ಕಲಬುರಗಿ: ಪೊಲೀಸ್ ಸಿಬ್ಬಂದಿಗಳ ಕಾರ್ಯನಿರತ ಸಂದರ್ಭದಲ್ಲಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಇಬ್ಬರ ಯುವಕರ ವಿರುದ್ಧ ಪ್ರಕರಣ ದಾಖಲಿಸಿ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಬೈರಾಮಡಗಿ ಮೂಲದ ಬಿದ್ದಾಪೂರ ಕಾಲೋನಿ ನಿವಾಸಿ ಮಲ್ಲಿನಾಥ ತಿಪ್ಪಣ್ಣ (30) ಮತ್ತು ಜೇವರ್ಗಿ ಪಟ್ಟಣದ ಮೂಲದ ಸದ್ಯ ಕರುಣೇಶ್ವರ ನಗರ ನಿವಾಸಿ ಅಯ್ಯನಗೌಡ ಅಲಿಯಾಸ್ ಆಕಾಶ ಸಿದ್ದಣ್ಣ(26) ಬಂಧಿತ ಆರೋಪಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೂ.18ರಂದು ಪ್ರವೀಣ್ ತೊಗಾಡಿಯಾ ನಗರಕ್ಕೆ ಆಗಮಿಸುತ್ತಿರುವುದರಿಂದ ಬಂದೋಬಸ್ತ್ ಗಾಗಿ ನಗರದ ಸಂಗಮೇಶ್ವರ ಕಾಲೋನಿಯ ಎಸ್ಬಿಐ ಬ್ಯಾಂಕ್ ಹತ್ತಿರ ರಾಘವೇಂದ್ರ ನಗರ ಪೊಲೀಸ್ ಠಾಣೆಯ ಎ.ಎಸ್.ಐ ಮಲ್ಲಿಕಾರ್ಜನ ಗೌರಾ ಮತ್ತಿತರ ಸಿಬ್ಬಂದಿಯವರನ್ನು ಕರ್ತವ್ಯಕ್ಕೆ ನೇಮಿಸಲಾಗಿತ್ತು. ಆ ದಿನದಂದು ರಾತ್ರಿ 8 ಗಂಟೆಯ ಸುಮಾರಿಗೆ ಕೆಲವು ಜನರು ರೋಡಿನ ಮೇಲೆ ಗುಂಪಾಗಿ ಸೇರಿ ಕಾನ್ವೆಗೆ ತೊಂದರೆ ಕೊಡುವ ಸಾಧ್ಯತೆ ಕಂಡುಬಂದಿರುವದರಿಂದ ಅವರಿಗೆ ರಸ್ತೆಯ ಮೇಲಿಂದ ಪಕ್ಕಕ್ಕೆ ಹೋಗುವಂತೆ ಹೇಳಲಾಗಿತ್ತು. ಆದರೆ ಅಲ್ಲಿದ್ದ ಮಲ್ಲಿನಾಥ ಮತ್ತು ಅಯ್ಯನಗೌಡ ಇಬ್ಬರೂ ಏರುಧ್ವನಿಯಲ್ಲಿ ಮಾತಾಡುತ್ತಾ ನೀವೇನು ಪೊಲೀಸ್ ಕೆಲಸ ಮಾಡುತ್ತಿರಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರಿ ಅಂತಾ ಏರು ಧ್ವನಿಯಲ್ಲಿ ಮಾತಾಡುತ್ತಾ ಹೊಡೆಯಲು ಬಂದಂತೆ ಮಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ ಎಂದು ಆರೋಪಿಸಿ ಎ.ಎಸ್.ಐ ಮಲ್ಲಿಕಾರ್ಜುನ್ ಅವರು ರಾಘವೇಂದ್ರ ನಗರ (ಆರ್.ಜಿ ನಗರ ಠಾಣೆ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪೊಲೀಸರಿಂದ ತನಿಖಾ ತಂಡವನ್ನು ರಚಿಸಿ, ಆರೋಪಿಗಳ ಪತ್ತೆಗಾಗಿ ಜಾಲ ಬೀಸಲಾಗಿತ್ತು. ಇದೀಗ ಆರೋಪಿಗಳಿಬ್ಬರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಆರ್.ಜಿ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.