ಕಲಬುರಗಿ: ಪ್ರತಿಯೊಬ್ಬರ ಜೀವನದಲ್ಲಿ ಕಲೆ ಪ್ರಮುಖ ಪಾತ್ರ ವಹಿಸುತ್ತದೆ. ಆ ಕಲೆ ನಮ್ಮ ವಾಸ್ತವ ಬದುಕಿನ ಪ್ರತಿಬಿಂಬವಾಗಿರುತ್ತದೆ. ಚಿತ್ರಕಲೆ ನಾವು ಬದುಕುವ ರೀತಿ ನಿತಿ ಮತ್ತು ಪರಂಪರೆಯನ್ನು ಎತ್ತಿ ತೋರಿಸುತ್ತದೆ. ಮತ್ತು ಕಲಾಭಿರುಚಿ ಹೊಂದಿದ ವ್ಯಕ್ತಿ ಸುಂದರ ಬದುಕಿನ ಕ್ಷಣಗಳನ್ನು ಅನಾವರಣಗೊಳಿಸುತ್ತಾನೆ. ಅದರಂತೆಯೇ ಬದುಕು ಕಟ್ಟಿಕೊಂಡು ಮಾದರಿಯಾಗುತ್ತಾನೆ. ಅಂಥ ಶಕ್ತಿ ಕಲೆಗಳಿಗೆ ಇದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಹೇಳಿದರು.
186ನೇ ವಿಶ್ವ ಛಾಯಾಗ್ರಹಣ ದಿನದಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಚಿತ್ರಕಲಾವಿದ ಖಾಜಾ ಪಟೇಲ್ ಸಾರಥ್ಯದ ಪಟೇಲ್ ಫೋಟೋ ಮತ್ತು ಆರ್ಟ್ ವಕ್ರ್ಸ ಭಂಕೂರ ಜಂಟಿ ಆಶ್ರಯದಲ್ಲಿ ನಗರದ ಕನ್ನಡ ಭವನದ ಕಲಾ ಸೌಧದಲ್ಲಿ ಮಂಗಳವಾರ ಏರ್ಪಡಿಸಿದ ಛಾಯಾಚಿತ್ರಗಳ ಪ್ರದರ್ಶನ ಹಾಗೂ ಕಾಯಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಸಮಾಜದಲ್ಲಿ ಕಲಾವಿದರು ಉಳಿದರೆ ಕಲೆ ಉಳಿಯುತ್ತದೆ. ಅಂಥ ಚಿತ್ರಕಲಾವಿದರು ಈ ಭಾಗದಲ್ಲಿ ಸಾಕಷ್ಟು ಜನರಿದ್ದರೂ ಸೂಕ್ತ ವೇದಿಕೆಗಳಿಲ್ಲದೆ ವಮಚಿತರಾಗಿದ್ದಾರೆ. ಇಂದು ಕಲೆ ಸಾಹಿತ್ಯ, ಸಂಅಸ್ಕøತಿ ಉಳಿಸಿ ಬೆಳೆಸುವಲ್ಲಿ ಕಲಾವಿದರ ಪಾತ್ರ ಹಿರಿದಾಗಿದೆ. ಅವರಿಗೆ ಸೂಕ್ತ ವೇದಿಕೆ ಕೊಟ್ಟು ಪ್ರೋತ್ಸಾಹಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು ತಮ್ಮ ರಚನಾತ್ಮಕ ಕಾರ್ಯಕ್ರಮಗಳು ಹೊಸ ದಿಕ್ಕಿನೆಡೆಗೆ ಕೊಂಡೊಯ್ಯಲಾಗುತ್ತಿದೆ ಎಂದರು.
ವಿಶ್ವಖ್ಯಾತಿಯ ಚಿತ್ರಕಲಾವಿದ ಮಹ್ಮದ್ ಅಯಾಜೋದ್ದೀನ್ ಪಟೇಲ್ ಮಾತನಾಡಿ, ವ್ಯಕ್ತಿತ್ವ ಕಟ್ಟಿಕೊಳ್ಳಲು ಕಲೆಗೆ ನೆಲೆ ಬಹಳ ಮುಖ್ಯ. ಮತ್ತು ಆ ಕಲೆಗೆ ಸೂಕ್ತ ವೇದಿಕೆ ಸಿಕ್ಕಾಗ ಹೆಚ್ಚಿನ ಬೆಲೆ ಬರುತ್ತದೆ. ಅಂಥ ಗೌರವದ ಬೆಲೆ ಕಲೆಯಿಂದ ದೊರೆಯುತ್ತದೆ. ಇಂಥ ಛಾಯಾಚಿತ್ರಗಳ ಪ್ರದರ್ಶನಗಳು ಏರ್ಪಡಿಸುವ ಮೂಲಕ ಕಲಾವಿದರಿಗೆ ಮತ್ತಷ್ಟು ಪ್ರೋತ್ಸಾಹಿಸಿದಂತಾಗಿದೆ ಎಂದರು.
ಸಂಘಟಕ ಖಾಜಾ ಪಟೇಲ್ ಕಲ್ಲಬೇನೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾ ಸೌಧ ಸಂಚಾಲಕ ಡಾ. ರೆಹಮಾನ್ ಪಟೇಲ್, ಜಿಲ್ಲಾ ಕಸಾಪ ಕಾರ್ಯದರ್ಶಿ ಶಿವರಾಜ ಅಂಡಗಿ, ಸಹ ಕಾರ್ಯದರ್ಶಿ ರಾಜೇಂದ್ರ ಮಾಡಬೂಳ ವೇದಿಕೆ ಮೇಲಿದ್ದರು.
ವಿವಿಧ ಕ್ಷೇತ್ರಗಳ ಪ್ರಮುಖರಾದ ನೀಲಕಂಠ ಮಾದುಗೋಳಕರ್, ವೀರಶೆಟ್ಟಿ ಪಾಟೀಲ, ಸೂರಜ್ ಪುರಾಣಿಕ್, ಅವಿನಾಶ ದೊಡ್ಮನಿ, ಚಂದ್ರಕಾಂತ, ಬಾಲರಾಜ ಮಾಚನೂರ, ಮಹ್ಮದ್ ಮೊಹಿಯೋದ್ದೀನ್, ಅಲಿಮೋದ್ದಿನ್ ಪಟೇಲ್, ಶಿವಕುಮಾರ ಕುಸಾಳೆ, ಅಮರೇಶ ಇಟಗಿಕರ್ ಅವರನ್ನು ಕಾಯಕ ರತ್ನ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.
ಪತ್ರಿಕಾ ಛಾಯಾಗ್ರಾಹಕರಾದ ತಾಜುದ್ದೀನ್ ಆಜಾದ್, ಆನoದ ಸಿಂಗೆ, ರಾಜು ಕೋಷ್ಟಿ, ಸುನೀಲ್ ಭಗತ್ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು.