ಕಲಬುರಗಿ: ಜಿಲ್ಲೆಯಾದ್ಯಂತ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತ್ ಸ್ಥಳೀಯ ಸಂಸ್ಥೆಗಳಲ್ಲಿ ಜನನ-ಮರಣ ನೊಂದಣಿಗೆ ಬರುವ ಅರ್ಜಿಯನ್ನು ವಿಳಂಬ ಮಾಡದೆ ಸಕಾಲದಲ್ಲಿ ನೋಂದಣಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 21 ದಿನದೊಳಗೆ ಜನನ-ಮರಣ ನೋಂದಣಿ ಮಾಡಬೇಕಾಗಿರುತ್ತದೆ. ಅಂಗನವಾಡಿ-ಆಶಾ ಕಾರ್ಯಕರ್ತೆಯರು, ಕುಟುಂಬದ ಸದಸ್ಯರು, ಅಂಬುಲೆನ್ಸ್ ವಾಹನದ ಚಾಲಕರು ಹೊಸದಾಗಿ ಜನನ-ಮರಣ ಕುರಿತು ಸಂಬಂಧಪಟ್ಟವರಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲೆಯ ಜನನ-ಮರಣ ನೋಂದಣಾಧಿಕಾರಿಗಳಾಗಿರುವ ಡಿ.ಸಿ. ತಿಳಿಸಿದರು.
2025ರ ಜನವರಿ ದಿಂದ ಮೇ ಮಾಹೆ ವರೆಗೆ ಜಿಲ್ಲೆಯ 261 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜನನ ನೋಂದಣಿಗೆ ಸಲ್ಲಿಕೆಯಾದ 548ರಲ್ಲಿ 532ಕ್ಕೆ ಮತ್ತು ಮರಣ ನೋಂದಣಿಗೆ ಸಲ್ಲಿಕೆಯಾದ 3,453 ರಲ್ಲಿ 3,443 ಅನುಮೋದನೆ ನೀಡಿದ್ದು, ಬಾಕಿ ಅರ್ಜಿಯನ್ನು ಕೂಡಲೆ ಅನುಮೋದಿಸಬೇಕು. ತಾಲೂಕಾ ಪಂಚಾಯತ್ ಇ.ಓ.ಗಳು ಇದರ ಮೇಲುಸ್ತುವಾರಿ ವಹಿಸಬೇಕು. ಇನ್ನು ಗ್ರಾಮ ಪಂಚಾಯತಿ ಹಂತದಲ್ಲಿ ಕಾಲಮಿತಿಯಲ್ಲಿ ನೋಂದಣಿ ಮಾಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಡಿ.ಸಿ. ಅವರು, ಕೆಲಸದಲ್ಲಿ ನಿರ್ಲಕ್ಷ್ಯ ವಹಿಸುವ ಪಿ.ಡಿ.ಓ. ಗಳಿಗೆ ನೋಟಿಸ್ ಜಾರಿ ಮಾಡುವಂತೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
2024-25ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ಕಟಾವು ಪರಿಣಾಮಕಾರಿ ಅನುಷ್ಠಾನ ನಿಟ್ಟಿನಲ್ಲಿ ಜಿಲ್ಲೆಗೆ ಮುಂಗಾರಿನಲ್ಲಿ 3,424, ಹಿಂಗಾರಿನಲ್ಲಿ 2,676 ಹಾಗೂ ಬೇಸಿಗೆಯಲ್ಲಿ 152 ಸೇರಿ ಒಟ್ಟು 6,252 ಪ್ರಯೋಗಗಳನ್ನು ಯೋಜಿಸಿದ್ದು, ಇದರಲ್ಲಿ ಒಟ್ಟಾರೆ 4,861 ಪ್ರಯೋಗಗಳನ್ನು ಕೈಗೊಳ್ಳಲಾಗಿದೆ ಎಂದು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುವ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಜಯಶ್ರೀ ಕರಜಗಿ ಸಭೆಗೆ ತಿಳಿಸಿದರು. ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಬೆಳೆ ಕಟಾವು ಪರಿಣಾಮಕಾರಿ ಅನುಷ್ಠಾನಕ್ಕೆ ಹೋಬಳಿವಾರು ಕೃಷಿ, ಕಂದಾಯ, ತೋಟಗಾರಿಕೆ, ಆರ್.ಡಿ.ಪಿ.ಆರ್ ಸಿಬ್ಬಂದಿಗಳಿಗೆ ತರಬೇತಿ ಆಯೋಜಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಎಸ್.ಎಸ್.ಮಠಪತಿ, ತೋಟಗಾರಿಕೆ ಉಪನಿರ್ದೇಶಕ ಸಂತೋಷ ಇನಾಂದಾರ, ಕೃಷಿ ಉಪನಿರ್ದೇಶಕಿ ಅನುಸೂಯಾ ಹೂಗಾರ, ತಾಲೂಕಿನ ತಹಶೀಲ್ದಾರರು, ತಾಲೂಕ ಪಂಚಾಯತ್ ಇ.ಓ.ಗಳು, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ಇದ್ದರು.