ಕಲಬುರಗಿ: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರ್ಯಾಯ ನಾಯಕ ಯಾರು ಇಲ್ಲ. ವಿಶ್ವದ ಎಲ್ಲಾ ರಾಷ್ಟ್ರಗಳು ಪ್ರಧಾನಿ ಮೋದಿಯನ್ನು ವಿಶ್ವ ನಾಯಕನೆಂದು ಗುರುತಿಸಿವೆ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದ ಜನರ ಮನಸ್ಸಿನಲ್ಲಿ ಮೋದಿ ಬೇರುರಿದ್ದಾರೆ. ಅಂತರಾಷ್ಪ್ರೀಯ ಮಟ್ಟದಲ್ಲಿ ಮೋದಿಯ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಅವರಿಗೆ ಎಲ್ಲೆಡೆ ಪ್ರಚಾರ ಸಿಗುತ್ತಿದೆ. ಆದರೆ, ರಾಹುಲ್ ಗಾಂಧಿ ಯಾವುದೇ ವಿಶ್ವ ಮನ್ನಣೆ ಸಿಗುತ್ತಿಲ್ಲ. ಅವರು ಯಾವತ್ತು ಪ್ರಬಲ ನಾಯಕನಾಗಿ ಗುರುತಿಸಿಕೊಂಡಿಲ್ಲ. ಪ್ರಧಾನಿ ಮೋದಿಯಂತೆ ರಾಹುಲ್ ಗಾಂಧಿಗೆ ಜಗತ್ತಿನಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಲ್ಲ ಎಂದರು.
ಹಿಂದೇ ಭಾರತವನ್ನು ಭಿಕ್ಷುಕರ ದೇಶವೆಂದು ಕರೆಯುತ್ತಿದ್ದರು. ಕಾಂಗ್ರೆಸ್ ಕಾಲದಲ್ಲಿ ಆರ್ಥಿಕ ಮಂತ್ರಿಗಳು ವಿದೇಶಕ್ಕೆ ಹೋದರೆ, ಸಾಲ ಕೇಳಲು ಹೋಗುತ್ತಿದ್ದಾರೆ ಎಂದು ಆಡಿಕೊಳ್ಳುತ್ತಿದ್ದರು. ೨೦೧೪ರ ನಂತರ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಭಾರತವನ್ನು ವಿದೇಶಿ ನಾಯಕರು ನೋಡುವ ದೃಷ್ಟಿಯೇ ಬೇರೆಯಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜವಾಬ್ದಾರಿಯಿಲ್ಲ. ಬೇಜವಾಬ್ದಾರಿಯುತ ಸಿಎಂ ಆಗಿದ್ದಾರೆ. ಭವಿಷ್ಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಮುಂದರೆಸಿದರೂ, ಮುಂದುವರೆಸದಿದ್ದರೂ ಸರಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿ ಸಲ ಪ್ರಧಾನಿ ನರೇಂದ್ರ ಮೋದಿ ಮೇಲೆ ವಾಗ್ದಾಳಿ ನಡೆಸಿ, ಮೋದಿ ಉದ್ಯೋಗ ನೀಡಲಿಲ್ಲ. ಬಡವರಿಗೆ ಏಳಿಗೆಗೆ ಶ್ರಮೀಸಲಿಲ್ಲ ಎಂದು ಆರೋಪಿಸುತ್ತಾರೆ. ಮೋದಿ ಮೋಸಗಾರ, ಸುಳ್ಳಗಾರ ಎಂದು ಕರೆಯುತ್ತಾರೆ. ಆದರೆ, ನಿಮ್ಮ ಅಧಿಕಾರದ ಅವಧಿಯಲ್ಲಿ ದೇಶದ ಬಡತನ ನಿರ್ಮೂಲನೆ ಎಷ್ಟು ಪ್ರಮಾಣದಲ್ಲಿ ಮಾಡಿದ್ದೀರಾ ಎನ್ನುವುದು ಹೇಳಿ ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಡಾ.ಉಮೇಶ್ ಜಾಧವ್, ಭಗವಂತ ಖೂಬಾ,ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ, ನಗರಾಧ್ಯಕ್ಷ ಚಂದು ಪಾಟೀಲ್ ಸೇರಿದಂತೆ ಇತರೆ ನಾಯಕರು ಉಪಸ್ಥಿತರಿದ್ದರು.