ಕಲಬುರಗಿ: ಮಾಡಬೂಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಿಗೂಢ ಲಾಭಕ್ಕಾಗಿ ವೃದ್ಧೆಯೋರ್ವಳ ಮೇಲೆ ಕಬ್ಬಿಣದ ರಾಡಿನಿಂದ ತೀವ್ರ ಹಲ್ಲೆ ನಡೆಸಿ, ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿ, ಬಂಗಾರದ ಆಭರಣಗಳು, 5,500 ರೂ. ನಗದು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ.
ರವಿವಾರ ನಗರದ ಜಿಲ್ಲಾ ಪೊಲೀಸ್ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೇಠಶಿರೂರ ಗ್ರಾಮದ ತಾನಾಜಿ ಮಾನಪ್ಪ ಬಂಡಗಾರ(25), ಅದೇ ಗ್ರಾಮದ ನಿವಾಸಿಗಳಾದ ವಿಜಯಕುಮಾರ್ ರೇವಣಸಿದ್ದಪ್ಪ ಕರೆಗೋಳ(23), ಸಂಜೀವ್ ಕುಮಾರ್ ಹನುಮಂತರಾಯ ಕರೆಗೋಳ(25), 17 ವರ್ಷದ ಬಾಲಕ ಹಾಗೂ ಅಲ್ದಿಹಾಳ ಗ್ರಾಮದ ಲಕ್ಷ್ಮಣ ಲಕ್ಷ್ಮೀಕಾಂತ್ ತಳವಾರ(24) ಬಂಧಿತ ಆರೋಪಿಗಳಾಗಿದ್ದಾರೆ ಎಂದರು.
ಪೇಠಶಿರೂರ ಗ್ರಾಮದ ಜಗದೇವಿ ರೇವಣಸಿದ್ದಪ್ಪ ಲಾಳಿ(78) ಎಂಬ ವೃದ್ಧೆ ಮೃತಪಟ್ಟಿರುವ ಬಗ್ಗೆ ಮಾಡಬೂಳ ಪ್ರಕರಣ ದಾಖಲಿಸಲಾಗಿತ್ತು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಹಾಗಾಗಿ ನಿಗೂಢ ಸಾವಿನ ಬಗ್ಗೆ ತನಿಖಾ ತಂಡ ರಚಿಸಿ, ತನಿಖೆ ನಡೆಸಲಾಗಿತ್ತು. ಅಂತಿಮವಾಗಿ ಓರ್ವ ಬಾಲಕ ಸೇರಿದಂತೆ ಐವರನ್ನು ಬಂಧಿಸಿ, ಅವರ ಬಳಿ ಸ್ವತ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಮಹೇಶ್ ಮೇಘಣ್ಣನವರ್, ಡಿವೈಎಸ್ಪಿ ಶಂಕರಗೌಡ ಪಾಟೀಲ್, ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಇಎಸ್ಐ ಗೌತಮ ಸೇರಿದಂತೆ ಇತರೆ ಅಧಿಕಾರಿ, ಸಿಬ್ಬಂದಿಯವರು ಇದ್ದರು.