ಕಲಬುರಗಿ: ಸಾರ್ವಜನಿಕರ ಅರ್ಜಿ ತ್ವರಿತವಾಗಿ ಮತ್ತು ಕಾಲಮಿತಿಯಲ್ಲಿ ವಿಲೇವಾರಿ ಮಾಡಲು “ಸಕಾಲ್” ಯೋಜನೆ ಜಾರಿಗೊಳಿಸಿದ್ದು, ಇಲ್ಲಿಯೂ ಬಾಕಿ ಇಟ್ಟುಕೊಂಡರೆ ಮುಲಾಜಿಲ್ಲದೆ ಸಂಬಂಧಪಟ್ಟ ಅಧಿಕಾರಿ-ಸಿಬ್ಬಂದಿಗಳ ಸಂಬಳದಲ್ಲಿ ಕಡಿತ ಮಾಡಿ ದಂಡ ಪಾವತಿಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅಧಿಕಾರಿಗಳಿಗೆ ಎಚ್ಚರಿಕೆ ಖಡಕ್ ಸೂಚನೆ ನೀಡಿದರು.
ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಕಾಲ್, ಐ.ಪಿ.ಜಿ.ಆರ್.ಎಸ್, ಸಿ.ಸಿ.ಎಮ್.ಎಸ್., ಸಿ.ಎಂ.ಜನಸ್ಪಂದನ, ಕಲಬುರಗಿ ಕನೆಕ್ಟ್ ಅರ್ಜಿ ವಿಲೇವಾರಿ ಸಂಬಂಧ ಪ್ರಗತಿ ಪರಿಶೀಲನೆ ನಡೆಸಿದ ಅವರು, ಸಾರ್ವಜನಿಕರಿಗೆ ತ್ವರಿತವಾಗಿ ಸೇವೆ ಒದಗಿಸಲು “ಇಂದು ನಾಳೆ ಇನ್ನಿಲ್ಲ, ಹೇಳಿದ ದಿನ ತಪ್ಪೊಲ್ಲ” ಎಂಬ ಘೋಷವಾಕ್ಯದ ಕರ್ನಾಟಕ ಸಕಾಲ್ ಅಧಿನಿಯಮ-2011 ಜಾರಿಗೆ ತಂದಿದ್ದು, ಅಧಿಕಾರಿ-ಸಿಬ್ಬಂದಿಗಳು ಇದರ ಉದ್ದೇಶ ಅರಿತು ಕೆಲಸ ಮಾಡಬೇಕು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರ ಕನಸಿನ ಯೋಜನೆ ಇದಾಗಿದ್ದು, ಕೂಡಲೆ ಬಾಕಿ ಅರ್ಜಿ ವಿಲೇವಾರಿ ಮಾಡಬೇಕು. ಜಿಲ್ಲೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ 98 ಸೇರಿದಂತೆ ಇಂದಿನ ದಿನಕ್ಕೆ ವಿವಿಧ ಇಲಾಖೆಯಲ್ಲಿ ಒಟ್ಟಾರೆ 328 ಅರ್ಜಿ ವಿಲೇವಾರಿಗೆ ಬಾಕಿ ಇದ್ದು, ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಇಲಾಖಾವಾರು ಲಾಗಿನ್ ನಲ್ಲಿ ಅರ್ಜಿ ವಿಲೇವಾರಿಗೊಳಿಸಿ ಶೂನಕ್ಕೆ ತನ್ನಿ ಎಂದರು.
ಸಕಾಲ್ ನಲ್ಲಿ ಸಲ್ಲಿಕೆಯಾದ ಅರ್ಜಿಯನ್ನು 30 ದಿನದಲ್ಲಿ ವಿಲೇವಾರಿಗೆ ಸಮಯ ಇದೆ. ಈ ಅವಧಿ ಅರ್ಜಿ ವಿಲೇವಾರಿಗೆ ಸಾಕಾಗುತ್ತಿದೆ. ಕಾಲಮಿತಿಯಲ್ಲಿ ಸೇವೆ ನೀಡಲು ವಿಳಂಬವಾದಲ್ಲಿ ಸಂಬಂಧಪಟ್ಟ ಅಧಿಕಾರಿ-ಸಿಬ್ಬಂದಿಗಳ ವೇತನ ಬಡ್ತಿಗೂ ತಡೆ ಹಿಡಿಯಿರಿ ಎಂದ ಡಿ.ಸಿ. ಅವರು, ಕೆಲವೊಂದು ಇಲಾಖೆಯಲ್ಲಿ ತಾಂತ್ರಿಕ ಸಮಸ್ಯೆ ಕಾರಣ ಅರ್ಜಿ ವಿಲೇವಾರಿಗೆ ಸಮಸ್ಯೆಯಾಗುತ್ತಿರುವುದರಿಂದ ಸಕಾಲ್ ಮಿಷನ್ ನಿರ್ದೇಶಕರಿಗೆ ಪತ್ರ ಬರೆಯಬೇಕು ಎಂದರು.
ಐ.ಪಿ.ಜಿ.ಆರ್.ಎಸ್. ಬಾಕಿ ಅರ್ಜಿ ಶುಕ್ರವಾರದೊಳಗೆ ವಿಲೇವಾರಿಯಾಗದಿದ್ದಲ್ಲಿ, ಸಂಬಂಧಪಟ್ಟವರಿಗೆ ನೋಟಿಸ್ ಜಾರಿಗೊಳಿಸಿ ಎಂದು ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರಿಗೆ ಸೂಚಿಸಿದ ಡಿ.ಸಿ. ಅವರು, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಕನಸಿನ ಯೋಜನೆ “ಕಲಬುರಗಿ ಕನೆಕ್ಟ್” ನಲ್ಲಿ 95 ಅರ್ಜಿ ವಿಲೇವಾರಿಗೆ ಬಾಕಿ ಇದ್ದು, ಕೂಡಲೆ ವಿಲೇವಾರಿಗೊಳಿಸಿ ಎಂದರು.
ಕೋರ್ಟ್ ಕೇಸ್ ಮಾನಿಟರಿಂಗ್ ಸಿಸ್ಟಮ್ ನಲ್ಲಿ ಜಿಲ್ಲೆಯಾದ್ಯಂತ ವಿವಿಧ ಇಲಾಖೆಗೆ ಸಂಬಂಧಿಸಿದ 1,203 ಪ್ರಕರಣಗಳು ನ್ಯಾಯಲಯದಲ್ಲಿ ಬಾಕಿ ಇದ್ದು, ತ್ವರಿತವಾಗಿ ವಿಲೇವಾರಿಗೆ ಮುಂದಾಗಬೇಕು. ರಿಟ್ ಪಿಟೀಷನ್, ರಿಟ್ ಅಪೀಲ್ ಪ್ರಕರಣಗಳಲ್ಲಿ ಕೋರ್ಟ್ ನಲ್ಲಿ ಕೇಸ್ ದಾಖಲಾಗಿದ್ದ ಮಾಹಿತಿ ದೊರೆತ ಕೂಡಲೆ ಲಿಟಿಗೇಷನ್ ಕಂಡಕ್ಟಿಂಗ್ ಆಫೀಸರ್ ನೇಮಿಸಬೇಕು. ಸರ್ಕಾರಿ ವಕೀಲರನ್ನು ಭೇಟಿಯಾಗಿ ಇಲಾಖೆಯ ವಾದ ಮಂಡಿಸಬೇಕು. ಪ್ರಕರಣ ವಿಲೇವಾರಿ ನಂತರ ಕೋರ್ಟ್ ತೀರ್ಪಿನಂತೆ ಕ್ರಮ ವಹಿಸಲು ಇಲಾಖಾ ಮುಖ್ಯಸ್ಥರಿಗೆ ಮಾಹಿತಿ ನೀಡಬೇಕು ಎಂದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಎಸ್.ಪಿ. ಅಡ್ಡೂರು ಶ್ರೀನಿವಾಸಲು ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.