ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸೇಡಂ ತಾಲೂಕು ಘಟಕದಿಂದ ಆಚರಿಸುವ ಪತ್ರಿಕಾ ದಿನಾಚರಣೆಯಲ್ಲಿ ಹಿರಿಯ ಪತ್ರಕರ್ತ ಲಿಂ.ಬಿ.ಮಹಾದೇವಪ್ಪ ಅವರ ಹೆಸರಿನಲ್ಲಿ ಕೊಡಮಾಡುವ ಪ್ರಶಸ್ತಿಗೆ ಹಿರಿಯ ಪತ್ರಕರ್ತರಾದ ಟಿ.ವಿ.ಶಿವಾನಂದನ್ ಹಾಗೂ ಸುಭಾಷ ಬಣಗಾರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಶರಣು ಮಹಾಗಾಂವ ಹಾಗೂ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯಸ್ವಾಮಿ ಆಡಕಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಾಡಿನ ಹಿರಿಯ ಪತ್ರಕರ್ತರಲ್ಲಿ ಒಬ್ಬರಾದ ತಾಲೂಕಿನ ಬೆನಕನಹಳ್ಳಿಯ ಮಹಾದೇವಪ್ಪನವರ ಹೆಸರಿನಲ್ಲಿ ಕಳೆದ ವರ್ಷದಿಂದ ಪ್ರಶಸ್ತಿ ಕೊಡಮಾಡಲಾಗುತ್ತಿದೆ. ಅನೇಕ ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಸೇವೆಗೈದು ಇದೀಗ ಶರಣಬಸವೇಶ್ವರ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿ ಕರ‍್ಯನಿರ್ವಹಿಸುತ್ತಿರುವ ಟಿ.ವಿ.ಶಿವಾನಂದನ್, ಸಂಯುಕ್ತ ಕರ್ನಾಟಕ ಪತ್ರಿಕೆಯ ಕಲಬುರಗಿ ಅವೃತ್ತಿಯ ಸ್ಥಾನಿಕ ಸಂಪಾದಕ ಸುಭಾಷ ಬಣಗಾರ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ. ಇವರಿಗೆ ಪ್ರಶಸ್ತಿ ಪತ್ರ, ಫಲಕ ಮತ್ತು 5,000/- ನಗದು ನೀಡಿ ಗೌರವಿಸಲಾಗುತ್ತದೆ. ಇದೇ ವೇಳೆಯಲ್ಲಿ ಪತ್ರಿಕೆ ವಿತರಕ ಇಮಡಾಪೂರದ ರಜಾಕ್ ಅವರನ್ನು ವಿಶೇಷವಾಗಿ ಸತ್ಕರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.