ಕಲಬುರಗಿ: ಕಲಬುರಗಿ ರೈಲ್ವೆ ವಿಭಾಗದ ವಿವಿಧ ಬೇಡಿಕೆಗಳ ಈಡೇರಿಸಬೇಕೆಂದು ಆಗ್ರಹಿಸಿ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ ಸೋಮಣ್ಣ ಅವರಿಗೆ ಕಲ್ಯಾಣ ನಾಡು ವಿಕಾಸ ವೇದಿಕೆ ಮುಖಂಡರು ಮನವಿ ಸಲ್ಲಿಸಿ, ಒತ್ತಾಯಿಸಿದರು.
ಸಮಸ್ತ ಕಲ್ಯಾಣ ಕರ್ನಾಟಕದ ಆರ್ಥಿಕ ಅಭಿವೃದ್ಧಿಗೆ ದೊಡ್ಡ ಮಟ್ಟದಲ್ಲಿ ಅನುಕೂಲವಾಗುವ 40 ವರ್ಷಗಳಿಂದ ಬೇಡಿಕೆಯಾಗಿಯೇ ಉಳಿದಿರುವ ಕಲಬುರಗಿ ರೈಲ್ವೆ ವಿಭಾಗವನ್ನು ತುರ್ತಾಗಿ ಆರಂಭ ಮಾಡಬೇಕು. ಕಲಬುರಗಿ ಜಿಲ್ಲೆಯು ಮುಂಬೈ, ಸಿಕಿಂದ್ರಾಬಾದ ಎರಡು ರೈಲ್ವೆ ವಲಯ ಮತ್ತು ಸೋಲಾಪುರ, ಸಿಕಿಂದ್ರಾಬಾದ, ಗುಂತಕಲ ಮೂರು ರೈಲ್ವೆ ವಿಭಾಗಗಳಲ್ಲಿ ಹಂಚಿಕೆಯಾಗಿದ್ದು ಇದರಿಂದ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ, ಹೊಸ ರೈಲುಗಳ ಸಂಚಾರ ಹಾಗೂ ರೈಲು ಸೇವೆಗಳ ವಿಸ್ತರಣೆ ಮಾಡಲು ತಾಂತ್ರಿಕವಾಗಿ ಸಮಸ್ಯೆಯಾಗುತ್ತಿದೆ. ಕಲಬುರಗಿ/ತಾಜಸುಲ್ತಾನಪೂರ/ಗಾಣಗಾಪೂರ ರೈಲು ನಿಲ್ದಾಣಗಳನ್ನು ಸಿಕಿಂದ್ರಾಬಾದ ರೈಲ್ವೆ ವಲಯಕ್ಕೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು.
ಕಲಬುರಗಿ-ಲಾತೂರ ನಡುವೆ ರೈಲು ಮಾರ್ಗಕ್ಕೆ 2025ರ ಕೇಂದ್ರ ಬಜೆಟನಲ್ಲಿ ಅಂತಿಮ ಸ್ಥಳ ಪರಿಶೀಲನೆ ಆಗಿದ್ದು, ಅನುದಾನ ನೀಡುವ ಮೂಲಕ ಬೇಗ ಶಂಕುಸ್ತಾಪನೆ ಮಾಡಬೇಕು, ಕಲಬುರಗಿ ರೇಲ್ವೆ ನಿಲ್ದಾಣದಲ್ಲಿ ನೇ ಫಿಟಲೈನ ಕಾಮಗಾರಿ ಆರಂಭಿಸುಬೇಕು, ರಾಜ್ಯದ ಎಲ್ಲ ಜಿಲ್ಲೆ ಮತ್ತು ಪ್ರಮುಖ ನಗರಗಳಿಂದ ಬೆಂಗಳೂರಿಗೆ ರೈಲು ಸಂಪರ್ಕ ಇದೆ, ಆದರೆ ಸ್ವಾತಂತ್ರ ಬಂದು 78 ವರ್ಷ ಕಳೆದರು ವಿಭಾಗೀಯ ಕೇಂದ್ರ, ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿಯಿಂದ ಬೆಂಗಳೂರಿಗೆ ಮೀಸಲು ರೈಲು ಸೌಲಭ್ಯ ಇಲ್ಲ, ಅದಕ್ಕಾಗಿ ಕಲಬುರಗಿಯಿಂದ ಬೆಂಗಳೂರು/ಮೈಸೂರಿಗೆ ಹೊಸ ರೈಲು ಪ್ರಾರಂಭಿಸಬೇಕು ಎಂದು ಕೇಳಿಕೊಂಡರು.
ರಾಜ್ಯದ ಎಲ್ಲ ಪ್ರಮುಖ ರೈಲು ನಿಲ್ದಾಣಗಳು ಅಮೃತ ಭಾರತ ಯೋಜನೆ ಅಡಿಯಲ್ಲಿ ಅಭಿವೃದ್ಧಿಯಾಗಿವೆ, ಕಲಬುರಗಿ, ವಾಡಿ, ಶಹಾಬಾದ, ಗಾಣಗಾಪುರಗಳಲ್ಲಿ ಆಮೇಗತಿಯಲ್ಲಿ ಸಾಗಿರುವ ಅಮೃತ ಭಾರತ ರೈಲು ನಿಲ್ದಾಣಗಳ ಕಾಮಗಾರಿಗಳನ್ನು ಕಾಲಮೀತಿಯಲ್ಲಿ ಪೂರ್ಣಗೊಳಿಸಬೇಕು, ಕಲಬುರಗಿ-ಹೈದ್ರಾಬಾದ ಎಕ್ಸಪ್ರೇಸ್ ರೈಲು (11307/08) ಮತ್ತು ಸೊಲ್ಲಾಪುರ-ಗುಂತಕಲ ಪ್ಯಾಸೇಂಜರ (71301/02) ರೈಲುಗಳನ್ನು ಪುನಃ ಆರಂಭ ಮಾಡಬೇಕು, ಫಲಕನಾಮ-ವಾಡಿ ಎಕ್ಸಪ್ರೇಸ್ ರೈಲು (57669/70) ಮತ್ತು ಸಿಕಿಂದ್ರಾಬಾದ-ಚಿತ್ತಾಪೂರ ಮೆಮು (67759/60) ರೈಲುಗಳನ್ನು ಕಲಬುರಗಿಯವರೆಗೆ ವಿಸ್ತರಣೆ ಮಾಡಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ಎಸ್. ನಡಗೇರಿ, ಜಿಲ್ಲಾಧ್ಯಕ್ಷ ಬಾಬು ಮದನಕರ, ಮುಖಂಡರಾದ ಜೈಭೀಮ ಮಾಳಗೆ, ಪ್ರವೀಣ ಖೇಮನ್, ದತ್ತು ಜಮಾದಾರ, ಮಲ್ಲು ಸಂಕನ, ರಾಣೀಶ ಸಾವಳಗಿ, ಮಲ್ಲು ದೋರೆ ಇತರರು ಹಾಜರಿದ್ದರು.