ಕಲಬುರಗಿ: 30 ವರ್ಷದ ಶಿಕ್ಷಕ ವೃತ್ತಿ ಜೀವನದಲ್ಲಿ ಪ್ರತಿಯೊಬ್ಬರೂ ನ್ಯಾಯ ಒದಗಿಸಿದ ತೃಪ್ತಿ ನನಗಿದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯ ಪ್ರಭಾರ ಕುಲಪತಿ ಪ್ರೊ.ಗೂರು ಶ್ರೀರಾಮುಲು ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯ ಜ್ಞಾನ ಗಂಗಾ ಆವರಣ ಸಮಾಜ ವಿಜ್ಞಾನಗಳ ಕಟ್ಟಡ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ ಸೇವಾ ನಿವೃತ್ತಿ ಸನ್ಮಾನ ಸ್ವೀಕರಿಸಿ, ಅವರು ಮಾತನಾಡಿದರು.
ವೃತ್ತಿ ಜೀವನದಲ್ಲಿ ಪ್ರತಿಯೊಬ್ಬರೂ ವೃತ್ತಿ ಜೀವನ ಆರಂಭಿಸಿ ದಿನ ಮತ್ತು ನಿವೃತ್ತಿ ದಿನ ಜೀವನದ ಮರೆಯಲಾಗದ ಕ್ಷಣಗಳು ಎಂದರು.
ಶಿಕ್ಷಕರ ವೃತ್ತಿ ಪವಿತ್ರವಾಗಿದ್ದು ಅದರ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು. ಗುಲ್ಬರ್ಗ ವಿಶ್ವವಿದ್ಯಾಲಯ ಪ್ರಭಾರ ಕುಲಪತಿಯಾಗಿದ್ದು ಜೀವನದ ಅದ್ಬುತ ಗಳಿಕೆ ಎಂದು ಹೇಳಿದರು.
ಕುಲಪತಿಯಾಗಿ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಕುಲಪತಿ ಹುದ್ದೆ ಕ್ಕಿಂತಲೂ ಪ್ರಭಾರ ಕುಲಪತಿಯಾಗಿ ಕಾರ್ಯ ನಿರ್ವಹಿಸುವುದು ಬಹುಳ ಕಷ್ಟದ ಕೆಲಸ. ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕನಾಗಿ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ಮಾಡುವ ಪ್ರಯತ್ನ ಮಾಡಿದ್ದೇನೆ. ಗುಲ್ಬರ್ಗ ವಿಶ್ವವಿದ್ಯಾಲಯ ನನಗೆ ಎಲ್ಲವೂ ಕೊಟ್ಟಿದೆ ಅಂದಕ್ಕೆ ನಾನು ಚಿರಋಣಿಯಾಗಿರುತ್ತೇನೆ. ಗುವಿವಿ ಕುಲಪತಿಯಾಗಿ ಕಾನೂನಿನ ಪ್ರಕಾರ ಕೆಲಸ ಮಾಡಿದ್ದೇನೆ. ಸಿಂಡಿಕೇಟ್ ಸದಸ್ಯರು, ಪ್ರಾಧ್ಯಾಪಕರು ಮತ್ತು ಸಿಬ್ಬಂದಿ ವರ್ಗದವರ ಸಹಕಾರದಿಂದ ಕುಲಪತಿಯಾಗಿ ವೃತ್ತಿ ಜೀವನದಲ್ಲಿ ಕೊನೆಯ ದಿನಗಳು ಕಳೆದಿದ್ದು ಸಂತೋಷ ತಂದಿದೆ ಎಂದು ಭಾವುಕರಾದರು.
ದೂರದ ಬೆಂಗಳೂರಿನ ತಂದೆ ತಾಯಿ ಪತ್ನಿ ಮತ್ತು ಮಕ್ಕಳು ಬಿಟ್ಟು ಬಿಸಿಲು ನಾಡು ಕಲಬುರ್ಗಿಯಲ್ಲಿ ಸೇವೆ ಸಲ್ಲಿಸಿ ವೃತ್ತಿ ಜೀವನ ಯಶಸ್ವಿಗೊಳಿಸಿ ನಿವೃತ್ತಿ ಗೊಳ್ಳುತ್ತಿರುವುದು ಸನ್ನಿವೇಶಕ್ಕೆ ಪದಗಳೆ ಬರುತ್ತಿಲ್ಲ ಎಂದು ಗದ್ಗತಿತರಾದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಹಾನಗರ ಪಾಲಿಕೆ ಮಹಾಪೌರ ಯಲ್ಲಪ್ಪ ನಾಯ್ಕೋಡಿ ಮಾತನಾಡಿ, ಶಿಷ್ಯನ ನಿವೃತ್ತಿ ಸನ್ಮಾನ ಸಮಾರಂಭದಲ್ಲಿ ಅವರ ಗುರುಗಳು ಭಾಗವಹಿಸುತ್ತಿರುವದು ಸಂತೋಷದ ಕ್ಷಣ ಎಂದರು.
ಕೇವಲ ಪ್ರಾಧ್ಯಾಪಕರ ವೃತ್ತಿಯಿಂದ ಮಾತ್ರ ನೀವು ನಿವೃತ್ತಿ ಯಾಗುತ್ತಿರುವುದು ಆದರೆ ಶಿಕ್ಷಣ ಕ್ಷೇತ್ರದಲ್ಲಿ ನಿಮ್ಮ ಸೇವೆ ನಿರಂತರವಾಗಿ ಮುಂದುವರಿಯಬೇಕು. ನಿಮ್ಮ ಅನುಭವ ಇಡೀ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗಬೇಕು. ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣ ಮಾಡಿದಿರಿ ಹಾಗೆ ಸಮಾಜಕ್ಕೆ ನಿಮ್ಮ ಮುಂದಿನ ದಿನಗಳಲ್ಲಿ ಸೇವೆ ಅವಶ್ಯಕವಾಗಿದೆ. ಕೇವಲ ಪ್ರಾಧ್ಯಾಪಕರ ವೃತ್ತಿಯಿಂದ ಮಾತ್ರ ನಿವೃತ್ತಿ ಹೊಂದುತ್ತಿದ್ದೀರಿ. ಆದರೆ ಎಲ್ಲರ ಹೃದಯದಲ್ಲಿ ನಿವೃತ್ತಿ ಹೊಂದಿಲ್ಲ ಎಂದು ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯ ರಾಜ್ಯಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ ಆರ್. ಎಲ್.ಎಂ ಪಾಟೀಲ್, ಅಧ್ಯಕ್ಷತೆ ವಹಿಸಿದ್ದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ ಚಂದ್ರಕಾಂತ ಯಾತನೂರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲಸಚಿವ ಎಂ.ಜಿ. ಕಣ್ಣೂರು, ಸಂಗೀತಾ ಗೂರು ಶ್ರೀರಾಮುಲು, ವಿಭಾಗದ ನಿವೃತ್ತಿ ಪ್ರಾಧ್ಯಾಪಕರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ಶಾಂತಪ್ಪ ಸ್ವಾಗತಿಸಿದರು.ಸಂಶೋಧನಾ ವಿದ್ಯಾರ್ಥಿ ಮಹೇಶ್ವರಿ ನಿರೂಪಿಸಿದರು.