ಕಲಬುರಗಿ: ಕೇಂದ್ರ ಸರ್ಕಾರ ಲಿಂಗೈಕ್ಯ ಪರಮ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರಿಗೆ ಮರಣೋತ್ತರ ಪ್ರಶಸ್ತಿ ನೀಡಿ ಕಲ್ಯಾಣ ಕರ್ನಾಟಕದ ಗುಣಮಟ್ಟದ ಶೈಕ್ಷಣಿಕ ಕ್ರಾಂತಿಯ ಪಿತಾಮಹನಿಗೆ ಗೌರವ ಸಲ್ಲಿಸಲಿ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ನಮೋಶಿ ಆಗ್ರಹಿಸಿದರು.
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಸ್ಯಾಕ್ ಸಭಾಂಗಣದಲ್ಲಿ ನಡೆದ ಅಗಸ್ಟ್ 14 ರಂದು ಲಿಂಗೈಕ್ಯರಾದ ಪರಮ ಪೂಜ್ಯ ಶರಣಬಸವಪ್ಪ ಅಪ್ಪ ಅವರಿಗೆ ಸಂಸ್ಥೆಯ ವತಿಯಿಂದ ನಡೆದ ಶೃದ್ಧಾಂಜಲಿಯ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಗತ್ತಿಗೆ ಪ್ರಜಾಪ್ರಭುತ್ವದ ಕಲ್ಪನೆ ಕೊಟ್ಟು ಪ್ರಪಂಚದ ಮೊದಲ ಪಾರ್ಲಿಮೆಂಟ್ ಪ್ರಾರಂಭವಾಗಿದ್ದು ಕಲ್ಯಾಣ ಕರ್ನಾಟಕದಲ್ಲಿ, ಅಣ್ಣ ಬಸವಣ್ಣನವರ ನೇತೃತ್ವದಲ್ಲಿ ಅಂತಹ ವಿಶ್ವ ಗುರು ಬಸವಣ್ಣ ಭಾರತದ ಶಕ್ತಿ ಕೇಂದ್ರ ಸಂಸತ್ತು ಮುಂದೆ ಇರಬೇಕೆಂದು ಬಯಸಿ ಸ್ವತಃ ಅದರ ಸಂಪೂರ್ಣ ಖರ್ಚು ವೆಚ್ಚ ಭರಿಸಿ ಸಂಸತ್ತಿನ 9ನೇ ಗೇಟ್ ಮುಂದೆ ಬಸವಣ್ಣನ ಪುತ್ಥಳಿ ಸ್ಥಾಪಿಸಿ ಕಲ್ಯಾಣ ನಾಡಿನ ಕೀರ್ತಿಯನ್ನು ಹೆಚ್ಚಿಸಿದವರು ಲಿಂಗೈಕ್ಯ ಡಾ.ಶರಣಬಸಪ್ಪ ಅಪ್ಪ ಎಂದು ಹೇಳಿದರು.
ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಕಲ್ಯಾಣ ಕರ್ನಾಟಕ ದ ಕಲಬುರಗಿಯಲ್ಲಿ ಮೊಟ್ಟ ಮೊದಲ ಬಾರಿಗೆ ಗುಣಮಟ್ಟದ ಶೈಕ್ಷಣಿಕ ಕ್ರಾಂತಿಯ ಪಿತಾಮಹ ಅಪ್ಪರವರು, ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿದ್ದಾಗಲೆ ಕಲಬುರಗಿಯಿಂದ ದೂರದ ಧಾರವಾಡಕ್ಕೆ ಹೋಗಿ ಸ್ನಾತಕೋತ್ತರ ಪದವಿ ಮಾಡುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ಪ್ರತಿಪಾದಿಸಿ 1972 ರಲ್ಲಿ ಕವಿವಿ ಸ್ನಾತಕೋತ್ತರ ಕೇಂದ್ರ ಕಲಬುರಗಿಯಲ್ಲಿ ಸ್ಥಾಪನೆ ಮಾಡುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ, ಮುಂದೆ ಇದೇ 1982 ರಲ್ಲಿ ಕಲಬುರಗಿ ಸ್ವತಂತ್ರ ವಿಶ್ವ ವಿದ್ಯಾಲಯ ಪ್ರಾರಂಭವಾಗಿ ಈ ಭಾಗದ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಮಾಡಲು ಅನುಕೂಲವಾಯಿತು. ಇವರು ಶರಣಬಸವೇಶ್ವರ ವಿದ್ಯಾ ವರ್ಧಕ ಸಂಘ ಕರ್ನಾಟಕದಲ್ಲಿ ಅಷ್ಟೇ ಅಲ್ಲ ಇಡೀ ಭಾರತವೇ ಕಲಬುರಗಿಯ ಕಡೆ ನೋಡುವಂತೆ ಮಾಡಿದರು. ಆಯಾ ಕಾಲಕ್ಕೆ ಅನೂಕೂಲವಾಗುವ ವಿನೂತನ ಶೈಕ್ಷಣಿಕ ವಿಭಾಗಗಳನ್ನು ಸ್ಥಾಪಿಸಿ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಪಾಲಿಗೆ ಬೆಳಕಾದರು ಎಂದು ಹೇಳಿದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ, ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಸಂಜಯ ಮಾಕಲ್, ವಿ ಜಿ ಮಹಿಳಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ ಮಹೇಶ್ ಗಂವ್ಹಾರ ಮಾತನಾಡಿದರು.
ಈ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ.ಕೈಲಾಸ ಪಾಟೀಲ್, ಆಡಳಿತ ಮಂಡಳಿ ಸದಸ್ಯರಾದ ಡಾ ಮಹಾದೇವಪ್ಪ ರಾಂಪೂರೆ, ಡಾ.ಶರಣಬಸಪ್ಪ ಹರವಾಳ, ಸಾಯಿನಾಥ ಪಾಟೀಲ್, ಡಾ.ಅನಿಲಕುಮಾರ ಪಟ್ಟಣ, ನಾಗಣ್ಣ ಘಂಟಿ, ಡಾ ಗುರುಲಿಂಗಪ್ಪ ಪಾಟೀಲ್, ಆಡಳಿತಾಧಿಕಾರಿ ಡಾ.ಸಿ.ಸಿ.ಪಾಟೀಲ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕ್ವಾಲಿಟಿ ಅಶ್ಯೂರೆನ್ಸ ಸೆಲ್ ಮುಖ್ಯಸ್ಥೆ ಡಾ.ಉಮಾ ರೇವೂರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.