶರಣಗೌಡ ಪಾಟೀಲ ದೇವಂತಗಿ ಸೇರಿದಂತೆ ಮತ್ತಿತರರು ಇದ್ದರು.