ಕಲಬುರಗಿ: ಆಳಂದ ಪಟ್ಟಣದಲ್ಲಿ ಆಳಂದ ನಿವೃತ್ತ ಸೈನಿಕರ ಅಭಿವೃದ್ಧಿ ಸಂಘ ಹಾಗೂ ಸಮತಾಲೋಕ ಶಿಕ್ಷಣ ಸಮಿತಿಯ ಆಶ್ರಯದಲ್ಲಿ 2ನೇ ಬಾರಿಗೆ ಆಯೋಜಿಸಲಾದ ಉಚಿತ ಸೇನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭ ರವಿವಾರ ನಡೆಯಿತು.
ಈ ಕಾರ್ಯಕ್ರಮದಲ್ಲಿ ರಾಜ್ಯ ನೀತಿ ಆಯೋಗದ ಉಪಾಧ್ಯಕ್ಷರೂ ಆದ ಸಮಿತಿಯ ಅಧ್ಯಕ್ಷ ಹಾಗೂ ಶಾಸಕ ಬಿ.ಆರ್. ಪಾಟೀಲ್ ಮುಖ್ಯವಾಗಿ ಪಾಲ್ಗೊಂಡು ಯುವಕರಿಗೆ ಸ್ಫೂರ್ತಿದಾಯಕ ಮಾತುಗಳನ್ನಾಡಿ ಯುವಕರು ದೇಶದ ಬೆನ್ನೆಲುಬು. ಸೇನಾ ತರಬೇತಿಯಂತಹ ಕಾರ್ಯಕ್ರಮಗಳು ಯುವಕರಲ್ಲಿ ಶಿಸ್ತು, ಧೈರ್ಯ ಮತ್ತು ರಾಷ್ಟ್ರಭಕ್ತಿಯನ್ನು ಮೂಡಿಸುತ್ತವೆ. ಇಂತಹ ಶಿಬಿರಗಳು ಯುವಕರಿಗೆ ಸೇನೆಯಲ್ಲಿ ವೃತ್ತಿಜೀವನ ಕಟ್ಟಿಕೊಳ್ಳಲು ದಾರಿದೀಫವಾಗಿವೆ. ಯುವಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ದೇಶ ಸೇವೆಯಲ್ಲಿ ತೊಡಗಿಕೊಳ್ಳಬೇಕೆಂದು ಅವರು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಅವರು ಮಾತನಾಡಿ, “ಸೇನಾ ತರಬೇತಿ ಶಿಬಿರವು ಯುವಕರಿಗೆ ಕೇವಲ ದೈಹಿಕ ತರಬೇತಿಯನ್ನಷ್ಟೇ ಅಲ್ಲ, ಮಾನಸಿಕ ಸಾಮರ್ಥ್ಯವನ್ನೂ ಹೆಚ್ಚಿಸುತ್ತದೆ. ಆಳಂದದ ಯುವಕರು ಈ ಶಿಬಿರದ ಮೂಲಕ ತಮ್ಮ ಕನಸುಗಳಿಗೆ ಬಲವಾದ ತಳಹದಿಯನ್ನು ಕಟ್ಟಿಕೊಡುತ್ತೆದೆ. ಜಿಲ್ಲಾಡಳಿತವು ಇಂತಹ ಉಪಕ್ರಮಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಅವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಅಧಿಕಾರಿ ವಿಜಯಲಕ್ಷ್ಮಿ ಹೋಳ್ಕರ್, ಡಿವೈಎಸ್ಪಿ ಗೋಪಿ ಬಿ.ಆರ್, ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಸಿದ್ದಲಿಂಗ ಮಲಶೆಟ್ಟಿ, ಚಿನ್ಮಯ ಗಿರಿ ಶ್ರೀಗಳು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಶಿಬಿರಾರ್ಥಿಗಳಿಗೆ ತರಬೇತಿ ಪೂರ್ಣಗೊಳಿಸಿದ್ದಕ್ಕಾಗಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ತರಬೇತಿಯ ಪ್ರದರ್ಶನವೂ ನಡೆಯಿತು, ಇದು ಗಣ್ಯರಿಂದ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮವು ಯುವಕರಲ್ಲಿ ಉತ್ಸಾಹ ಮತ್ತು ದೇಶಭಕ್ತಿಯನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು.