ಕಲಬುರಗಿ: ರೈತರ ಹಿತಾಸಕ್ತಿಗಳನ್ನು ಕಾಪಾಡಲು ಒಗ್ಗಟ್ಟಿನ ಬಲವನ್ನು ತಂದುಕೊಳ್ಳುವುದು ಇಂದಿನ ಅಗತ್ಯವಾಗಿದೆ. ರೈತರು, ಕಾರ್ಮಿಕರು, ದುಡಿಯುವ ವರ್ಗ, ಮತ್ತು ಬಡವರ ಪರವಾಗಿ ಕಿಸಾನ್ ಸಭಾದ ಸತತ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಅಖಿಲ ಭಾರತ ಕಿಸಾನಸಭಾ ಜಿಲ್ಲಾಧ್ಯಕ್ಷ ಭೀಮಾಶಂಕರ ಮಾಡಿಯಾಳ ಅವರು ಹೇಳಿದರು.
ಆಳಂದ ತಾಲೂಕಿನ ಕಿಣ್ಣಿಅಬ್ಬಾಸ್ ಗ್ರಾಮದಲ್ಲಿ ಅಖಿಲ ಭಾರತ ಕಿಸಾನ್ ಸಭಾದ ಕಾರ್ಯಕ್ರಮದಲ್ಲಿ ನಡೆದ ಗ್ರಾಮ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಬಳಿಕ ಅವರು ರೈತರನ್ನುದ್ದೇಶಿಸಿ ಮಾತನಾಡಿದರು.
“ರೈತ ಸಮುದಾಯವು ತಮ್ಮ ಹಕ್ಕುಗಳನ್ನು ಪಡೆಯಲು ಮತ್ತು ನ್ಯಾಯವನ್ನು ಕಾಣಲು ಒಗ್ಗಟ್ಟಿನಿಂದ ಮುಂದುವರಿಯಬೇಕು. ಕಿಸಾನ್ ಸಭಾವು ರೈತರಿಗೆ ಆರ್ಥಿಕ, ಸಾಮಾಜಿಕ, ಮತ್ತು ರಾಜಕೀಯ ನ್ಯಾಯವನ್ನು ಒದಗಿಸಲು ಸರ್ಕಾರದ ವಿರುದ್ಧ ನಿರಂತರವಾಗಿ ಹೋರಾಡುತ್ತಿದೆ,” ಎಂದು ಹೇಳಿದರು. ರೈತರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರವು ಗಂಭೀರವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಒತ್ತಾಯಿಸಿದರು.
“ಕೃಷಿಯಲ್ಲಿ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ, ಕಡಿಮೆ ಬೆಂಬಲ ಬೆಲೆ, ಮತ್ತು ಭೂಸ್ವಾಧೀನದಂತಹ ಸಮಸ್ಯೆಗಳು ರೈತರನ್ನು ಕಂಗೆಡಿಸಿವೆ. ಇಂತಹ ಸಂದರ್ಭದಲ್ಲಿ, ಕಿಸಾನ್ ಸಭಾದಂತಹ ಸಂಘಟನೆಗಳು ರೈತರ ಧ್ವನಿಯಾಗಿ, ಸರ್ಕಾರದ ಮೇಲೆ ಒತ್ತಡ ಹೇರುವುದು ಹಾಗೂ ರೈತರಿಗೆ ಉತ್ತಮ ಬೆಲೆ, ಸಾಲ ಮನ್ನಾ, ಮತ್ತು ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸುವುದು ಕಿಸಾನ್ ಸಭಾದ ಪ್ರಮುಖ ಗುರಿಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
“ಗ್ರಾಮೀಣ ರೈತರ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲಿ ಗುರುತಿಸಿ, ಅವರಿಗೆ ತಕ್ಷಣದ ಸಹಾಯ ಒದಗಿಸುವುದು ಗ್ರಾಮ ಘಟಕದ ಗುರಿಯಾಗಿದೆ. ಈ ಘಟಕವು ರೈತರಿಗೆ ಸರ್ಕಾರಿ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ, ಅವರ ಹಕ್ಕುಗಳಿಗಾಗಿ ಹೋರಾಡಲು ಮುಂದಾಗಬೇಕು ಎಂದು ಹೇಳಿದರು.
“ಕಿಸಾನ್ ಸಭಾವು ರೈತರಿಗಾಗಿ ಹಲವು ದಶಕಗಳಿಂದ ಹೋರಾಟ ನಡೆಸುತ್ತಿದೆ. ಭೂ ಸುಧಾರಣೆ, ಕೃಷಿ ಕಾಯಿದೆಗಳ ವಿರುದ್ಧ ಹೋರಾಟ, ಮತ್ತು ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ತಾಲೂಕು ಘಟಕ ಸೇರಿ ಕಿಣ್ಣಿಅಬ್ಬಾಸ್ ಗ್ರಾಮ ಘಟಕವೂ ಈ ಧೋರಣೆಯನ್ನು ಮುಂದುವರಿಸಲಿದೆ,” ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕಿಸಾನಸಭಾ ರಾಜ್ಯ ಮಂಡಳಿಯ ಕಾಯಾಧ್ಯಕ್ಷ ಮೌಲಾ ಮುಲ್ಲಾ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಪ್ರಭುದೇವ ಯಳಸಂಗಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಈ ಸಂದರ್ಭಧಲ್ಲಿ ಕಿಸಾನಸಭಾ ಗ್ರಾಮದ ಘಟಕದ ಅಧ್ಯಕ್ಷರಾಗಿ ಮೋಹನ ಬಾಬರೆ, ಉಪಾಧ್ಯಕ್ಷ ಪ್ರಥ್ವಿರಾಜ ಸಿರೂರೆ, ಪರಮೇಶ್ವರ ಗೌಳಿ, ಕಾರ್ಯದರ್ಶಿಯನ್ನಾಗಿ ಪರಮೇಶ್ವರ ಕೂಗನೂರ, ಹಣಮಂತ ಸೋನಕಾಂಬಳೆ, ವಿಜಯಕುಮಾರ ಬಮದೆ ಮತ್ತು ಖಜಾಂಚಿಯಾಗಿ ದಸ್ತಗಿರ ಜಮಾದಾರ, ಗೌರವ ಅಧ್ಯಕ್ಷ ಸುಭಾಷ ನಿಕಂ, ಕಾನೂನು ಸಲಹೆಗಾರ ಪಂಡಿತ ಸಲಗರ ಅಲ್ಲದೆ ಸದಸ್ಯರನ್ನಾಗಿ ತಾಯರ ಅಲಿ ಕಮಲಾಪೂರೆ, ಶ್ರೀಪತಿ ಸೂರವಾಸೆ, ಮಲ್ಲಿಕಾನಾಥ ಶಖಾಪೂರೆ,ಲಕ್ಷö್ಮಣ ಕೊಳಸೂರೆ ಅವರನ್ನು ಆಯ್ಕೆಮಾಡಿ ಮುಖಂಡರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ರೈತರು ಮುಖಂಡರು ಭಾಗವಹಿಸಿದ್ದರು.