ಕಲಬುರಗಿ: ಜೀವನ ಶೈಲಿ ಬದಲಾವಣೆಯಿಂದಾಗಿ ಮಕ್ಕಳು, ಯುವಕರಲ್ಲಿ ಹೃದಯಾಘಾತದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ಖ್ಯಾತ ಹೃದಯ ತಜ್ಞ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭಾ ಸದಸ್ಯ ಡಾ.ಸಿ.ಎನ್ ಮಂಜುನಾಥ ಅವರು ಕಳವಳ ವ್ಯಕ್ತಪಡಿಸಿದರು.
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ನೇತೃತ್ವದಲ್ಲಿ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ಸಭಾಭವನದಲ್ಲಿ ನಡೆದ ‘ವೈದ್ಯಕೀಯ ನಿರ್ವಹಣೆ ಮತ್ತು ಹೃದಯಾಘಾತ’ ಎಂಬ ವಿಷಯದ ಕುರಿತು ಉಪನ್ಯಾಸ ಹಾಗೂ ವೈದ್ಯಕೀಯ ಕ್ಷೇತ್ರದ ಸಾಧನೆ ಮಾಡಿದ ವೈದ್ಯರ ಸನ್ಮಾನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡುತ್ತಿದ್ದರು.
ಯುವಕರು- ಮಧ್ಯ ವಯಸ್ಕರಲ್ಲಿ ಹೃದಯಾಘಾತ ಹೆಚ್ಚಾಗುತ್ತಿದೆ. ನಮ್ಮ ದೈನಂದಿನ ಒತ್ತಡದಿಂದ ಹೃದಯದ ಮೇಲೆ ಅತಿಯಾದ ಒತ್ತಡ ಹಾಕುತ್ತೇವೆ. ಇದರಿಂದ ಹೃದಯದ ಸಮಸ್ಯೆಗಳು ಆಗಾಗ ಕಾಡುತ್ತಲೇ ಇರುವುದು. ಆದ್ದರಿಂದ ಯುವಕರು ತಮ್ಮ ಜೀವನ ಶೈಲಿ ಹಾಗೂ ಆಹಾರ ಸೇವನೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು ಸಲಹೆ ನೀಡಿದರು.
ಭಾರತದಲ್ಲಿ ಯುವ ಸಮೂಹದ ಹೃದಯ ಅಷ್ಟೊಂದು ಆರೋಗ್ಯವಾಗಿಲ್ಲ. ಪ್ರತಿಷ್ಠಿತ ಕುಟುಂಬ ವ್ಯಕ್ತಿಗಳು ಸಾವನ್ನಪ್ಪಿದರೆ ಮಾತ್ರ ಸುದ್ದಿಯಾಗುತ್ತದೆ. ಕಳೆದ 15 ವರ್ಷಗಳಿಂದ ಯುವಕರಲ್ಲಿ ಶೇ.22 ಹೃದಯಾಘಾತ ಹೆಚ್ಚಾಗಿದೆ. ಹೀಗಾಗಿ ಯುವ ಸಮೂಹ ಹಲವು ರೀತಿಯ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದರು.
‘ಯುವಕರಲ್ಲಿ ಉಂಟಾಗುತ್ತಿರುವ ಹೃದಯಾಘಾತಕ್ಕೆ ಮದ್ಯಪಾನ, ಧೂಮಪಾನ ಹಾಗೂ ಒತ್ತಡವೇ ಪ್ರಮುಖ ಕಾರಣವಾಗಿದೆ. ಐದು ದಶಕಗಳ ಹಿಂದೆ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಿಗೆ ಹೃದಯಾಘಾತವಾಗುತ್ತಿದ್ದುದನ್ನು ನಾನು ನೋಡಿರಲಿಲ್ಲ. ಆದರೆ, ಈಗ 50 ರಿಂದ 30ರ ವಯೋಮಿತಿಯಲ್ಲಿರುವ ಹೆಂಗಸರಲ್ಲೂ ಈ ರೋಗ ಕಾಣಿಸಿಕೊಳ್ಳುತ್ತಿದೆ. ಶೇ 30ರಷ್ಟು ಮಂದಿಗೆ ಯಾವುದೇ ಚಟ ಇಲ್ಲ. ಹಾಗಾಗಿ, ಕಾರಣಗಳ ಕುರಿತು ಸಂಶೋಧನೆ ನಡೆಯುತ್ತಿದೆ’ ಎಂದರು.
ಹೃದಯಾಘಾತವು ಭಯಾನಕ ಅನುಭವ. ಹೃದಯಾಘಾತವು ಜೀವಕ್ಕೆ ಅಪಾಯಕಾರಿ ಮತ್ತು ತಕ್ಷಣದ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುತ್ತದೆ. ಯಾರಿಗಾದರೂ ಹೃದಯಾಘಾತದ ಲಕ್ಷಣಗಳು ಕಂಡುಬಂದರೆ, ತಕ್ಷಣವೇ ವೈದ್ಯಕೀಯ ಆರೈಕೆಯನ್ನು ಪಡೆದು ತಕ್ಷಣದ ವೈದ್ಯಕೀಯ ಆರೈಕೆಯೊಂದಿಗೆ, ಸಕಾರಾತ್ಮಕ ಫಲಿತಾಂಶದೊಂದಿಗೆ ಅಮೂಲ್ಯ ಜೀವನ ಉಳಿಸಬಹುದು ಎಂದು ಹೇಳಿದರು.
ಡಾ.ಈರಣ್ಣ ಹೀರಾಪೂರ ಮಾತನಾಡಿ, ಇಡೀ ದೇಶದಲ್ಲಿ ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವ ಪರಿಸ್ಥಿತಿ ಇರುವ ಇಂತಹ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷರಿಂದಲೂ ಪ್ರಶಂಸೆಗೆ ಪಾತ್ರವಾಗಿ, ಲಕ್ಷಾಂತರ ಸಾಮಾನ್ಯ ಜನರ ಚಿಕಿತ್ಸಾ ದೇಗುಲವಾಗಿ ಬೃಹದಾಗಿ ಬೆಳೆದ ಜಯದೇವ ಹೃದ್ರೋಗ ಸಂಸ್ಥೆಗೆ ಸುಮಾರು 16 ವರ್ಷಗಳಿಂದ ಡಾ.ಸಿ.ಎನ್.ಮಂಜುನಾಥ್ ಅವರ ಸುದೀರ್ಘ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳಾದ ಪ್ರಸ್ತುತ ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಹೈದರಾಬಾದ್ ಡಾ.ದೀಲಿಪ್ ಭಾನುಶಾಲಿ, ಭಾರತಿಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಡಾ.ವಿ.ವಿ ಚಿನಿವಾಲ್ ಅವರನ್ನು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ್ ಚಿಂಚೋಳಿ, ಡಾ.ಶರಣಬಸಪ್ಪ ಹರವಾಳ, ಡಾ ಕಿರಣ್ ದೇಶಮುಖ್, ನಿಶಾಂತ್ ಎಲಿ, ಡಾ.ಗುರು ಪಾಟೀಲ್ ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ವೈದ್ಯಕೀಯ ಕಾಲೇಜಿನ ಡೀನ್ ಡಾ.ಶರಣಗೌಡ ಪಾಟೀಲ್, ಡಾ.ಮಲ್ಲಿಕಾರ್ಜುನ ಬಂಡಾರ, ಡಾ.ಪೂಜಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಆನಂದ ಗಾರಂಪಳ್ಳಿ , ಡಾ.ಕಪ್ಪಿಕೇರಿ, ಡಾ. ಸುರೇಶ್ ಹರಸೂರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಡಾ. ಅನಿತಾ ಗೌರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.