ಕಲಬುರಗಿ: ಸಂವಿಧಾನದ ಪೀಠಿಕೆಯಲ್ಲಿರುವಂತೆ ನಾಡಿನ ಪ್ರತಿ ಪ್ರಜೆಯು ಗೌರವ ಮತ್ತು ಸ್ವಾಭಿಮಾನದಿಂದ ಬದುಕಲು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ದೊರಕಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ರಾಜ್ಯದ ಗ್ರಾಮೀಣಾಭೀವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ.-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಮಂಗಳವಾರ ಇಲ್ಲಿನ ಪೂಜ್ಯ ಬಸವರಾಜಪ್ಪ ಅಪ್ಪ ಮೆಮೋರಿಯಲ್ ಹಾಲ್ (ಅಪ್ಪಾ ಪಬ್ಲಿಕ್ ಶಾಲೆ) ಯಲ್ಲಿ ಆಯೋಜಿಸಿದ ಕಲಬುರಗಿ ಮಹಾನಗರ ಪಾಲಿಕೆಯ ಪೌರಕಾರ್ಮಿಕರ ಗುತ್ತಿಗೆ ಪದ್ದತಿಯನ್ನು ರದ್ದುಪಡಿಸಿ ಪಾಲಿಕೆಯಿಂದ ನೇರ ವೇತನ ಪಾವತಿ ಮಾಡುವ ಆದೇಶ ವಿತರಣೆ, ಗ್ರಾಮ ಆಡಳಿತ ಅಧಿಕಾರಿಗಳಿಗೆ ನೇಮಕಾತಿ ಪತ್ರ ಮತ್ತು ಕ್ರೋಮ್ ಬುಕ್ ವಿತರಣೆ, ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪೌರಕಾರ್ಮಿಕರು ನಗರದ ಬೆನ್ನೆಲಬು ಇದ್ದಂತೆ. ಬೆಳಿಗೆದ್ದು ಕಾರ್ಮಿಕರು ಸ್ವಚ್ಛ ಮಾಡದೆ ಹೋದರೆ ಸುಂದರ ಕಲಬುರಗಿ ನೆನಸಿಕೊಳ್ಳಲು ಆಗಲ್ಲ. ಆಡಳಿತ ನಡೆಸುವುದು ಸುಲಭ. ಆದರೆ ನಗರದ ಸ್ವಚ್ಛತೆಯ ರಾಯಭಾರಿಗಳಾಗಿರುವ ತಮ್ಮ ಕೆಲಸಕ್ಕೆ ನನ್ನ ಕೋಟಿ ವಂದನೆಗಳು. ಇಂದಿನಿಂದ ನೀವು ಪಾಲಿಕೆಯ ನೌಕರರಾಗಿದ್ದು, ಗುತ್ತಿಗೆ ಪದ್ದತಿ ಇಂದಿನಿಂದ ಕೊನೆಯಾಗಲಿದೆ. ನಾಡಿನ ಜನ ತಮ್ಮ ಪಕ್ಷದ ನೇತೃತ್ವದ ಸರ್ಕಾರಕ್ಕೆ ಆಶೀರ್ವಾದ ನೀಡಿದಾಗಲೆಲ್ಲ ಈ ರೀತಿಯಾಗಿ ಜನರಿದಗೆ ಸ್ಪಂದಿಸುವಂತಹ, ಶ್ರಮಿಕ ವರ್ಗಕ್ಕೆ ನ್ಯಾಯ ನೀಡುವಂತಹ ಕೆಲಸ ಮಾಡಿದ್ದೇವೆ ಎಂದರು.
ಡಾ.ಮಲ್ಲಿಕಾರ್ಜುನ ಖರ್ಗೆ ಮತ್ತು ದಿ. ಧರ್ಮಸಿಂಗ್ ಅವರ ವಿಶೇಷ ಪ್ರಯತ್ನದಿಂದ 371ಜೆ ಕಾಯ್ದೆ ಪ್ರದೇಶಕ್ಕೆ ಲಭಿಸಿದೆ. ಕಲಬುರಗಿ ಜನರ ಆಶೀರ್ವಾದಿಂದ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್ತಿಗೆ ಪ್ರವೇಶ ಮಾಡಿದ ಕೂಡಲೆ ಯು.ಪಿ.ಎ. ಸರ್ಕಾರ ಈ ಭಾಗಕ್ಕೆ 371ಜೆ ವಿಶೇಷ ಮೀಸಲಾತಿ ಕಲ್ಪಿಸುವ ಮೂಲಕ ನ್ಯಾಯ ಒದಗಿಸಿದ್ದರು. ಪರಿಣಾಮ ಪ್ರತಿ ವರ್ಷ 5,000 ಕೋಟಿ ರೂ. ಪ್ರದೇಶಕ್ಕೆ ಹರಿದು ಬರುವುದರ ಜೊತೆಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸ್ಥಳೀಯರಿಗೆ ಮೀಸಲಾತಿ ಸಿಕ್ಕಿದೆ ಎಂದ ಅವರು, ನಗರದ ವಾಜಪೇಯಿ ಬಡಾವಣೆಯಲ್ಲಿ “ನೈಸ್” ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗುತ್ತಿದ್ದು, ಮುಂದಿನ ಜುಲೈ ಕೊನೆಯ ವಾರದಲ್ಲಿ ಉದ್ಘಾಟನೆ ಮಾಡಲಾಗುವುದು. ಮೊದಲಿಗೆ 500 ಜನರಿಗೆ ಐ.ಎ.ಎಸ್, ಕೆ.ಎ.ಎಸ್ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು. ಮುಂದೆ 2,000 ಅಭ್ಯರ್ಥಿಗಳಿಗೆ ಒಟ್ಟಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದರು.
ಉದ್ದೇಶಿತ ಅಮೆರಿಕಾ ಪ್ರವಾಸಕ್ಕೆ ಕೇಂದ್ರ ಸರ್ಕಾರ ನಿರಾಕರಣೆ ಕುರಿತು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಅಮೆರಿಕಾದಲ್ಲಿ ನಮ್ಮ ಬೀಗರು-ನೆಂಟರು ಯಾರಿಲ್ಲ. ನಾಡಿನ ಯುವಕರಿಗೆ ಉದ್ಯೋಗ ದೊರಕಿಸಲು ಹೆಚ್ಚಿನ ಹೂಡಿಕೆ ಮಾಡಲು ಪ್ರತಿಷ್ಠಿತ ಕಂಪನಿಗಳಿಗೆ ಆಹ್ವಾನಿಸುವುದು ಪ್ರವಾಸದ ಉದ್ದೇಶವಾಗಿತ್ತು. ಆದರೆ ಕೇಂದ್ರ ಸರ್ಕಾರ ನಿರಕರಣೆ ಮಾಡುವ ಮೂಲಕ ಬಂಡವಾಳ ಹೂಡಿಕೆ ಕೈತಪ್ಪಿದೆ. ಕಳೆದ ಸರ್ಕಾರದ ಅವಧಿಯಲ್ಲಿ ಐ.ಟಿ.-ಬಿ.ಟಿ. ಸಚಿವನಾಗಿ ತಾವು ಅಮೆರಿಕಾ ಪ್ರವಾಸ ಕೈಗೊಂಡಿದ್ದ ಪರಿಣಾಮ ರಾಜ್ಯದಲ್ಲಿ 21,842 ಕೋಟಿ ರೂ. ಬಂಡವಾಳ ಹರಿದು ಬಂದು 20,000 ಜನರಿಗೆ ಉದ್ಯೋಗ ಸಿಕ್ಕಿದೆ. ಬೆಂಗಳೂರಿಗೆ ಪ್ರಮುಖ ಕಂಪನಿಗಳು ಬಂದಲ್ಲಿ ಅದರ ಸಣ್ಣ-ಪುಟ್ಟ ಘಟಕಗಳು ಕಲಬುರಗಿಯಲ್ಲಿ ತೆರೆದರೆ ನಮ್ಮ ಜಿಲ್ಲೆಯ ಯುವಕರಿಗೆ ಅನುಕೂಲವಾಗುತ್ತೆ ಎಂಬುದು ನಮ್ಮ ಆಸೆಯಾಗಿತ್ತು ಎಂದರು.
ಇದಕ್ಕು ಮುನ್ನ ಮಾತನಾಡಿದ ಎಂ.ಎಲ್.ಸಿ. ತಿಪ್ಪಣಪ್ಪ ಕಮಕನೂರು ಅವರು ಪೌರ ಕಾರ್ಮಿಕರ ಮಕ್ಕಳ ಮದುವೆ, ಧಾರ್ಮಿಕ ಕಾರ್ಯಕ್ರಮಕ್ಕೆ ಪೌರ ಕಾರ್ಮಿಕರ ಭವನ ನಿರ್ಮಿಸಬೇಕೆಂಬ ಬೇಡಿಕೆಗೆ ವೇದಿಕೆ ಮೂಲಕವೇ ಸ್ಪಂದಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ನಾವು ನೀವು ಸೇರಿ ಎಲ್ಲರು ಅನುದಾನ ನೀಡಿ ಪೌರ ಕಾರ್ಮಿಕರ ಭವನ ನಿರ್ಮಿಸೋಣ ಎಂದ ಅವರು, ಸಿ.ಎ. ನಿವೇಶನ ಗುರುತಿಸಿ ಕಾಯ್ದಿರಿಸಿ ಎಂದು ಪಾಲಿಕೆ ಆಯುಕ್ತರಿಗೂ ಸೂಚನೆ ನೀಡಿದ್ದರು.
ಕಲಬುರಗಿ ಸ್ಮಾರ್ಟ್ ಸಿಟಿ ಶತಸಿದ್ಧ:
ಹಿಂದೆ 371ಜೆ ಕಾಯ್ದೆ ಎನ್.ಡಿ.ಎ. ಸರ್ಕಾರ ವಿರೋಧಿಸಿತ್ತು, ನಮ್ಮ ಯು.ಪಿ.ಎ. ಸರ್ಕಾರ ಅದನ್ನು ಜಾರಿಗೆ ತಂತು. ಅದೇ ರೀತಿ ಇವಾಗ ಕಲಬುರಗಿ ಸ್ಮಾರ್ಟ್ ಸಿಟಿ ಮಾಡಲು ಕೇಂದ್ರ ಹಿಂದೇಟು ಹಾಕುತ್ತಿದೆ. ಆದರೆ ಕಲಬುರಗಿ ಜನರ ಕನಸಿನಂತೆ ಭವಿಷ್ಯದ 25 ವರ್ಷದ ಮುಂದಾಲೋಚನೆಯೊಂದಿಗೆ ಕಲಬುರಗಿಯನ್ನು ಸ್ಮಾರ್ಟರ್ ಸಿಟಿ ಮಾಡುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಘೋಷಿಸಿದರು.
ದಿನದಿಂದ ದಿನಕ್ಕೆ ಕಲಬುರಗಿ ಹೆಮ್ಮರವಾಗಿ ಬೆಳೆಯುತ್ತಿರುವುದರಿಂದ ರಸ್ತೆ, ಸಾರಿಗೆ, ಸುಗಮ ಸಂಚಾರ, ಬೀದಿ ದೀಪ, ಘನತ್ಯಾಜ್ಯ ವಿಲೇವಾರಿ, ಸ್ವಚ್ಛತೆ, ಉದ್ಯಾನವನ ಹೀಗೆ ಸಕಲ ಸೌಲಭ್ಯಗಳೊಂದಿಗೆ ಕಲಬುರಗಿಯನ್ನು ಅಧುನಿಕ ನಗರವನ್ನಾಗಿಸಲು ಅರ್ಬನ್ ಪ್ಲ್ಯಾನರ್‌ಗಳ ಸಹಾಯ ಪಡೆಯಲಾಗುತ್ತಿದೆ. ಈ ನಿಟ್ಟಿನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹ್ಯೂಮೆನ್ ಸೆಟ್ಲಮೆಂಟ್ಸ್ ಖಾಸಗಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಕಳೆದ ಒಂದೂವರೆ ವರ್ಷದಿಂದ ಸ್ಥಳೀಯ ಶಾಸಕರು, ಪಾಲಿಕೆ ಮತ್ತು ಸಂಸ್ಥೆಯೊಂದಿಗೆ ಚರ್ಚಿಸಿ ನೀಲಿ ನಕ್ಷೆ ಸಿದ್ದಪಡಿಸಲಾಗುತ್ತಿದೆ. ತಮ್ಮ ಸರ್ಕಾರದ ಉಳಿದ 3 ವರ್ಷಗಳ ಅವಧಿಯಲ್ಲಿಯೆ ಸ್ಮಾರ್ಟರ್ ಸಿಟಿ ಕಾರ್ಯಕ್ಕೆ ಚಾಲನೆ ನೀಡುವ ಮೂಲಕ ನವ ಕಲಬುರಗಿ ನಿರ್ಮಾಣ ಮಾಡಲಾಗುವುದು ಎಂದರು.
ಮುಂದಿನ ಎರಡು ವರ್ಷದ ಅವಧಿಯಲ್ಲಿ ಹಸಿರು ಕಲಬುರಗಿಗಾಗಿ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಪಾಲಿಕೆಯಿಂದ ಜಂಟಿಯಾಗಿ 30 ಉದ್ಯಾನವನ ನಿರ್ಮಿಸಲಾಗುತ್ತದೆ. ನಗರದಲ್ಲಿ 4 ಕೆರೆ ನಿರ್ಮಿಸುವ ಮೂಲಕ ಪರಿಸರ ಸಮತೋಲನಕ್ಕೆ ಮುಂದಡಿ ಇಡಲಾಗುವುದು. ಪ್ರಮುಖ 23 ವೃತ್ತಗಳನ್ನು ಪುನರ್ ಅಭಿವೃದ್ಧಿಪಡಿಸಿ ನಗರ ಸೌಂದರ್ಯ ಹೆಚ್ಚಿಸಲಾಗುವುದು ಎಂದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಕ್ರೀಡಾಪಟುಗಳ ಅನುಕೂಲಕ್ಕಾಗಿ ವಸತಿ ನಿಲಯ, ಇತರೆ ಕಟ್ಟಡಗಳ ನಿರ್ಮಾಣಕ್ಕೆ 33 ಕೋಟಿ ರೂ. ನೀಡಲಾಗಿದೆ. ಕ್ರೀಡೆಗೆ ಉತ್ತೇಜನ ನೀಡುವ ಕೆಲಸ ಮುಂದುವರೆದಿದ್ದು, ಕಲಬುರಗಿಯನ್ನು ಕ್ರೀಡಾ ನಗರಿ ಮಾಡುವ ಯೋಚನೆ ಇದೆ ಎಂದರು.
ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರರಾದ ಯಲ್ಲಪ್ಪ ನಾಯ್ಕೋಡಿ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಇಂದಿಲ್ಲಿ ಪಾಲಿಕೆಯ 935 ಪೌರ ಕಾರ್ಮಿಕರಿಗೆ ಸರ್ಕಾರದಿಂದಲೆ ನೇರವಾಗಿ ವೇತನ ಪಾವತಿಸುವ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದ್ದು ಸಂತೋಷದ ವಿಚಾರ. ಇದಲ್ಲದೆ ಸುಮಾರು 600ಕ್ಕೂ ಹೆಚ್ಚು ಲೋಡರ್ಸ್, ಸ್ವೀಪರ್ಸ್ ಗಳಿದ್ದು, ಇವರ ಬಗ್ಗೆಯೂ ತಾವು ಕಾಳಜಿ ಪ್ರದರ್ಶಿಸಿ ಕಾರ್ಮಿಕ ವರ್ಗಕ್ಕೆ ನ್ಯಾಯ ದೊರಕಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರಲ್ಲಿ ಮನವಿ ಮಾಡಿಕೊಂಡರು.
ಕಾರ್ತಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ಕಲಬುರಗಿ ನಗರದ ಒಳಚರಂಡಿ ವ್ಯವಸ್ಥೆ 40 ವರ್ಷದ ಹಳೇಯದಾಗಿದ್ದು, ಪ್ರತಿ ದಿನ ಚರಂಡಿ ಸಮಸ್ಯೆಯಿಂದ ಪಾಲಿಕೆ ಸದಸ್ಯರು ಮತ್ತು ಶಾಸಕರ ಮನೆ ಮುಂದೆ ಸಾರ್ವಜನಿಕರ ಪ್ರತಿಭಟನೆ ಸಾಮಾನ್ಯವಾಗಿದೆ. ಹೀಗಾಗಿ ಇದಕ್ಕೆ ಮುಕ್ತಿ ನೀಡಿ ಹೊಸದಾಗಿ ಒಳಚರಂಡಿ ನಿರ್ಮಾಣಕ್ಕೆ ಸುಮಾರು 700 ಕೋಟಿ ರೂ. ಅವಶ್ಯಕತೆ ಇದ್ದು, ತಮ್ಮ ರಾಜಕೀಯ ಪ್ರಭಾವ ಬೀರಿ ಈ ಕೆಲಸ ಮಾಡಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರಲ್ಲಿ ಮನವಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಪಾಲಿಕೆಯ 935 ಪೌರ ಕಾರ್ಮಿಕರಿಗೆ ನೇರವಾಗಿ ಪಾಲಿಕೆಯಿಂದ ವೇತನ ಪಾವತಿಯ ಆದೇಶ ಪ್ರತಿ, ನೂತನವಾಗಿ ಗ್ರಾಮ ಆಡಳಿತಾಧಿಕಾರಿಯಾಗಿ ನೇಮಕವಾದ 67 ಜನರಿಗೆ ನೇಮಕಾತಿ ಪತ್ರ ಮತ್ತು ಗ್ರಾಮೀಣ ಮಟ್ಟದಲ್ಲಿ ತಂತ್ರಜ್ಞಾನ ಸಮರ್ಪಕ ಬಳಕೆಗೆ 154 ಜನ ವಿ.ಎ.ಓ.ಗಳಿಗೆ ಕ್ರೋಮ್ ಪುಸ್ತಕ ವಿತರಣೆ ಮಾಡಲಾಯಿತು. ಸಚಿವರು ಸಾಂಕೇತಿಕವಾಗಿ ಆಯ್ದ ಫಲಾನುಭವಿಗಳಿಗೆ ನೀಡುವ ಮೂಲಕ ಇದಕ್ಕೆ ಚಾಲನೆ ನೀಡಿದ್ದರು.
ಕಾರ್ಯಕ್ರಮದಲ್ಲಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಕರ್ನಾಟಕ ರಾಜ್ಯ ರೇಷ್ಮೆ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷೆ ಮತ್ತು ಶಾಸಕಿ ಕನೀಜ್ ಫಾತಿಮಾ, ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರು, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಮಹಾನಗರ ಪಾಲಿಕೆಯ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ, ಸಹಾಯಕ ಆಯುಕ್ತರ ಸಾಹಿತ್ಯ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು, ಅಧಿಕಾರಿಗಳು ಹಾಗೂ ನೂರಾರು ಸಂಖ್ಯೆಯಲ್ಲಿ ಪೌರ ಕಾರ್ಮಿಕರು ಇದ್ದರು.