ಕಲಬುರಗಿ: ರಾಜ್ಯದಲ್ಲಿ ಸೆಪ್ಟೆಂಬರ್ ನಂತರ ಸಿಎಂ ಬದಲಾವಣೆ ಆಗುತ್ತದೆ ಎಂದು ಎಚ್. ವಿಶ್ವನಾಥ ಅವರಿಗೆ ನಮ್ಮ ಹೈಕಮಾಂಡ್ ಆ ರೀತಿ ಯಾವಾಗ ಹೇಳಿದ್ದಾರೋ ಗೊತ್ತಿಲ್ಲ, ಸಿಎಂ ಬದಲಾವಣೆ ಪ್ರಸ್ತಾವನೆ ಸರಕಾರದ ಮುಂದೆ ಇಲ್ಲ, ಸಿದ್ದರಾಮಯ್ಯನವರೇ ಐದೂ ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಹೇಳಿದ್ದಾರೆ.
ನಗರದ ಐವಾನ್ ಇ ಶಾಹಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಜನಾಶಿರ್ವಾದದಿ೦ದ ಅಧಿಕಾರಕ್ಕೆ ಬಂದಿರುವ ನಮ್ಮ ಸರಕಾರದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರೇ ಇರಲಿದ್ದಾರೆ ಎಂದು ಪುನರುಚ್ಚರಿಸಿದರು.
ಆರ್ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿದಿಂದಾಗಿ 11 ಮಂದಿ ಸಾವಿಗೀಡಾಗಿದ್ದಾರೆ, ಇದು ಆಗಬಾರದಿತ್ತು, ಇದರಿಂದ ಸರಕಾರಕ್ಕೆ ನೋವುಂಟಾಗಿದೆ, ಆದರೆ ಬಿಜೆಪಿಗರು ಇದರಲ್ಲಿ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ, ಘಟನೆಗೆ ಲೋಪದೋಷ ಕಂಡುಹಿಡಿಯಲು ಕಮಿಷನ್ ನೇಮಕ ಮಾಡಲಾಗಿದೆ, ಸಂಪೂರ್ಣ ತನಿಖೆಯಾಗಬೇಕಾಗಿದೆ ಅಂತಹದಲ್ಲಿ ರಾಜಕೀಯ ಮಾಡುವುದು ಬಿಜೆಪಿಗರ ಮೂರ್ಖತನ ಎಂದರು.
ಕಾಲ್ತುಳಿತದಂತಹ ಘಟನೆಗಳು ಅಲ್ಲಲ್ಲಿ ನಡೆದಿವೆ, ಮೊನ್ನೆ ಮೊನ್ನೆ ವಿಮಾನ ದುರಂತವಾಗಿ 250ಕ್ಕೂ ಹೆಚ್ಚು ಜನ ಸಾವಿಗೀಡಾದ ಘಟನೆ ಗುಜರಾತ್‌ನ ಅಹಮದಾಬಾದ್ ನಲ್ಲಿ ನಡೆದಿದೆ, ಹೇಲಿಕಾಪ್ಟರ್ ಪತನವಾಗಿ 6ಕ್ಕೂ ಹೆಚ್ಚು ಜನ ಮೃತಪಟ್ಟಿರುವ ಘಟನೆ ಇಂದೇ(ರವಿವಾರ) ಬೆಳಕಿಗೆ ಬಂದಿದೆ. ಇದೆಲ್ಲವನ್ನು ಮುಂದಿಟ್ಟುಕೊಂಡು ನಾವು ಪ್ರಧಾನಿಯವರು ರಾಜೀನಾಮೆ ಕೇಳಿದ್ದೀವಾ? ಇಂತಹದರಲ್ಲಿ ರಾಜಕೀಯ ಬೆರೆಸಬಾರದು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಯಾವುದೇ ದೇಶದಲ್ಲಿ ವ್ಯಕ್ತಿಪೂಜೆ ಹೆಚ್ಚಾದಾಗ ಸರ್ವಾಧಿಕಾರದತ್ತ ದೇಶ ಸಾಗುತ್ತದೆ, ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಆ ನಿಟ್ಟಿನಲ್ಲಿ ಪ್ರಜಾಪ್ರಭುತ್ವದ ಬಲವರ್ಧನೆಗೆ ಕಾಂಗ್ರೆಸ್ ಪಕ್ಷದಿಂದ ಇತ್ತೀಚೆಗೆ 2500 ಕಿ.ಮಿ.ನಷ್ಟು ಉದ್ದದ ಮಾನವ ಸರಪಳಿ ನಿರ್ಮಿಸಿ ಸುಮಾರು 25 ಲಕ್ಷಕ್ಕೂ ಹೆಚ್ಚು ಜನ ಸೇರಿಸಿ ಸಂವಿಧಾನದ ಜಾಗೃತಿ ಮಾಡಲಾಗಿದೆ. ಇದೇ ಜಾಗೃತಿ ಮಾಡುವ ಮತ್ತು ಸಂವಿಧಾನದ ಮೂಲಕ ಸಮೃದ್ಧ ಭಾರತ ಕಟ್ಟುವ ಕೆಲಸ ಬುದ್ಧನು ಬಿಕ್ಕುಗಳಿಂದ, ಬಸವಣ್ಣ ವಚನಗಳ ಮೂಲಕ ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರರು ಸಂವಿಧಾನದ ಮೂಲಕ ಮಾಡಿದ್ದಾರೆ. ಇದನ್ನು ನಾವು ಮುಂದುವರಿಸುತ್ತೇವೆ. ವ್ಯಕ್ತಿ ಪೂಜೆಗಿಂತ ದೇಶ ಸೇವೆ ಶ್ರೇಷ್ಟ ಎನ್ನವುದು ಜನರಲ್ಲಿ ಬರಬೇಕಿದೆ ಎಂದರು.
ರಾಜ್ಯ ಸರಕಾರ 2013ರಲ್ಲಿ 160 ಕೋಟಿ ರೂ. ವ್ಯಯಮಾಡಿ ಜಾತಿಜನಗಣತಿ ಮಾಡಲಾಗಿದೆ, ಈ ಗಣತಿಯಿಂದ ಹಿಂದುಳಿದವರನ್ನು ಸೇರಿಸಿಕೊಳ್ಳುವುದಕ್ಕೆ ಸರಕಾರ 90 ದಿನಗಳ ಸಮಯ ನಿಗದಿ ಮಾಡಿದೆ, ಇದರಿಂದ ಯಾವುದೇ ಸಮುದಾಯದ ಸಂಖ್ಯೆ ಹೆಚ್ಚು ಕಡಿಮೆ ಮಾಡಲು ಅಲ್ಲ ಸದ್ಯದಲ್ಲಿರುವ ನಿಗದಿತ ದತ್ತಾಂಶ ಸಂಗ್ರಹ ಮಾಡುವುದು ಸರಕಾರದ ಜವಾಬ್ದಾರಿಯಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು.
ಸಂವಿಧಾನ ಮತ್ತು ಸರಕಾರದ ಮೇಲೇ ಇಲ್ಲಸಲ್ಲದ ಆರೋಪಗಳು ಮಾಡಿ ಪದೇ ಪದೇ ರಾಜೀನಾಮೇ ಕೇಳಿತ್ತಿರುವ ಬಿಜೆಪಿ ತನ್ನ ಚೈಲ್ಡಿಸ್ಟ್ ಬುದ್ದಿ ಪ್ರದರ್ಶನ ಮಾಡುತ್ತಿರುವುದು ಜನರ ಮುಂದೆ ಬಯಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ, ಜಗದೇವ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರ, ಡಿ.ಜಿ. ಸಾಗರ ಸೇರಿದಂತೆ ಮತ್ತಿತರರ ಇದ್ದರು.